ಲಂಡನ್: ಎರಡನೇ ಶ್ರೇಯಾಂಕದ ಆಟಗಾರ ಹಾಗೂ ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಸ್ವಿಟ್ಜರ್ಲೆಂಡ್ ದಿಗ್ಗಜ ರೋಜರ್ ಫೆಡರರ್ ಮತ್ತೊಂದು ದಾಖಲೆ ಬರೆದರು. ಅವರು ವಿಂಬಲ್ಡನ್ ಟೂರ್ನಿಯಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಗೆದ್ದು 16ರ ಘಟ್ಟ ಪ್ರವೇಶಿಸುವ ಮೂಲಕ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ 350ನೇ ಗೆಲುವು ಕಂಡರು. ಫ್ರಾನ್ಸ್ ಆಟಗಾರ ಲೂಕಾಸ್ ಪೌಲ್ಲಿ ಅವರನ್ನು 7–5, 6–2, 7–6 ಸೆಟ್‌ಗಳಿಂದ ಅವರು ಮಣಿಸಿದರು.
ಅಭೂತಪೂರ್ವ 17ನೇ ಬಾರಿ ವಿಂಬಲ್ಡನ್ ಟೂರ್ನಿಯ ನಾಲ್ಕನೇ ಸುತ್ತು ಪ್ರವೇಶಿಸಿದ ಸಾಧನೆಗೂ ಫೆಡರರ್ ಭಾಜನರಾದರು. ‘ಇಷ್ಟು ಸಂಖ್ಯೆಯ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿದ್ದು ಖುಷಿ ತಂದಿದೆ’ ಎಂದು ಪಂದ್ಯದ ನಂತರ ಅವರು ಪ್ರತಿಕ್ರಿಯಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ಸೋಮವಾರ ಇಟಲಿಯ ಮ್ಯಾಟ್ಟಿಯೊ ಬೆರೆಟ್ಟಿನಿ ಅವರನ್ನು ಎದುರಿಸುವರು.
ಮೇಲ್ಮನವಿಗೆ ಟಾಮಿಕ್ ಚಿಂತನೆ: ‘ಅಗತ್ಯ ವೃತ್ತಿಪರ ಮಟ್ಟ’ದಲ್ಲಿ ಪಂದ್ಯ ಆಡದ ಆರೋಪದ ಮೇಲೆ ದಂಡ ತೆರುವ ಶಿಕ್ಷೆಗೆ ಒಳಗಾಗಿರುವ ಆಸ್ಟ್ರೇಲಿಯಾ ಆಟಗಾರ ಬರ್ನಾರ್ಡ್ ಟಾಮಿಕ್, ಸಂಘಟಕರ ಕ್ರಮದ ವಿರುದ್ಧ ಮೇಲ್ಮನವಿ ಸಲ್ಲಿಸಲು ಯೋಚಿಸಿರುವುದಾಗಿ ತಿಳಿಸಿದರು. ಟೂರ್ನಿಯ ಪ್ರಥಮ ಸುತ್ತಿನ ಪಂದ್ಯದಲ್ಲಿ ಅವರು ಜೋ ವಿಲ್‌ಫ್ರೆಡ್ ಸೋಂಗಾ ವಿರುದ್ಧ 58 ನಿಮಿಷಗಳಲ್ಲೇ ಸೋಲು ಕಂಡಿದ್ದರು.
ಮಿಶ್ರ ಡಬಲ್ಸ್: ಶರಣ್, ಬೋಪಣ್ಣಗೆ ಸೋಲು
ದಿವಿಜ್ ಶರಣ್ ಮತ್ತು ರೋಹನ್ ಬೋಪಣ್ಣ ವಿಂಬಲ್ಡನ್ ಟೂರ್ನಿಯ ತಮ್ಮ ಮಿಶ್ರ ಡಬಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಇದರೊಂದಿಗೆ ಈ ವಿಭಾಗದಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ.
13ನೇ ಶ್ರೇಯಾಂಕದ ಬೋಪಣ್ಣ ಹಾಗೂ ಜೊತೆ ಆಟಗಾರ್ತಿ ಅರಿನಾ ಸಬಲೆಂಕಾ ಅವರು 4–6, 4–6 ಸೆಟ್‌ಗಳಿಂದ ನ್ಯೂಜಿಲೆಂಡ್‌ನ ಆರ್ಟೆಮ್ ಸಿಟಾಕ್ ಹಾಗೂ ಜರ್ಮನಿಯ ಲೌರಾ ಸಿಜಮಂಡ್ ಎದುರು ಮುಗ್ಗರಿಸಿದರು. ಒಂದು ತಾಸು 13 ನಿಮಿಷಗಳಲ್ಲಿ ಈ ಪಂದ್ಯ ಅಂತ್ಯ ಕಂಡಿತು.
ಚೀನಾ ಆಟಗಾರ್ತಿ ಯಿಂಗ್‌ಯಿಂಗ್ ಡುವಾನ್ ಜೊತೆಗೂಡಿ ಆಡಿದ ಭಾರತದ ಶರಣ್, ಬ್ರಿಟಿಷ್ ಜೋಡಿ ಈಡನ್ ಸಿಲ್ವಾ ಹಾಗೂ ಇವಾನ್ ಹಾಯ್ಟ್ ಎದುರು 3–6, 4–6 ಸೆಟ್‌ಗಳಿಂದ ಎಡವಿದರು. ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಶರಣ್ ಉಳಿದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.