ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್ ಟೆನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಚಿನ್ನದ ಪದಕ ಗೆದ್ದಿದ್ದಾರೆ.
ಭಾನುವಾರ ನಡೆದ ಪುರುಷ ಸಿಂಗಲ್ಸ್ ಫೈನಲ್ ಹೋರಾಟದಲ್ಲಿ ನಾಲ್ಕನೇ ಶ್ರೇಯಾಂಕಿತರಾದ ಜ್ವೆರೆವ್, ಎದುರಾಳಿ ರಷ್ಯಾದ ಕೆರೆನ್ ಕ್ಯಾಚ್‌ನೋವ್ ವಿರುದ್ಧ 6-3, 6-1ರ ಅಂತರದ ಸುಲಭ ಗೆಲುವು ದಾಖಲಿಸಿದರು.
ಇದನ್ನೂ ಓದಿ:‘ಈ ಚಿನ್ನ ಫೆಡರರ್ಗೆ ಅರ್ಪಣೆ’
ರೋಜರ್ ಫೆಡರರ್, ರಫೆಲ್ ನಡಾಲ್ ಅವರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ನೊವಾಕ್ ಜೊಕೊವಿಚ್ ಅವರಂತಹ ಘಟಾನುಘಟಿ ಟೆನಿಸ್ ಪಟುಗಳನ್ನು ಮೀರಿ ನಿಂತಿರುವ ಜ್ವೆರೆವ್, ಅರ್ಹವಾಗಿಯೇ ಚಿನ್ನದ ಪದಕ ಗೆದ್ದಿದ್ದಾರೆ.
ಸೆಮಿಫೈನಲ್ ಹೋರಾಟದಲ್ಲಿ ಜ್ವೆರೆವ್ ಅವರು ಸರ್ಬಿಯಾದ ಜೊಕೊವಿಚ್ ವಿರುದ್ಧ 1-6, 6-3, 6-1ರಿಂದ ಗೆಲುವು ದಾಖಲಿಸಿದ್ದರು.
ಇದರೊಂದಿಗೆ 1988ರಲ್ಲಿ ಸ್ಟೆಫಿ ಗ್ರಾಫ್ ಬಳಿಕ ಒಲಿಂಪಿಕ್ಸ್ ಸಿಂಗಲ್ಸ್ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ ಜರ್ಮನಿಯ ಮೊದಲ ಟೆನಿಸ್ ಪಟು ಎಂಬ ಕೀರ್ತಿಗೆ ಜ್ವೆರೆವ್ ಭಾಜನರಾಗಿದ್ದಾರೆ.
24 ವರ್ಷದ ಜರ್ಮನ್ ಆಟಗಾರ ಇದುವರೆಗೆ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ 79 ನಿಮಿಷಗಳ ಹೋರಾಟದ ಅಂತ್ಯದಲ್ಲಿ ಎದುರಾಳಿಯನ್ನು ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.