ADVERTISEMENT

ವಿಂಬಲ್ಡನ್; ನಾಲ್ಕನೇ ಸುತ್ತಿಗೆ ಸಿನ್ನರ್, ಜ್ವೆರೇವ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 22:04 IST
Last Updated 6 ಜುಲೈ 2024, 22:04 IST
ವಿಂಬಲ್ಡನ್ ಲೋಗೊ
ವಿಂಬಲ್ಡನ್ ಲೋಗೊ   

ಲಂಡನ್: ಇಟಲಿಯ ಯಾನಿಕ್ ಸಿನ್ನರ್  ವಿಂಬಲ್ಡನ್ ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕನೇ ಸುತ್ತಿಗೆ ಲಗ್ಗೆ ಹಾಕಿದರು.

ಸೆಂಟರ್‌ ಕೋರ್ಟ್‌ನಲ್ಲಿ ಶುಕ್ರವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಯಾನಿಕ್ 6–1, 6–4, 6–2ರಿಂದ ಸರ್ಬಿಯಾದ ಮಿಯಾಮಿರ್ ಕೆಮಾನೊವಿಚ್ ವಿರುದ್ಧ ಗೆದ್ದರು.

ಸಿನ್ನರ್ ಅವರ ಪ್ರಬಲ ಆಟದ ಮುಂದೆ ಮಿಯಾಮಿರ್ ಅವರು ಯಾವುದೇ ಹಂತದಲ್ಲಿಯೂ ಪೈಪೋಟಿಯೊಡ್ಡುವಲ್ಲಿ ಸಫಲರಾಗಲಿಲ್ಲ. ಮೂರು ಸೆಟ್‌ಗಳಲ್ಲಿಯೂ ಯಾನಿಕ್ ಮೇಲುಗೈ ಸಾಧಿಸಿದರು.

ADVERTISEMENT

ಮೂರನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ 6–4, 6–4, 7–6ರಿಂದ ಇಂಗ್ಲೆಂಡ್‌ನ ಕ್ಯಾಮರೂನ್ ನೋರಿ ವಿರುದ್ಧ ಜಯಿಸಿದರು.

ಭಾಂಬ್ರಿ–ಒಲಿವೆಟ್ಟಿ ಜೋಡಿಗೆ ಸೋಲು: ಭಾರತದ ಯೂಕಿ ಭಾಂಬ್ರಿ ಮತ್ತು ಅವರ ಜೊತೆಗಾರ ಅಲ್ಬಾನೊ ಒಲಿವೆಟ್ಟಿ ವಿಂಬಲ್ಡನ್‌ ಚಾಂಪಿಯನ್‌ಷಿಪ್‌ನಿಂದ ಶುಕ್ರವಾರ ಹೊರಬಿದ್ದಿದ್ದಾರೆ.

ಪುರುಷರ ಡಬಲ್ಸ್‌ ಎರಡನೇ ಸುತ್ತಿನಲ್ಲಿ ಇಂಡೋ–ಫ್ರೆಂಚ್‌ ಜೋಡಿಯು 6-4, 4-6, 3-6 ರಿಂದ ಎಂಟನೇ ಶ್ರೇಯಾಂಕದ ಜರ್ಮನಿಯ ಕೆವಿನ್ ಕ್ರಾವಿಟ್ಜ್ ಮತ್ತು ಟಿಮ್ ಪುಯೆಟ್ಜ್ ಜೋಡಿ ವಿರುದ್ಧ ಸೋಲನುಭವಿಸಿತು.

ತೆಂಡೂಲ್ಕರ್‌ಗೆ ಗೌರವ
ವಿಂಬಲ್ಡನ್‌ ಟೂರ್ನಿಯ ಪಂದ್ಯ ವೀಕ್ಷಣೆಗೆಂದು ಶನಿವಾರ ಸೆಂಟರ್‌ ಕೋರ್ಟ್‌ಗೆ ಆಗಮಿಸಿದ ಭಾರತದ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್ ಅವರಿಗೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವಿಸಿದರು. ಸೂಟ್‌ ಧರಿಸಿ ಕೋರ್ಟ್‌ಗೆ ಆಗಮಿಸಿದ ಸಚಿನ್‌ಗೆ ಪ್ರೇಕ್ಷಕರು ಅದ್ದೂರಿ ಸ್ವಾಗತ ಕೋರಿದರು. ಸಚಿನ್‌ ಕೂಡಾ ಪ್ರೇಕ್ಷಕರತ್ತ ಕೈಬೀಸಿದರು

‘ಸೆಂಟರ್‌ ಕೋರ್ಟ್‌ಗೆ ನಿಮ್ಮನ್ನು ಸ್ವಾಗತಿಸಲು ಸಂತೋಷವೆನಿಸುತ್ತದೆ’ ಎಂದು ಎಕ್ಸ್‌’ನಲ್ಲಿ ವಿಡಿಯೊದೊಂದಿಗೆ ವಿಂಬಲ್ಡನ್‌ ಪೋಸ್ಟ್‌ ಮಾಡಿದೆ. ಸೆಂಟರ್‌ ಕೋರ್ಟ್‌ನ ಉದ್ಘೋಷಕ ಸಚಿನ್‌ರನ್ನು ಸ್ವಾಗತಿಸುವುದು ವಿಡಿಯೊದಲ್ಲಿ ದಾಖಲಾಗಿದೆ. 

ಇದೇ ವೇಳೆ ಇಂಗ್ಲೆಂಡ್‌ನ ಕ್ರಿಕೆಟಿಗರಾದ ಬೆನ್‌ ಸ್ಟ್ರೋಕ್ಸ್‌, ಜೋಸ್‌ ಬಟ್ಲರ್‌ ಮತ್ತು ಜೋ ರೋಟ್‌ ಕೂಡಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.