ADVERTISEMENT

ವಿಂಬಲ್ಡನ್‌ ಚಾಂಪಿಯನ್‌ಷಿಪ್‌: ಮೆಡ್ವೆಡೇವ್ ಶುಭಾರಂಭ, ಮೂರನೇ ಸುತ್ತಿಗೆ ಇಗಾ ಶ್ವಾಂಟೆಕ್

ರಾಯಿಟರ್ಸ್
Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಡೇನಿಯಲ್‌ ಮೆಡ್ವೆಡೆವ್‌ ಆಟದ ವೈಖರಿ –ಎಎಫ್‌ಪಿ ಚಿತ್ರ
ಡೇನಿಯಲ್‌ ಮೆಡ್ವೆಡೆವ್‌ ಆಟದ ವೈಖರಿ –ಎಎಫ್‌ಪಿ ಚಿತ್ರ   

ಲಂಡನ್‌: ವೈಲ್ಡ್‌ ಕಾರ್ಡ್ ಪ್ರವೇಶ ಪಡೆದಿದ್ದ ಯುವ ಆಟಗಾರ ಆರ್ಥರ್‌ ಫೆರಿ ಅವರ ಹೋರಾಟವನ್ನು ನೇರ ಸೆಟ್‌ಗಳಿಂದ ಬದಿಗೊತ್ತಿದ ಮೂರನೇ ಶ್ರೇಯಾಂಕದ ಡೇನಿಯಲ್‌ ಮೆಡ್ವೆಡೆವ್ ವಿಂಬಲ್ಡನ್‌ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿಗೆ ಮುನ್ನಡೆದರು.

ಈ ವರ್ಷ ಐದು ಟೂರ್ನಿಗಳನ್ನು ಗೆದ್ದಿರುವ ರಷ್ಯದ ಆಟಗಾರ ಬುಧವಾರ 7–5, 6–4 6–3 ರಿಂದ 391ನೇ ಕ್ರಮಾಂಕದ ಆತಿಥೇಯ ಆಟಗಾರ ಫೆರಿ ಅವರನ್ನು ಸೋಲಿಸಿದರು. ಕಳೆದ ವರ್ಷ ಈ ಟೂರ್ನಿಯಲ್ಲಿ ರಷ್ಯದ ಆಟಗಾರರಿಗೆ ಪ್ರವೇಶ ನಿಷೇಧಿಸಲಾಗಿತ್ತು. ವಿಶ್ರ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಮೆಡ್ವೆಡೆವ್‌ ಕೂಡ ಈ ಬಾರಿ ಪ್ರಶಸ್ತಿಗೆ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಮೊದಲ ಸೆಟ್‌ನಲ್ಲಿ ಉತ್ತಮ ಸರ್ವ್‌ ಮತ್ತು ವಾಲಿಗಳಿಂದ ಗಮನ ಸೆಳೆದ 20 ವರ್ಷದ ಫೆರಿ ಒಂದು ಹಂತದಲ್ಲಿ 5–5ರಲ್ಲಿ ಸ್ಕೋರ್‌ ಸಮ ಮಾಡಿದ್ದರು. ಈ ಸಂದರ್ಭದಲ್ಲಿ ಮಳೆ ಕೆಲಕಾಲ ಆಟಕ್ಕೆ ವಿರಾಮ ನೀಡಿತು.  ವಿರಾಮದ ನಂತರ, 27 ವರ್ಷದ ಮೆಡ್ವೆಡೆವ್‌ 7–5ರಲ್ಲಿ ಸೆಟ್‌ ಪಡೆದು ಮೇಲುಗೈ ಸಾಧಿಸಿದರು.

ADVERTISEMENT

ಮೂರನೇ ಸುತ್ತಿಗೆ ಶ್ವಾಂಟೆಕ್

ಉತ್ತಮ ಲಯದಲ್ಲಿರುವ ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್‌, ಸೆಂಟರ್‌ ಕೋರ್ಟ್‌ನಲ್ಲಿ ನಡೆದ  ಮಹಿಳೆಯರ ಸಿಂಗಲ್ಸ್‌ ಎರಡನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಸಾರಾ ಸೊರಿಬೆಸ್‌ ಟೊರ್ಮೊ ಅವರನ್ನು 6–0, 6–2 ರಿಂದ ಬಗ್ಗುಬಡಿದು ಮೂರನೇ ಸುತ್ತಿಗೆ ದಾಪುಗಾಲಿಟ್ಟರು.

2021ರಲ್ಲಿ ನಾಲ್ಕನೇ ಸುತ್ತಿಗೆ ತಲುಪಿದ್ದೇ ವಿಂಬಲ್ಡನ್‌ನಲ್ಲಿ ಪೋಲೆಂಡ್‌ ಆಟಗಾರ್ತಿಯ ಇದುವರೆಗಿನ ನಾಲ್ಕು ಯತ್ನಗಳಲ್ಲಿ ಉತ್ತಮ ಸಾಧನೆಯಾಗಿದೆ.

ಮಹಿಳೆಯರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಉಕ್ರೇನ್‌ನ ಮಾರ್ತಾ ಕೋಸ್ಟಿಕ್‌ 0–6, 7–5, 6–2 ರಿಂದ ಎಂಟನೇ ಶ್ರೇಯಾಂಕದ ಮರಿಯಾ ಸಕ್ಕರಿ ವಿರುದ್ಧ ಅನಿರೀಕ್ಷಿತ ಜಯಗಳಿಸಿ ಎರಡನೇ ಸುತ್ತನ್ನು ತಲುಪಿದರು.

ಮಂಗಳವಾರ ಏಳನೇ ಶ್ರೇಯಾಂಕದ ಕೋಕೊ ಗಾಫ್‌ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದರು. ಅಮೆರಿಕದ ಇನ್ನೊಬ್ಬ ಆಟಗಾರ್ತಿ ಸೋಫಯಾ ಕೆನಿನ್‌ 6–4, 2–6, 6–4 ರಿಂದ ಗಾಫ್ ಮೇಲೆ ಜಯಗಳಿಸಿದ್ದರು. 2020ರ ಆಸ್ಟ್ರೇಲಿಯಾ ಓಪನ್ ಚಾಂಪಿಯನ್‌ ಆಗಿದ್ದ ಕೆನಿನ್‌ ಒಂದು ಹಂತದಲ್ಲಿ ವಿಶ್ವ ಕ್ರಮಾಂದಕದಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.