ಶಾಂಘೈ : ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಇಲ್ಲಿ ನಡೆದ ಶಾಂಘೈ ಮಾಸ್ಟರ್ಸ್ ಸೂಪರ್ 1000 ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 24 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿ ಕಿರೀಟವನ್ನು ಮುಡಿಗೇರಿಸಿಕೊಂಡರು.
ಭಾನುವಾರ ನಡೆದ ಹಣಾಹಣಿಯಲ್ಲಿ 23 ವರ್ಷ ವಯಸ್ಸಿನ ಸಿನ್ನರ್ 7-6 (7/4), 6-3ರಿಂದ ನಾಲ್ಕನೇ ಶ್ರೇಯಾಂಕದ ಸರ್ಬಿಯಾದ ಆಟಗಾರನನ್ನು ಹಿಮ್ಮೆಟ್ಟಿಸಿದರು. ಈ ಹೋರಾಟ ಕೇವಲ 1 ಗಂಟೆ 37 ನಿಮಿಷದಲ್ಲಿ ಮುಕ್ತಾಯವಾಯಿತು.
ಇಟಲಿಯ ಆಟಗಾರ ಸಿನ್ನರ್‌ಗೆ ಇದು ಋತುವಿನ ಏಳನೇ ಪ್ರಮುಖ ಪ್ರಶಸ್ತಿಯಾಗಿದೆ. ಆಸ್ಟ್ರೇಲಿಯಾ ಓಪನ್, ಅಮೆರಿಕಾ ಓಪನ್ ಚಾಂಪಿಯನ್ ಆಗಿರುವ ಅವರು, ಎರಡು ವಾರದ ಹಿಂದೆ ಚೀನಾ ಓಪನ್ ಚಾಂಪಿಯನ್ ಆಗಿದ್ದರು.
2016ರಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಒಂಬತ್ತು ಪ್ರಶಸ್ತಿ ಗೆದ್ದ ನಂತರ ಒಂದು ಋತುವಿನಲ್ಲಿ ಆರಕ್ಕೂ ಹೆಚ್ಚು ಕಿರೀಟ ಮುಡಿಗೇರಿಸಿಕೊಂಡ ಮೊದಲ ಆಟಗಾರ ಎಂಬ ಹಿರಿಮೆಗೆ ಸಿನ್ನರ್ ಪಾತ್ರವಾದರು. ಅಲ್ಲದೆ, ಜೊಕೊವಿಚ್ ವಿರುದ್ಧ ಗೆಲುವಿನ ದಾಖಲೆಯನ್ನು 4–4ಕ್ಕೆ ಸಮಗೊಳಿಸಿದರು.
ವೃತ್ತಿಜೀವನದ 100ನೇ ಸಿಂಗಲ್ಸ್ ಪ್ರಶಸ್ತಿ ಮತ್ತು ಶಾಂಘೈನಲ್ಲಿ ಐದನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ 37 ವರ್ಷ ವಯಸ್ಸಿನ ಜೊಕೊವಿಚ್ ಅವರಿಗೆ ನಿರಾಸೆಯಾಯಿತು. ಅಮೆರಿಕದ ಜಿಮ್ಮಿ ಕಾನರ್ಸ್ (109) ಮತ್ತು ಸ್ವಿಟ್ಜರ್ಲೆಂಡ್ ರೋಜರ್ ಫೆಡರರ್ (103) ಮಾತ್ರ ಶತಕ ಪ್ರಶಸ್ತಿಗಳ ಗಡಿ ದಾಟಿದ್ದಾರೆ.
ಜೊಕೊವಿಚ್ ಪ್ರಸಕ್ತ ವರ್ಷದಲ್ಲಿ ಪ್ರಶಸ್ತಿಯ ಬರ ಎದುರಿಸುತ್ತಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಗೆದ್ದ ಚಿನ್ನದ ಪದಕ ಈ ವರ್ಷದ ಏಕೈಕ ಸಾಧನೆಯಾಗಿದೆ.
ಸಬಲೆಂಕಾಗೆ ಪ್ರಶಸ್ತಿ: ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ಅವರು ವುಹಾನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಝೆಂಗ್ ಕ್ವಿನ್ವೆನ್ ಅವರನ್ನು ಮಣಿಸಿ ಸತತ ಮೂರನೇ ಬಾರಿ ಇಲ್ಲಿ ಪ್ರಶಸ್ತಿ ಗೆದ್ದರು.
ಬೆಲಾರಸ್‌ನ 26 ವರ್ಷ ವಯಸ್ಸಿನ ಸಬಲೆಂಕಾ 6-3, 7-5, 6-3 ಸೆಟ್‌ಗಳಿಂದ ಐದನೇ ಶ್ರೇಯಾಂಕದ ಝೆಂಗ್ ಅವರನ್ನು ಸೋಲಿಸಿದರು. ಸಬಲೆಂಕಾ ಅವರು ಪ್ರಸಕ್ತ ಋತುವಿನಲ್ಲಿ ಆಸ್ಟ್ರೇಲಿಯಾ ಓಪನ್ ಮತ್ತು ಅಮೆರಿಕ ಓಪನ್ ಸೇರಿದಂತೆ ನಾಲ್ಕನೇ ಪ್ರಮುಖ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.