ಲಂಡನ್: ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಕರೋಲಿನ್ ವೋಜ್ನಿಯಾಕಿ ವಿಂಬಲ್ಡನ್ ಟೂರ್ನಿಯಲ್ಲಿ ಶುಕ್ರವಾರ ಆಘಾತ ಅನುಭವಿಸಿದರು. ಮೂರನೇ ಸುತ್ತಿನ ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರ್ತಿಚೀನಾದ ಜಾಂಗ್ ಶುಯಿ ಅವರು ವೊಜ್ನಿಯಾಕಿ ಅವರನ್ನು 6–4, 6–2 ಸೆಟ್‌ಗಳಿಂದ ಮಣಿಸಿದರು.
ಜಾಂಗ್ ಮೊದಲ ಬಾರಿ ಟೂರ್ನಿಯೊಂದರ ನಾಲ್ಕನೇ ಸುತ್ತು ಪ್ರವೇಶಿಸಿದ ಸಾಧನೆ ಮಾಡಿದರು.
ವಿಶ್ವ ಕ್ರಮಾಂಕದಲ್ಲಿ 50ನೇ ಸ್ಥಾನದಲ್ಲಿರುವ ಜಾಂಗ್, 26 ಪ್ರಶಸ್ತಿ ವಿಜೇತ, 14ನೇ ಶ್ರೇಯಾಂಕದ ಆಟಗಾರ್ತಿಯ ಎದುರು 81 ನಿಮಿಷಗಳಲ್ಲಿ ಗೆಲುವಿನ ನಗೆ ಬೀರಿದರು.
ಎಲಿನಾ ಸ್ವಿಟೋಲಿನಾ ಹಾಗೂ ಮರಿಯಾ ಸಕ್ಕಾರಿ ಮಧ್ಯೆ ನಡೆದ ಮೂರನೇ ಸುತ್ತಿನ ಪೈಪೋಟಿಯುತ ಪಂದ್ಯದಲ್ಲಿ ಸ್ವಿಟೊಲಿನಾ ಅವರಿಗೆ ಗೆಲುವು ಒಲಿಯಿತು. ಎರಡು ತಾಸು ಎಂಟು ನಿಮಿಷ ನಡೆದ ಮ್ಯಾರಥಾನ್ ಪಂದ್ಯದಲ್ಲಿ 6–3, 6–7 (1), 6–2 ಸೆಟ್‌ಗಳಿಂದ ಜಯಿಸಿದರು.
ಡಬ್ಲ್ಯುಟಿಎ ಫೈನಲ್ಸ್ ಚಾಂಪಿಯನ್ ಹಾಗೂ ಎಂಟನೇ ಶ್ರೇಯಾಂಕದ ಸ್ವಿಟೊಲಿನಾ ನಾಲ್ಕನೇ ಸುತ್ತು ಪ್ರವೇಶಿಸಿದರು.
ಮಹಿಳಾ ಸಿಂಗಲ್ಸ್ ಮತ್ತೊಂದು ಪಂದ್ಯದಲ್ಲಿ ಕರೋಲಿನಾ ಪ್ಲಿಸ್ಕೊವಾ ಅವರು ಶೇ ಸು ವೇಯ್ ವಿರುದ್ಧ 6–3, 2–6, 6–4 ಸೆಟ್‌ಗಳಿಂದ ಗೆದ್ದು ನಾಲ್ಕನೇ ಸುತ್ತು ಪ್ರವೇಶಿಸಿದರು.
ಕಿರ್ಗಿಯೋಸ್ ವಾಗ್ವಾದ: ಗುರುವಾರ ನಡೆದ ಪುರುಷರ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ರಫೆಲ್ ನಡಾಲ್ ಅವರು ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ಅವರನ್ನು ಮಣಿಸಿ ನಾಲ್ಕನೇ ಸುತ್ತು ಪ್ರವೇಶಿಸಿದರು. ಇವರಿಬ್ಬರ ನಡುವಿನ ಬಾಂಧವ್ಯ ಅಷ್ಟೇನೂ ಚೆನ್ನಾಗಿರಲಿಲ್ಲ.
6–3, 3–6, 7–6 (7/5), 7–6 (7/3) ಸೆಟ್‌ಗಳಿಂದ ಪಂದ್ಯ ಸೋತ ಕಿರ್ಗಿಯೋಸ್, ಅಂಪೈರ್ ಜೊತೆ ವಾಗ್ವಾದ ನಡೆಸಿ ಕ್ರೀಡಾಸ್ಫೂರ್ತಿಗೆ ವಿರುದ್ಧ ನಡೆದುಕೊಂಡರು. ತಮ್ಮ ವರ್ತನೆಗೆ ಅವರು ಎಚ್ಚರಿಕೆಯನ್ನೂ ಪಡೆದರು.
ಅವರು ಎರಡು ಬಾರಿ ಅಂಡರ್ ಆರ್ಮ್ ಸರ್ವ್ ಮಾಡಿದ್ದರು. ಅಶಿಸ್ತಿನ ವರ್ತನೆ ತೋರಿದ ನಿಕ್ ಕಿರ್ಗಿಯೋಸ್ ವಿರುದ್ಧ ಗೆದ್ದ ಸಂದರ್ಭದಲ್ಲಿ ಮೂರನೇ ಶ್ರೇಯಾಂಕದ ನಡಾಲ್ ಅವರು ತುಸು ಹೆಚ್ಚೇ ಎನ್ನುವಂತೆ ಸಂಭ್ರಮಿಸಿದರು.
ಪ್ರಿಕ್ವಾರ್ಟರ್‌ಫೈನಲ್‌ಗೆ ದಿವಿಜ್ ಶರಣ್
ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಪ್ರಿಕ್ವಾರ್ಟರ್‌ಫೈನಲ್ ತಲುಪುವ ಮೂಲಕ ದಿವಿಜ್ ಶರಣ್ ಭಾರತದ ಪದಕದ ಭರವಸೆಯನ್ನು ಜೀವಂತವಿರಿಸಿದ್ದಾರೆ. ಶುಕ್ರವಾರ ಬ್ರೆಜಿಲ್‌ನ ಮಾರ್ಸೆಲೊ ಡೆಮೊಲಿನರ್ ಜೊತೆಗೂಡಿ ಅವರು ಸ್ಯಾಂಡರ್ ಗಿಲ್ಲೆ ಹಾಗೂ ಜೋರಾನ್ ಲಿಗೆನ್ ವಿರುದ್ಧ ಗೆದ್ದರು.
ಪ್ರಬಲ ಪೈಪೋಟಿ ಕಂಡುಬಂದ ಪಂದ್ಯ ಮೂರು ತಾಸಿಗಿಂತ ಹೆಚ್ಚು ಕಾಲ ನಡೆಯಿತು. 7–6(1), 5–7, 7–6 ಸೆಟ್‌ಗಳಿಂದ ಅವರು ಬೆಲ್ಜಿಯಂ ಜೋಡಿಯ ವಿರುದ್ಧ ಜಯಭೇರಿ ಬಾರಿಸಿದರು. ಎಡಗೈ ಆಟಗಾರ ಶರಣ್, ಹೋದ ವರ್ಷ ಟೂರ್ನಿಯ ಕ್ವಾರ್ಟರ್‌ಫೈನಲ್ ತಲುಪಿದ್ದರು.ಭಾರತದ ರೋಹನ್ ಬೋಪಣ್ಣ, ಲಿಯಾಂಡರ್ ಪೇಸ್, ಪೂರವ್ ರಾಜಾ ಹಾಗೂ ಜೀವನ್ ನೆಡುಂಚೆರಿಯನ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.