ಲಂಡನ್: ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಬಹುಮಾನ ಮೊತ್ತ ಹೆಚ್ಚಿಸಲಾಗಿದ್ದು, ಈ ಬಾರಿಯ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗುವವರು ತಲಾ ₹ 19.44 ಕೋಟಿ ನಗದು ಬಹುಮಾನ ತಮ್ಮದಾಗಿಸಿಕೊಳ್ಳಲಿದ್ದಾರೆ.
ಟೂರ್ನಿಯ ಒಟ್ಟು ಬಹುಮಾನ ಮೊತ್ತ ಸುಮಾರು ₹ 400 ಕೋಟಿ ಆಗಲಿದೆ. ಕಳೆದ ಬಾರಿಗೆ ಹೋಲಿಸಿದರೆ ಬಹುಮಾನ ಮೊತ್ತದಲ್ಲಿ ಶೇ 11.1 ರಷ್ಟು ಏರಿಕೆಯಾಗಿದೆ.
ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ’ರನ್ನರ್ ಅಪ್‘ ಆಗುವವರು ತಲಾ ₹ 9.74 ಕೋಟಿ ಪಡೆಯಲಿದ್ದಾರೆ. ಮೊದಲ ಸುತ್ತಿನಲ್ಲಿ ಸೋತು ಹೊರಬೀಳುವ ಆಟಗಾರರು ಕೂಡಾ ₹ 48 ಲಕ್ಷ ಜೇಬಿಗಿಳಿಸಲಿದ್ದಾರೆ.
ಈ ಬಾರಿಯ ವಿಂಬಲ್ಡನ್ ಟೂರ್ನಿ ಜೂನ್ 27 ರಿಂದ ಆರಂಭವಾಗಲಿದೆ. 2021ರ ಟೂರ್ನಿಯ ವೇಳೆ ಕೋವಿಡ್ ಕಾರಣದಿಂದ, ಕಡಿಮೆ ಸಂಖ್ಯೆಯ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿತ್ತು.
’ಅರ್ಹತಾ ಹಂತದ ಮೊದಲ ಸುತ್ತಿನಿಂದ ಹಿಡಿದು, ಚಾಂಪಿಯನ್ ಆಗುವವರೆಗಿನ ಎಲ್ಲರಿಗೂ ಈ ಬಾರಿ ಹೆಚ್ಚಿನ ಬಹುಮಾನ ಮೊತ್ತ ಲಭಿಸಲಿದೆ. ವಿಂಬಲ್ಡನ್ ಟೂರ್ನಿಗೆ ಆಟಗಾರರು ಎಷ್ಟು ಮುಖ್ಯ ಎಂಬುದನ್ನು ಇದು ತೋರಿಸುತ್ತದೆ. ನಮ್ಮದು ವಿಶ್ವದ ಶ್ರೇಷ್ಠ ಟೂರ್ನಿಗಳಲ್ಲಿ ಒಂದಾಗಿದೆ‘ ಎಂದು ಟೂರ್ನಿಯನ್ನು ಸಂಘಟಿಸುವ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಮತ್ತು ಕ್ರಾಕೆಟ್ ಕ್ಲಬ್ (ಎಇಎಲ್‌ಟಿಸಿ) ಮುಖ್ಯಸ್ಥ ಇಯಾನ್ ಹೆವಿಟ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.