ಬೆಂಗಳೂರು: ಕರ್ನಾಟಕದ ವೀರಸಾಮಿ, ಇಲ್ಲಿ ನಡೆಯುತ್ತಿರುವ ಕೆಎಸ್‌ಎಲ್‌ಟಿಎ–ಎಐಟಿಎ ವ್ಹೀಲ್‌ಚೇರ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ಗುರುವಾರ ನಡೆದ ಪಂದ್ಯಗಳಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗಗಳ ಅಗ್ರ ಶ್ರೇಯಾಂಕಿತರು ನಾಲ್ಕರ ಘಟ್ಟ ತಲುಪಿದರು.
ಎರಡನೇ ಶ್ರೇಯಾಂಕದ ವೀರಸಾಮಿ ಶೇಖರ್ ಕರ್ನಾಟಕದವರೇ ಆದ ಅನಿಲ್ ಅಲ್ಮೇಡಾ ಅವರನ್ನು 9–1ರಲ್ಲಿ ಮಣಿಸಿದರು. ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ಹಂತದ ಇತರ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕಿತ, ತಮಿಳುನಾಡಿನ ದುರೈ ಮರಿಯಪ್ಪ ಉತ್ತರಪ್ರದೇಶದ ಇಂದ್ರಜೀತ್ ಪಾಂಡೆ ವಿರುದ್ಧ 9–5ರಲ್ಲಿ, ನಾಲ್ಕನೇ ಶ್ರೇಯಾಂಕಿತ ತಮಿಳುನಾಡಿನ ಸುಬ್ರಮಣಿಯನ್ ಬಾಲಚಂದ್ರ ಕರ್ನಾಟಕದ ಎಚ್.ಮಧುಸೂದನ್ ವಿರುದ್ಧ 9–3ರಲ್ಲಿ, ಮೂರನೇ ಶ್ರೇಯಾಂಕಿತ ತಮಿಳುನಾಡಿನ ಕರುಣಾಕರನ್ ಕಾರ್ತಿಕ್ ಕರ್ನಾಟಕದ ಶಿವಪ್ರಸಾದ್ ವಿರುದ್ಧ 9–3ರಲ್ಲಿ ಗೆಲುವು ಸಾಧಿಸಿದರು.
ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕದ ಅಗ್ರ ಶ್ರೇಯಾಂಕಿತೆ ಪ್ರತಿಮಾ ರಾವ್ ಕರ್ನಾಟಕದವರೇ ಆದ ಎಂ.ಕೆ.ಮುಬೀನಾ ಅವರನ್ನು 9–0ಯಿಂದ, ಕರ್ನಾಟಕದ ಮೂರನೇ ಶ್ರೇಯಾಂಕಿತೆ ನಳಿನ ಕುಮಾರಿ ಕರ್ನಾಟಕದ ಕೆ.ಶಿಲ್ಪಾ ವಿರುದ್ಧ 9–3ರಲ್ಲಿ, ಕರ್ನಾಟಕದ ಆರನೇ ಶ್ರೇಯಾಂಕಿತೆ ಎ.ಸುಧಾ ತಮಿಳುನಾಡಿನ ರೂತ್ ರಾಜೇಶ್ವರಿ ಅವರನ್ನು 9–7ರಲ್ಲಿ ಮತ್ತು ಕರ್ನಾಟಕದ ಕೆ.ಪಿ.ಶಿಲ್ಪಾ ತಮಿಳುನಾಡಿನ ಶೇರಂತಿ ಅವರನ್ನು 9–0ಯಿಂದ ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.