ಲಂಡನ್ (ಎಎಫ್‌ಪಿ): ಅಮೆರಿಕದ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ಮುಂಬರಲಿರುವ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 25ನೇ ಶ್ರೇಯಾಂಕ ಪಡೆದಿದ್ದಾರೆ. ಬ್ರಿಟನ್ ಆಟಗಾರ ಆ್ಯಂಡಿ ಮರ್ರೆ ಗಾಯಗೊಂಡಿದ್ದು, ಈ ಟೂರ್ನಿಯಲ್ಲಿ ಆಡುತ್ತಿಲ್ಲ.
ಸೆರೆನಾ ಅವರು ಏಳು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದಾರೆ. ಹೋದ ವರ್ಷ ಹೆಣ್ಣುಮಗುವಿಗೆ ಜನ್ಮ ನೀಡಿದ್ದ ಸೆರೆನಾ ಬಹಳಷ್ಟು ಟೂರ್ನಿಗಳಲ್ಲಿ ಆಡಿರಲಿಲ್ಲ. ಹೋದ ತಿಂಗಳು ನಡೆದಿದ್ದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅವರು ಕಣಕ್ಕಿಳಿದಿದ್ದರು. ‘ಕ್ಯಾಟ್ ಸೂಟ್’ ಧರಿಸಿ ಆಡಿದ್ದು ದೊಡ್ಡ ಸುದ್ದಿಯಾಗಿತ್ತು. ಆ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಅವರು ಮರಿಯಾ ಶರಪೋವಾ ಅವರನ್ನು ಎದುರಿಸಬೇಕಿತ್ತು. ಆದರೆ, ಸೆರೆನಾ ಅವರು ಭುಜದ ನೋವಿನಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದರು.
36 ವರ್ಷದ ಸೆರೆನಾ ಅವರು ಗಾಯದಿಂದ ಚೇತರಿಸಿಕೊಂಡಿದ್ದು ವಿಂಬಲ್ಡನ್‌ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
ರೋಮೆನಿಯಾದ ಸಿಮೋನಾ ಹಲೆಪ್ ಅವರು ಮಹಿಳೆಯರ ವಿಭಾಗದಲ್ಲಿ ಅಗ್ರಶ್ರೇಯಾಂಕ ಗಳಿಸಿದ್ದಾರೆ. ಪುರುಷರ ವಿಭಾಗದಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಮೊದಲ ಸ್ಥಾನ ಪಡೆದಿದ್ದಾರೆ.
ವಿಂಬಲ್ಡನ್ ಟೂರ್ನಿ ಸಂಘಟಿಸುವ ಆಲ್ ಇಂಗ್ಲೆಂಡ್ ಕ್ಲಬ್ ಡಬ್ಲ್ಯುಟಿಎ ರ‍್ಯಾಂಕಿಂಗ್ ಪಟ್ಟಿಯಲ್ಲಿರು ಶ್ರೇಯಾಂಕವನ್ನು ಪರಿಗಣಿಸಿ ಡ್ರಾ ಪ್ರಕಟಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.