ಲಂಡನ್: ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಬಹಳ ಪ್ರಯಾಸದಿಂದ ಫ್ರಾನ್ಸ್‌ನ ಫ್ರಾನ್ಸೆಸ್ ಟಿಯಾಫೊ ಅವರ ಸ್ಫೂರ್ತಿಯು ತ ಹೋರಾಟವನ್ನು ಬದಿಗೊತ್ತಿ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್ಸ್‌ನ ಪುರುಷರ ಸಿಂಗಲ್ಸ್ 16ರ ಸುತ್ತಿಗೆ ತಲುಪಿದರು.
ಸೆಂಟರ್‌ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಈ ಪಂದ್ಯವನ್ನು ಮೂರನೇ ಶ್ರೇಯಾಂಕದ ಅಲ್ಕರಾಜ್ 5–7, 6–2, 4–6, 7–6 (7–2), 6–2 ರಿಂದ ಗೆಲ್ಲಲು ಹರಸಾಹಸಪಟ್ಟರು. ಮೊದಲ ಮೂರು ಸೆಟ್‌ಗಳ ನಂತರ ಹಿನ್ನಡೆಯಲ್ಲಿದ್ದ ಸ್ಪೇನ್‌ನ ಆಟಗಾರ ನಂತರ ನಿಧಾನವಾಗಿ ಲಯಕ್ಕೆ ಮರಳತೊಡಗಿ 29ನೇ ಶ್ರೇಯಾಂಕದ ಆಟಗಾರನ ವಿರುದ್ಧ ಹಿಡಿತ ಸಂಪಾದಿಸಿದರು. ಅಷ್ಟು ಹೊತ್ತಿಗೆ ಟಿಯಾಫೊ ಅವರಲ್ಲಿ ಆಯಾಸವೂ ಕಾಣತೊಡಗಿತು.
ಡ್ರಾಪ್ ಶಾಟ್ ಮೂಲಕ ಅಲ್ಕರಾಜ್ ಪಂದ್ಯ ಗೆದ್ದ ತಕ್ಷಣ, ಇಬ್ಬರೂ ಪರಸ್ಪರ ಆಲಂಗಿಸಿಕೊಂಡರು. ಪ್ರೇಕ್ಷಕರೂ ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಸುನ್ ಯಶಸ್ಸಿನ ಓಟ: ಗೆಲುವಿನ ಓಟ ಮುಂದುವರಿಸಿದ ಶ್ರೇಯಾಂಕರಹಿತ ಆಟಗಾರ್ತಿ ಲುಲು ಸುನ್ ಅವರು ವಿಂಬಲ್ಡನ್ ಚಾಂಪಿಯನ್‌ಷಿಪ್ಸ್ ಮಹಿಳೆಯರ ಸಿಂಗಲ್ಸ್ 16ರ ಸುತ್ತನ್ನು ತಲುಪಿದ ನ್ಯೂಜಿಲೆಂಡ್‌ನ ಮೊದಲ ಆಟಗಾರ್ತಿ ಎನಿಸಿದರು. ಮೂರನೇ ಸುತ್ತಿನ ಪಂದ್ಯದಲ್ಲಿ ಲುಲು ಸುನ್ 7–6 (7–4), 7–6 (8–6) ರಲ್ಲಿ ನೇರ ಸೆಟ್‌ಗಳಿಂದ ಚೀನಾದ ಝು ಲಿನ್ ಅವರನ್ನು ಸೋಲಿಸಿದರು.
ಅರ್ಹತಾ ಸುತ್ತಿನ ಮೂಲಕ ಪ್ರಧಾನ ಟೂರ್ನಿಗೆ ಪ್ರವೇಶ ಪಡೆದಿದ್ದ 23 ವರ್ಷ ವಯಸ್ಸಿನ ಸುನ್, ಮೊದಲ ಸುತ್ತಿನಲ್ಲಿ ಎಂಟನೇ ಶ್ರೇಯಾಂಕದ ಆಟಗಾರ್ತಿ ಹಾಗೂ ಆಸ್ಟ್ರೇಲಿಯಾ ಓಪನ್ ರನ್ನರ್ ಅಪ್ ಝೆಂಗ್ ಕ್ವಿನ್‌ವೆನ್ ಅವರನ್ನು ಪರಾಭವಗೊಳಿಸಿ ಉತ್ತಮ ಆರಂಭ ಪಡೆದಿದ್ದರು. ಸುನ್ ವಿಶ್ವ ಕ್ರಮಾಂಕದಲ್ಲಿ 123 ನೇ ಸ್ಥಾನದಲ್ಲಿದ್ದಾರೆ.
ಏಳನೇ ಶ್ರೇಯಾಂಕದ ಜಾಸ್ಮಿನ್ ಪಾವೊಲಿನಿ (ಇಟಲಿ) ಅವರು 7–6 (7–4), 6–1 ರಿಂದ ಬಿಯಾಂಕ ಆಂಡ್ರೀಸ್ಕ್ಯು (ಕೆನಡಾ) ಅವರನ್ನು ಮಣಿಸಿದರು. 12ನೇ ಶ್ರೇಯಾಂಕದ ಮ್ಯಾಡಿಸನ್ ಕೀಸ್ (ಅಮೆರಿಕ) 6–4, 6–3 ರಿಂದ 18ನೇ ಶ್ರೇಯಾಂಕದ ಮಾರ್ತಾ ಕೊಸ್ಟಿಯುಕ್ ಅವರನ್ನು ಹಿಮ್ಮೆಟ್ಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.