ADVERTISEMENT

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಆ್ಯಶ್ಲೆ ಬಾರ್ಟಿ ಗೆಲುವಿನ ಓಟ

ನಾಲ್ಕನೇ ಸುತ್ತಿಗೆ ಲಗ್ಗೆಯಿಟ್ಟ ಸ್ಯಾಮ್‌ ಕ್ವೆರಿ, ಎಲಿಸ್‌ ಮೆರ್ಟೆನ್ಸ್

ರಾಯಿಟರ್ಸ್
Published 6 ಜುಲೈ 2019, 20:01 IST
Last Updated 6 ಜುಲೈ 2019, 20:01 IST
ಆ್ಯಶ್ಲೆ ಬಾರ್ಟಿ ಆಟದ ವೈಖರಿ–ರಾಯಿಟರ್ಸ್ ಚಿತ್ರ
ಆ್ಯಶ್ಲೆ ಬಾರ್ಟಿ ಆಟದ ವೈಖರಿ–ರಾಯಿಟರ್ಸ್ ಚಿತ್ರ   

ಲಂಡನ್‌: ಅಗ್ರಶ್ರೇಯಾಂಕಿತ ಆಟಗಾರ್ತಿ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ತಮ್ಮ ಪಾರಮ್ಯವನ್ನು ಮುಂದುವರಿಸಿದ್ದಾರೆ. ಶನಿವಾರ ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಅವರು 16ರ ಘಟ್ಟ ಪ್ರವೇಶಿಸಿದರು. ಬ್ರಿಟನ್‌ ಆಟಗಾರ್ತಿ ಹ್ಯಾರಿಯಟ್‌ ಡಾರ್ಟ್ ಅವರನ್ನು 6–1, 6–1 ಸೆಟ್‌ಗಳಿಂದ ಮಣಿಸಿ, 2010ರ ಬಳಿಕ ಟೂರ್ನಿಯ ನಾಲ್ಕನೇ ಸುತ್ತು ಪ್ರವೇಶಿಸಿದ ಆಸ್ಟ್ರೇಲಿಯಾದ ಮೊದಲ ಮಹಿಳೆ ಎನಿಸಿಕೊಂಡರು.

2010ರಲ್ಲಿ ಜರ್ಮಿಲಾ ವೋಲ್ಫ್‌ ನಾಲ್ಕನೇ ಸುತ್ತಿಗೆ ಲಗ್ಗೆಯಿಟ್ಟಿದ್ದರು.21ನೇ ಶ್ರೇಯಾಂಕದ ಎಲಿಸ್‌ ಮೆರ್ಟೆನ್ಸ್ ಹೋರಾಟಕಾರಿ ಪಂದ್ಯದಲ್ಲಿ ವಾಂಗ್‌ ಕಿಯಾಂಗ್‌ ಎದುರು 6–2, 6–7(9), 6–4 ರಿಂದ ಗೆಲುವಿನ ನಗೆ ಬೀರಿದರು.

ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಜಪಾನ್‌ನ ಕಿ ನಿಶಿಕೋರಿ ಅವರು ಅಮೆರಿಕಾದ ಸ್ಟೀವ್‌ ಜಾನ್ಸನ್‌ ಅವರಿಗೆ ಸೋಲಿನ ರುಚಿ ತೋರಿಸಿದರು. 6–4, 6–3, 6–2ರಿಂದ ಗೆದ್ದ ಅವರು ನಾಲ್ಕನೇ ಸುತ್ತಿಗೆ ಲಗ್ಗೆಯಿಟ್ಟರು.

ADVERTISEMENT

ಅಮೆರಿಕಾದ ಸ್ಯಾಮ್‌ ಕ್ವೆರಿ ಅವರು ನೇರ ಸೆಟ್‌ಗಳಿಂದ ಗೆಲುವು ಕಂಡು ನಾಲ್ಕನೇ ಸುತ್ತು ಪ್ರವೇಶಿಸಿದರು. ಆಸ್ಟ್ರೇಲಿಯಾದ ಜಾನ್‌ ಮಿಲ್‌ಮನ್‌ ಅವರನ್ನು 7–6(3), 7–6(8), 6–3ರಿಂದ ಮಣಿಸಿದರು. 27 ಏಸ್‌ಗಳನ್ನು ಕ್ವೆರಿ ಸಿಡಿಸಿದರು.

