ADVERTISEMENT

ಡೇವಿಸ್ ಕಪ್: ‘ಆಟವಾಡದ ನಾಯಕ’ನಾಗಿ ಜೀಶಾನ್ ಅಲಿ

ಫೆ. 3ರಿಂದ ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್ ವಿಶ್ವಗುಂಪಿನ ಪಂದ್ಯ

ಪಿಟಿಐ
Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
<div class="paragraphs"><p>ಜೀಶಾನ್ ಅಲಿ</p></div>

ಜೀಶಾನ್ ಅಲಿ

   

ಇಸ್ಲಾಮಾಬಾದ್: ಹಿರಿಯ ಆಟಗಾರ ಜೀಶಾನ್ ಅಲಿ ಅವರು ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ಫೆ. 3 ಮತ್ತು 4ರಂದು  ಡೇವಿಸ್‌ ಕಪ್ ಪಂದ್ಯ ಆಡಲಿರುವ ಭಾರತ ತಂಡದಲ್ಲಿ ತರಬೇತುದಾರನ ಜೊತೆಗೆ ‘ಆಟವಾಡದ ನಾಯಕ’ನ ಪಾತ್ರವನ್ನೂ ನಿರ್ವಹಿಸಲಿದ್ದಾರೆ. ವೈಯಕ್ತಿಕ ಕಾರಣ ನೀಡಿ ರೋಹಿತ್ ರಾಜಪಾಲ್ ಅವರು ತಂಡದೊಂದಿಗೆ ತೆರಳದ ಕಾರಣ ಜೀಶಾನ್ ಅವರಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ.

ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಮಹಾಕಾರ್ಯದರ್ಶಿ ಅನಿಲ್ ಧುಪರ್ ಅವರು ಈ ವಿಷಯವನ್ನು ಸುದ್ದಿಸಂಸ್ಥೆಗೆ ಮಂಗಳವಾರ  ಖಚಿತಪಡಿಸಿದ್ದಾರೆ. ಕುಟುಂಬ ಸದಸ್ಯರಿಗೆ ವೈದ್ಯಕೀಯ ತುರ್ತು ಇರುವ ಕಾರಣ ರಾಜಪಾಲ್ ಪಾಕಿಸ್ತಾನಕ್ಕೆ ಪ್ರಯಾಣಿಸಿಲ್ಲ ಎಂದು ತಿಳಿದುಬಂದಿದೆ.

ADVERTISEMENT

‘ನಮ್ಮ ತಂಡದ ಆಟವಾಡದ ನಾಯಕರಾಗಿದ್ದ ರೋಹಿತ್ ರಾಜಪಾಲ್ ವೈಯಕ್ತಿಕ ಕಾರಣಗಳಿಂದ ತಂಡದ ಜೊತೆ ತೆರಳಲು ಆಗಿಲ್ಲ. ಹಿರಿಯ ಆಟಗಾರ ಜೀಶಾನ್ ಅಲಿ ಅವರನ್ನು ತಂಡದ ನಾಯಕನಾಗಿ ನೇಮಕ ಮಾಡಿದ್ದೇವೆಂದು ತಿಳಿಸಲು ಸಂತಸವಾಗುತ್ತಿದೆ’ ಎಂದು ಧುಪರ್ ತಿಳಿಸಿದ್ದಾರೆ.

60 ವರ್ಷಗಳ ದೀರ್ಘ ಕಾಲದ ನಂತರ ಭಾರತ ಡೇವಿಸ್ ಕಪ್ ತಂಡ ಪಾಕಿಸ್ತಾನಕ್ಕೆ ತೆರಳಿದೆ. ಐವರು ಆಟಗಾರರು, ನೆರವು ಸಿಬ್ಬಂದಿ ಮತ್ತು ಕೋಚ್‌ ಒಳಗೊಂಡ 10 ಮಂದಿಯ ತಂಡ ಪಾಕ್‌ಗೆ ಪಯಣಿಸಿದೆ. ಪಾಕಿಸ್ತಾನ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನ ಹುಲ್ಲಿನ ಅಂಕಣದಲ್ಲಿ ಈ ವಿಶ್ವ ಗುಂಪಿನ (1) ಪ್ಲೇ ಆಫ್‌ ಪಂದ್ಯ ನಡೆಯಲಿದೆ.

ಭಾರತ ಡೇವಿಸ್‌ ಕಪ್ ತಂಡ ಕೊನೆಯ ಬಾರಿ 1964ರಲ್ಲಿ ಪಾಕಿಸ್ತಾನಕ್ಕೆ ತೆರಳಿತ್ತು. ಆ ಸಂದರ್ಭದಲ್ಲಿ, ಪಾಕ್‌ ತಂಡದ ಮೇಲೆ 4–0ಯಿಂದ ಗೆದ್ದಿತ್ತು.

