ADVERTISEMENT

ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ನಾಲ್ಕನೇ ಸುತ್ತಿಗೆ ಸಿನ್ನರ್

ಎಪಿ
Published 1 ಸೆಪ್ಟೆಂಬರ್ 2024, 20:53 IST
Last Updated 1 ಸೆಪ್ಟೆಂಬರ್ 2024, 20:53 IST
<div class="paragraphs"><p>Jannik Sinner</p></div>

Jannik Sinner

   

ನ್ಯೂಯಾರ್ಕ್: ಅಗ್ರ ಶ್ರೇಯಾಂಕದ ಯಾನಿಕ್ ಸಿನ್ನರ್‌ ಅವರು ಆಸ್ಟ್ರೇಲಿಯಾದ ಎದುರಾಳಿ ಕ್ರಿಸ್‌ ಒ‘ಕಾನೆಲ್‌ ಅವರಿಗೆ ಪ್ರತಿರೋಧ ತೋರಲು ಕೊಂಚವೂ ಅವಕಾಶ ನೀಡದೇ ನೇರ ಸೆಟ್‌ಗಳಿಂದ ಗೆದ್ದು ಅಮೆರಿಕ ಓಪನ್ ಟೆನಿಸ್‌ ಟೂರ್ನಿಯ ನಾಲ್ಕನೇ ಸುತ್ತಿಗೆ ದಾಪುಗಾಲಿಟ್ಟರು.

ಹಾಲಿ ಚಾಂಪಿಯನ್ ನೊವಾಕ್‌ ಜೊಕೊವಿಚ್‌ ಮತ್ತು ಮೂರನೇ ಶ್ರೇಯಾಂಕದ ಕಾರ್ಲೊಸ್‌ ಅಲ್ಕರಾಜ್ ಅವರು ತಮಗಿಂತ ಕೆಳ ಕ್ರಮಾಂಕದ ಆಟಗಾರರೆದುರು ಹಿಮ್ಮೆಟ್ಟಿದ ನಂತರ ಸಿನ್ನರ್‌ ಅಂಥ ಯಾವುದೇ ಸಾಧ್ಯತೆಗಳಿಗೆ ಅವಕಾಶ ಕಲ್ಪಿಸಲಿಲ್ಲ. ಆರ್ಥರ್ ಆ್ಯಷ್‌ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಎರಡು ಗಂಟೆಗಳ ಒಳಗೆ 6–1, 6–4, 6–2 ರಲ್ಲಿ ಒ‘ಕಾನೆಲ್ ಅವರನ್ನು ಮಣಿಸಿದರು.

ADVERTISEMENT

ಸರ್ಬಿಯಾದ ಜೊಕೊವಿಚ್‌ ಮತ್ತು ಸ್ಪೇನ್‌ನ ಅಲ್ಕರಾಜ್ ನಿರ್ಗಮನದ ನಂತರ ಫ್ಲಷಿಂಗ್ ಮಿಡೊದಲ್ಲಿ ಸಿನ್ನರ್ ಅವರು ಪ್ರಶಸ್ತಿಗೆ ನೆಚ್ಚಿನ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಸಿನ್ನರ್ ಪಂದ್ಯದಲ್ಲಿ 15 ಏಸ್‌ಗಳನ್ನು ಸಿಡಿಸಿದರು. ಅವರು ಬ್ರೇಕ್‌ ಪಾಯಿಂಟ್‌ ಎದುರಿಸಲಿಲ್ಲ. ಓ’ಕಾನೆಲ್ ಅವರ 12 ಸರ್ವ್‌ ಗೇಮ್‌ಗಳಲ್ಲಿ ಐದನ್ನು ಸಿನ್ನರ್ ಗೆದ್ದರು.

ಜೊಕೊವಿಚ್‌ ಅವರು ಅಲೆಕ್ಸೈ ಪಾಪಿರಿನ್ ಅವರಿಗೆ ಮಣಿದರೆ, ಅಲ್ಕರಾಜ್ ಅವರು ಡಚ್‌ ಆಟಗಾರ ಬೊಟಿಕ್ ಫನ್‌ಡ ಶೋಪ್‌ಶುಪ್ ಅವರಿಗೆ ಶರಣಾಗಿದ್ದರು.

ಅಮೆರಿಕ ಓಪನ್ ಮಾಜಿ ಚಾಂಪಿಯನ್ನರಲ್ಲಿ ಕಣದಲ್ಲಿರುವ ಏಕೈಕ ಆಟಗಾರ ಎಂದರೆ 2021ರ ವಿಜೇತ ಡೇನಿಯಲ್ ಮೆಡ್ವೆಡೇವ್‌ ಮಾತ್ರ. ಅವರು ಮೂರನೇ ಸುತ್ತಿನಲ್ಲಿ 31ನೇ ಕ್ರಮಾಂಕದ ಫ್ಲಾವಿಯೊ ಕೊಬೊಲ್ಲಿ ಅವರನ್ನು 6–3, 6–4, 6–3 ರಿಂದ ಸೋಲಿಸಿದರು. ಐದನೇ ಶ್ರೇಯಾಂಕದ ಅವರ ಮುಂದಿನ ಎದುರಾಳಿ ನುನೊ ಬೊರ್ಗೆಸ್‌. ಇನ್ನೊಂದು ಪಂದ್ಯದಲ್ಲಿ ನುನೊ ಸೋಲಿನ ಸುಳಿಯಿಂದ ಚೇತರಿಸಿ 6–7 (5), 6–1, 3–6, 7–6 (6), 6–0 ಯಿಂದ ಜಾಕುಬ್ ಮೆನ್ಸಿಕ್ ಅವರನ್ನು ಸೋಲಿಸಿದರು.

ಶ್ವಾಂಟೆಕ್‌ಗೆ ಜಯ: ವಿಶ್ವದ ಅಗ್ರಮಾನ್ಯ ಆಟಗಾರ್ತಿ ಇಗಾ ಶ್ವಾಂಟೆಕ್‌ 6–4, 6–2 ರಿಂದ ಅನಸ್ತೇಸಿಯಾ ಪಾವ್ಲಿಚೆಂಕೊವಾ ಅವರನ್ನು ಹಿಮ್ಮೆಟ್ಟಿಸಿದರು. ಶ್ವಾಂಟೆಕ್ ಎರಡು ವರ್ಷ ಹಿಂದೆ ಇಲ್ಲಿ ಚಾಂಪಿಯನ್ ಆಗಿದ್ದರು. ಇಟಲಿಯ ಜಾಸ್ಮಿನ್ ಪಾವೊಲಿನಿ ಇನ್ನೊಂದು ಪಂದ್ಯದಲ್ಲಿ 6–3, 6–4 ರಿಂದ 30ನೇ ಶ್ರೇಯಾಂಕದ ಯುಲಿಯಾ ಪುಟಿಂಟ್ಸೆವಾ ಅವರನ್ನು ಸೋಲಿಸಿ ಮೊದಲ ಬಾರಿ ನಾಲ್ಕನೇ ಸುತ್ತನ್ನು ತಲುಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.