ಎರಡು ಬಾರಿಯ ಚಾಂಪಿಯನ್‌ ಪೆಟ್ರಾ ಕ್ವಿಟೊವ ಅವರು ಶ್ರೇಯಾಂಕರಹಿತ ಆಟಗಾರ್ತಿ ಮ್ಯಾಗ್ಡಾ ಲಿನೆಟ್‌ ಎದುರು 6–3, 6–2ರಿಂದ ಗೆದ್ದರೆ, ಸ್ಪೇನ್‌ನ ಕಾರ್ಲಾ ಸ್ಯುರೆಜ್‌ ನವಾರೊ ಅವರು ಅಮೆರಿಕಾದ ಲೌರೆನ್‌ ಡೇವಿಸ್‌ ಅವರನ್ನು 6–3, 6–3ರಿಂದ ಸೋಲಿಸಿ ನಾಲ್ಕನೇ ಸುತ್ತು ಪ್ರವೇಶಿಸಿದರು.

ಮುಂದುವರಿದ ಗಫ್‌ ಗೆಲುವಿನ ಓಟ: ಅಮೆರಿಕಾದ 15 ವರ್ಷ ವಯಸ್ಸಿನ ಆಟಗಾರ್ತಿ, ಭಾರೀ ನಿರೀಕ್ಷೆ ಮೂಡಿಸಿರುವ ಕೊಕೊ ಗಫ್‌ ಅವರ ಗೆಲುವಿನ ಮುಂದುವರಿದಿದೆ. ಶುಕ್ರವಾರ ತಡರಾತ್ರಿ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಎರಡು ಮ್ಯಾಚ್‌ ಪಾಯಿಂಟ್‌ ಉಳಿಸಿಕೊಂಡ ಅವರು 16ರ ಘಟ್ಟ ಪ್ರವೇಶಿಸುವಲ್ಲಿ ಯಶಸ್ವಿಯಾದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 313ನೇ ಸ್ಥಾನದಲ್ಲಿರುವ ಅವರು, ಆರಂಭದ ಹಿನ್ನಡೆಯನ್ನು ಮೀರಿ 3-6, 7-6, 7-5ರಿಂದ ಸ್ಲೋವೆನಿಯಾದ ಪೊಲೊನಾ ಹರ್ಕಾಗ್‌ ಎದುರು ಜಯಭೇರಿ ಬಾರಿಸಿದರು.

ಅವರು ಮುಂದಿನ ಪಂದ್ಯದಲ್ಲಿ ಸೋಮವಾರ ಸಿಮೊನಾ ಹಲೆಪ್‌ ಅವರನ್ನು ಎದುರಿಸುವರು.

ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯಗಳಲ್ಲಿ ಫ್ರಾನ್ಸ್‌ನ ಯುಗೊ ಹಂಬರ್ಟ್ ಅವರು ಕೆನಡಾದ ಅಗರ್‌ ಅಲೈಸ್ಸಿಮ್‌ ವಿರುದ್ಧ 6–4, 7–5, 6–3 ಸೆಟ್‌ಗಳಿಂದ ಗೆದ್ದರು.

ಡೇವಿಡ್‌ ಗಫಿನ್‌ ಅವರು ಡ್ಯಾನಿಲ್‌ ಮೆಡ್ವಡೆವ್‌ ಎದುರು 4–6, 6–2, 3–6, 6–3, 7–5ರಿಂದ, ಸ್ಪೇನ್‌ನ ಫರ್ನಾಂಡೊ ವರ್ಡಾಸ್ಕೊ ಅವರು ಥಾಮಸ್‌ ಫ್ಯಾಬಿಯಾನೊ ವಿರುದ್ಧ 6–4, 7–6 (1), 6–4 ರಿಂದ ಗೆದ್ದರು. ಮಿಲೊಸ್‌ ರಾನಿಕ್‌ ಅವರು ರೇಲಿ ಒಪೆಲ್ಕಾ ಎದುರು 7–6(1), 6–2, 6–1 ರಿಂದ ಗೆದ್ದು ನಾಲ್ಕನೇ ಸುತ್ತು ಪ್ರವೇಶಿಸಿದ್ದರು.

ನಾಲ್ಕನೇ ಸುತ್ತಿಗೆ ನಡಾಲ್‌: ವಿಶ್ವದ ಎರ ಡನೇ ಕ್ರಮಾಂಕದ ಆಟಗಾರ ರಫೆಲ್‌ ನಡಾಲ್‌ ಶನಿವಾರ ನಡೆದ ಪಂದ್ಯದಲ್ಲಿ 6–2, 6–3, 6–2 ರಿಂದ ಜೋ ವಿಲ್‌ಫ್ರೆಡ್‌ ಸೊಂಗಾ ಅವರನ್ನು ಸೋಲಿಸಿ ನಾಲ್ಕನೇ ಸುತ್ತಿಗೆ ಮುನ್ನಡೆದರು.

ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಪಡೆದಿರುವ ನಡಾಲ್‌ ಒಂದು ಗಂಟೆ 48 ನಿಮಿಷಗಳ ಕಾಲ ನಡೆದ ಈ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿದ್ದು, 11ನೇ ಏಸ್‌ ಮೂಲಕ ಪಂದ್ಯ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.