ಬೆಂಗಳೂರು: ಅಪೂರ್ವ ಆಟ ಆಡಿದ ಕರ್ನಾಟಕದ ಪ್ರತಿಮಾ ಎನ್.ರಾವ್, ಅಖಿಲ ಭಾರತ ಎಐಟಿಎ ರ‍್ಯಾಂಕಿಂಗ್ ಗಾಲಿ ಕುರ್ಚಿ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಕಬ್ಬನ್ ಪಾರ್ಕ್‌ನಲ್ಲಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಳದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಪ್ರತಿಮಾ 7–6, 6–3 ನೇರ ಸೆಟ್‌ಗಳಿಂದ ಕರ್ನಾಟಕದವರೇ ಆದ ಕೆ.ಪಿ. ಶಿಲ್ಪಾ ಅವರನ್ನು ಸೋಲಿಸಿದರು. ಇದರೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ‘ಹ್ಯಾಟ್ರಿಕ್’ ಪ್ರಶಸ್ತಿ ಗೆದ್ದ ಹಿರಿಮೆಗೆ ಭಾಜನರಾದರು. ಹಿಂದಿನ ಎರಡು ಆವೃತ್ತಿಗಳಲ್ಲೂ ಅವರು ಚಾಂಪಿಯನ್ ಆಗಿದ್ದರು.
ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಪ್ರತಿಮಾ ಮೊದಲ ಸೆಟ್‌ನಲ್ಲಿ ಎದುರಾಳಿಯಿಂದ ಕಠಿಣ ಸ್ಪರ್ಧೆ ಎದುರಿಸಿದರು. ಉಭಯ ಆಟಗಾರ್ತಿಯರೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದರಿಂದ 6–6 ಸಮಬಲ ಕಂಡುಬಂತು. ‘ಟೈ ಬ್ರೇಕರ್’ನಲ್ಲಿ ದಿಟ್ಟ ಆಟ ಆಡಿದ ಪ್ರತಿಮಾ ಜಯದ ತೋರಣ ಕಟ್ಟಿದರು.
ಎರಡನೇ ಸೆಟ್‌ನ ಮೊದಲ ಆರು ಗೇಮ್‌ಗಳಲ್ಲಿ ತುರುಸಿನ ಪೈಪೋಟಿ ಕಂಡುಬಂತು. ನಂತರ ಪಾರಮ್ಯ ಮೆರೆದ ಪ್ರತಿಮಾ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.
ಕಾರ್ತಿಕ್‌ಗೆ ಕಿರೀಟ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ತಮಿಳುನಾಡಿನ ಕೆ.ಕಾರ್ತಿಕ್ ಕಿರೀಟ ಮುಡಿಗೇರಿಸಿಕೊಂಡರು.
ಐದನೇ ಶ್ರೇಯಾಂಕದ ಆಟಗಾರ ಕಾರ್ತಿಕ್ ಫೈನಲ್ ಹೋರಾಟದಲ್ಲಿ 7–6, 6–4ರಿಂದ ಎರಡನೇ ಶ್ರೇಯಾಂಕದ ಆಟಗಾರ ಬಾಲಚಂದರ್ ಸುಬ್ರಮಣಿಯನ್‌ಗೆ ಆಘಾತ ನೀಡಿದರು.ಪುರುಷರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ಶೇಖರ್ ವೀರಸ್ವಾಮಿ ಮತ್ತು ಬಾಲಚಂದರ್ ಸುಬ್ರಮಣಿಯನ್ ಚಾಂಪಿಯನ್ ಆದರು.
ಫೈನಲ್‌ನಲ್ಲಿ ಶೇಖರ್ ಮತ್ತು ಬಾಲಚಂದರ್ 6–0, 6–1ರಿಂದ ಡಿ.ಮರಿಯಪ್ಪನ್ ಮತ್ತು ಕೆ.ಕಾರ್ತಿಕ್ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.