ಟೋಕಿಯೊ: ತವರು ನೆಲದಲ್ಲಿ ಚಿನ್ನದ ಪದಕ ಗೆದ್ದು ಚೊಚ್ಚಲ ಒಲಿಂಪಿಕ್ಸ್ ಅನ್ನು ಸ್ಮರಣೀಯಗೊಳಿಸಿಕೊಳ್ಳುವ ಕನಸು ಕಂಡಿದ್ದ ಜಪಾನ್‌ನ ಟೆನಿಸ್ ತಾರೆ ನವೊಮಿ ಒಸಾಕಗೆ ಮಂಗಳವಾರ ಆಘಾತ ಎದುರಾಗಿದೆ.
ಮಹಿಳೆಯರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಹಣಾಹಣಿಯಲ್ಲಿ ಒಸಾಕ 1–6, 4–6 ನೇರ ಸೆಟ್‌ಗಳಿಂದ ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೌಸೊವಾ ಎದುರು ಸುಲಭವಾಗಿ ಶರಣಾದರು.
ಗ್ರ್ಯಾನ್‌ಸ್ಲಾಮ್‌ನಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದ ಒಸಾಕ, ಟೋಕಿಯೊ ಕೂಟದ ‘ಪೋಸ್ಟರ್ ಗರ್ಲ್’ ಎಂದೇ ಬಿಂಬಿತರಾಗಿದ್ದರು. ಸೆರೆನಾ ವಿಲಿಯಮ್ಸ್ ಸೇರಿದಂತೆ ಪ್ರಮುಖ ಆಟಗಾರ್ತಿಯರು ಗೈರಾಗಿದ್ದರಿಂದ ಈ ಬಾರಿಯ ಚಿನ್ನ ಒಸಾಕ ಕೊರಳಿಗೇರುವುದು ನಿಶ್ಚಿತ ಎಂದೇ ಭಾವಿಸಲಾಗಿತ್ತು.
ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಒಸಾಕ ಮೇಲೆ ನಿರೀಕ್ಷೆಯ ಭಾರ ಹೆಚ್ಚಿತ್ತು. ಹೀಗಾಗಿ ಈ ಯುವ ತಾರೆ ಹೆಚ್ಚು ಒತ್ತಡಕ್ಕೆ ಒಳಗಾದಂತೆ ಕಂಡರು. ಗ್ರೌಂಡ್‌ಸ್ಟ್ರೋಕ್ ಹೊಡೆತಗಳನ್ನು ಬಾರಿಸುವಲ್ಲಿ ಪದೇ ಪದೇ ಎಡವಿದರು.
ಎಡಗೈ ಆಟಗಾರ್ತಿ, ವಿಶ್ವ ರ‍್ಯಾಂಕಿಂಗ್‌ನಲ್ಲಿ 42ನೇ ಸ್ಥಾನದಲ್ಲಿರುವಮಾರ್ಕೆಟಾ, ಡ್ರಾಪ್ ಶಾಟ್ ವಿನ್ನರ್‌ಗಳನ್ನು ಸಿಡಿಸಿ ಸಂಭ್ರಮಿಸಿದರು.
ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯಗಳಲ್ಲಿ ಕೀ ನಿಶಿಕೋರಿ 7-6, 3-6, 6-1ರಿಂದ ಅಮೆರಿಕದ ಮಾರ್ಕಸ್ ಗಿರನ್ ಎದುರೂ, ಸ್ಟೆಫಾನೊ ಸಿಸಿಪಸ್ 6–3, 6–4ರಲ್ಲಿ ಫ್ರಾನ್ಸೆಸ್ ಟಿಯಾಫೊ ಮೇಲೂ ಜಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.