ADVERTISEMENT

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಸಿನ್ನರ್‌ಗೆ ಮೆಡ್ವೆಡೇವ್‌ ಆಘಾತ

ಏಜೆನ್ಸೀಸ್
Published 10 ಜುಲೈ 2024, 4:05 IST
Last Updated 10 ಜುಲೈ 2024, 4:05 IST
<div class="paragraphs"><p>ವಿಂಬಲ್ಡನ್‌ ಟೆನಿಸ್‌ ಟೂರ್ನಿ</p></div>

ವಿಂಬಲ್ಡನ್‌ ಟೆನಿಸ್‌ ಟೂರ್ನಿ

   

ಲಂಡನ್‌: ಐದನೇ ಕ್ರಮಾಂಕದ ಡೇನಿಯಲ್‌ ಮೆಡ್ವೆಡೇವ್ ಅವರು ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಯಾನಿಕ್ ಸಿನ್ನರ್ ಅವರನ್ನು ಐದು ಸೆಟ್‌ಗಳ ದೀರ್ಘ ಪಂದ್ಯದಲ್ಲಿ ಪರಾಭವಗೊಳಿಸಿ, ವಿಂಬಲ್ಡನ್‌ ಟೆನಿಸ್‌ ಚಾಂಪಿಯನ್‌ ಷಿಪ್ಸ್‌ನಲ್ಲಿ ಸತತ ಎರಡನೇ ಬಾರಿ ಸೆಮಿಫೈನಲ್‌ ತಲುಪಿದರು.

ರಷ್ಯಾದ ಮೆಡ್ವೆಡೇವ್‌ 6–7 (7–9), 6–4, 7–6 (7–4), 2–6, 6–3 ರಿಂದ ಜಯ ಗಳಿಸಿದರು. ಆ ಮೂಲಕ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್‌ ಫೈನಲ್‌ನಲ್ಲಿ ಸಿನ್ನರ್ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡರು.

ADVERTISEMENT

ಇಟಲಿಯ ಆಟಗಾರನ ವಿರುದ್ಧ ಸತತ ಐದು ಪಂದ್ಯಗಳ ಸೋಲಿನ ಸರಪಳಿಯನ್ನು ಕಳಚಿದ 28 ವರ್ಷ ವಯಸ್ಸಿನ ಮೆಡ್ವೆಡೇವ್‌, ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಒಂಬತ್ತನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು.  ಅಮೆರಿಕ ಓಪನ್‌ ಮಾಜಿ ಚಾಂಪಿಯನ್‌ ಆಗಿರುವ ಅವರು ಶುಕ್ರವಾರ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರನ್ನು ಎದುರಿಸಲಿದ್ದಾರೆ.

ಮೂರನೇ ಶ್ರೇಯಾಂಕದ ಅಲ್ಕರಾಜ್‌ ಅವರು 5–7, 6–4, 6–2, 6–2 ಸೆಟ್‌ಗಳಿಂದ 12ನೇ ಶ್ರೇಯಾಂಕದ ಟಾಮಿ ಪಾಲ್ (ಅಮೆರಿಕ) ಅವರನ್ನು ಹಿಮ್ಮೆಟ್ಟಿಸಿದರು.

ನಾಲ್ಕನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಯ ಪ್ರಯತ್ನದಲ್ಲಿರುವ ಸ್ಪೇನ್‌ನ 21 ವರ್ಷದ ಅಲ್ಕರಾಜ್‌, ಮೊದಲ ಸೆಟ್‌ನಲ್ಲಿ ಹಿನ್ನಡೆ ಅನು ಭವಿಸಿದರು. ಆದರೆ, ನಂತರ ಪುಟಿದೆದ್ದ ಅವರು ಸತತ ಮೂರು ಸೆಟ್‌ಗಳಲ್ಲಿ ಮೇಲುಗೈ ಸಾಧಿಸಿದರು.

ಕ್ವಾರ್ಟರ್‌ಗೆ ಜೊಕೊವಿಚ್‌: ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಇದರೊಂದಿಗೆ ಅವರು ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ 60ನೇ ಹಾಗೂ ವಿಂಬಲ್ಡನ್‌ನಲ್ಲಿ 15ನೇ ಬಾರಿ ಅಂತಿಮ ಎಂಟರ ಘಟ್ಟ ಪ್ರವೇಶಿಸಿದ ಸಾಧನೆ ಮಾಡಿದರು. ದಾಖಲೆಯ ಎಂಟನೇ ವಿಂಬಲ್ಡನ್ ಕಿರೀಟ ಧರಿಸುವ ಯತ್ನದಲ್ಲಿರುವ ಜೊಕೊವಿಚ್ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ ಹೋಲ್ಗರ್‌ ರೂನ್‌ ಅವರನ್ನು 6-3, 6-4, 6-2 ಸೆಟ್‌ಗಳಿಂದ ಸೋಲಿಸಿದರು. 

ಎರಡನೇ ಶ್ರೇಯಾಂಕದ ಜೊಕೊವಿಚ್, ಕ್ವಾರ್ಟರ್‌ ಫೈನಲ್‌ನಲ್ಲಿ ಒಂಬತ್ತನೇ ಶ್ರೇಯಾಂಕದ ಅಲೆಕ್ಸ್‌ ಡಿ ಮಿನೋರ್ (ಆಸ್ಟ್ರೇಲಿಯಾ) ಅವರನ್ನು ಎದುರಿಸಲಿದ್ದಾರೆ. 37 ವರ್ಷ ವಯಸ್ಸಿನ ಜೊಕೊವಿಚ್‌ ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದಾರೆ. ಪ್ರಸಕ್ತ ಋತುವಿನಲ್ಲಿ ಯಾವುದೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ಅವರು ಗೆದ್ದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.