ಲಂಡನ್: ವಿಂಬಲ್ಡನ್ ಟೆನಿಸ್ ಅಂಗಳದಲ್ಲಿ ಸೊಗಸಾದ ಸಮವಸ್ತ್ರ ಧರಿಸಿ ಕಾರ್ಯನಿರ್ವಹಿಸುತ್ತಿದ್ದ ಲೈನ್ ಅಂಪೈರ್‌ಗಳು ಮುಂಬರುವ ಟೂರ್ನಿಗಳಲ್ಲಿ ಕಾಣಸಿಗುವುದಿಲ್ಲ. ಅತ್ಯಂತ ಹಳೆಯದಾದ ಈ ಪರಂಪರೆಯು ಮುಂದಿನ ವರ್ಷದ ಟೂರ್ನಿಯಿಂದ ಇರುವುದಿಲ್ಲ. ಅವರ ಸ್ಥಾನವನ್ನು ಯಾಂತ್ರಿಕ ಬುದ್ಧಿಮತ್ತೆ ತುಂಬಲಿದೆ.
2025ರ ವಿಂಬಲ್ಡನ್ ಟೂರ್ನಿಯಲ್ಲಿ ಯಾಂತ್ರಿಕ ಬುದ್ಧಿಮತ್ತೆಯ ಮೂಲಕ ‘ಔಟ್ ಮತ್ತು ಫಾಲ್ಟ್’ ತೀರ್ಮಾನಗಳು ಹೊರಹೊಮ್ಮಲಿವೆ.
‘2024ರ ಟೂರ್ನಿಯಲ್ಲಿ ಎಲೆಕ್ಟ್ರಾನಿಕ್ ಲೈನ್ ಕಾಲಿಂಗ್ ವ್ಯವಸ್ಥೆಯ ಸಮಗ್ರವಾದ ಪರೀಕ್ಷೆ ನಡೆಸಲಾಗಿತ್ತು. ಬಾಲ್ ಟ್ರ್ಯಾಕಿಂಗ್ ಮತ್ತು ಲೈನ್ ಕಾಲಿಂಗ್ ತಂತ್ರಜ್ಞಾನ ಕೆಲವು ವರ್ಷಗಳಿಂದ ಇದೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಇದು ಸಕಾಲ. ಇದರಿಂದಾಗಿ ಅಂಪೈರಿಂಗ್‌ನಲ್ಲಿ ಗರಿಷ್ಠಮಟ್ಟದ ನಿಖರತೆಯನ್ನು ಸಾಧಿಸಲು ಸಾಧ್ಯವಾಗಲಿದೆ’ ಎಂದು ಆಲ್ ಇಂಗ್ಲೆಂಡ್ ಕ್ಲಬ್ ಮುಖ್ಯಸ್ಥ ಸ್ಯಾಲಿ ಬೋಲ್ಟನ್ ತಿಳಿಸಿದ್ದಾರೆ.
‘ಆಧುನಿಕತೆ ಮತ್ತು ಸಾಂಪ್ರದಾಯಿಕತೆಯನ್ನು ಮಿಳಿತಗೊಳಿಸಿಕೊಂಡು ಕಾರ್ಯನಿರ್ವಹಿಸುವುದು ನಮ್ಮ ಜವಾಬ್ದಾರಿ. ಲೈನ್ ಅಂಪೈರ್‌ಗಳು ಚಾಂಪಿಯನ್‌ಷಿಪ್‌ಗಳಲ್ಲಿ ಅಂಪೈರಿಂಗ್ ವ್ಯವಸ್ಥೆಯ ಕೇಂದ್ರಬಿಂದುವಾಗಿದ್ದವರು. ದಶಕಗಳಿಂದ ಅವರು ಶ್ರಮಿಸಿದ್ದಾರೆ. ಅವರ ಅಮೂಲ್ಯವಾದ ಕಾಣಿಕೆಯನ್ನು ನಾವು ಗೌರವಿಸುತ್ತೇವೆ. ಅವರ ಬದ್ಧತೆ ಮತ್ತು ಸೇವೆಗೆ ಅಭಾರಿಯಾಗಿದ್ದೇವೆ’ ಎಂದು ಬೋಲ್ಟನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.