2019ರಲ್ಲಿ ಭಾರತ ಡೇವಿಸ್ ಕಪ್ ಪಂದ್ಯವಾಡಲು ಪಾಕಿಸ್ತಾನಕ್ಕೆ ತೆರಳಬೇಕಾಗಿತ್ತು. ಆದರೆ ರಾಜತಾಂತ್ರಿಕ ಸಂಬಂಧ ಸೌಹಾರ್ದಯುತವಾಗಿಲ್ಲದ ಕಾರಣ ಪಂದ್ಯವನ್ನು ತಟಸ್ಥ ತಾಣದಲ್ಲಿ (ಕಜಕಸ್ತಾನದಲ್ಲಿ) ಆಡಿಸುವಲ್ಲಿ ಎಐಟಿಎ ಯಶಸ್ವಿ ಆಗಿತ್ತು.

ದೇಶದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸುಮೀತ್ ನಗಾಲ್ ಮತ್ತು ಶಶಿಕುಮಾರ್ ಮುಕುಂದ್ ಅವರ ಅನುಪಸ್ಥಿತಿಯಲ್ಲಿ, ವಿಶ್ವದ 463ನೇ ಕ್ರಮಾಂಕದ ಆಟಗಾರ ರಾಮಕುಮಾರ್ ರಾಮನಾಥನ್ ಅವರು ಭಾರತ ತಂಡದ ಸವಾಲನ್ನು ಮುನ್ನಡೆಸಲಿದ್ದಾರೆ. ಪೂರ್ಣಾವಧಿ ಡಬಲ್ಸ್ ಆಟಗಾರರಾಗಿರುವ ಯೂಕಿ ಭಾಂಬ್ರಿ ಅವರು ಅಗತ್ಯ ಬಿದ್ದಲ್ಲಿ ಸಿಂಗಲ್ಸ್‌ನಲ್ಲಿ ಆಡುವ ಸಾಧ್ಯತೆಯಿದೆ.

ಭಾರತ ತಂಡವು ಎನ್‌.ಶ್ರೀರಾಮ್ ಬಾಲಾಜಿ, ನಿಕಿ ಪೂಣಚ್ಚ ಮತ್ತು ಸಾಕೇತ್ ಮೈನೇನಿ ಅವರನ್ನು ಒಳಗೊಂಡಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಮೊರಾಕ್ಕೊ ವಿರುದ್ಧ ಲಖನೌದಲ್ಲಿ ನಡೆದ ಪಂದ್ಯದ ವೇಳೆ ಡೇವಿಸ್‌ ಕಪ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ದಿಗ್ವಿಜಯ ಪ್ರತಾಪ್ ಸಿಂಗ್ ಅವರು ರಿಸರ್ವ್‌ ಆಟಗಾರರಾಗಿದ್ದಾರೆ.

1964ರಲ್ಲಿ ಆಡಿದ್ದ ಜೀಶಾನ್ ತಂದೆ: ವಿಶೇಷ ಎಂದರೆ, 1964ರ ಮಾರ್ಚ್‌ನಲ್ಲಿ ಲಾಹೋರ್‌ನಲ್ಲಿ ನಡೆದ ಡೇವಿಡ್‌ ಕಪ್ ಪಂದ್ಯದಲ್ಲಿ ಅಖ್ತರ್ ಅಲಿ ಅವರು ಆಟಗಾರರಾಗಿ ನಾಲ್ಕು  ಪಂದ್ಯಗಳ ಪೈಕಿ ಎರಡರಲ್ಲಿ ಆಡಿದ್ದರು. ಅಖ್ತರ್ ಅಲಿ ಅವರು, ಭಾರತ ತಂಡದ ಕೋಚ್ ಆಗಿರುವ ಮತ್ತು ‘ಆಟವಾಡದ ನಾಯಕ’ನ ಹೊಣೆ ವಹಿಸಿರುವ ಜೀಶಾನ್ ಅಲಿ ಅವರ ತಂದೆ.

ಅಖ್ತರ್ ಮೊದಲ ಸಿಂಗಲ್ಸ್‌ನಲ್ಲಿ ಮತ್ತು ಪ್ರೇಮಜಿತ್‌ ಲಾಲ್‌ ಜೊತೆಗೂಡಿ ಡಬಲ್ಸ್‌ ಪಂದ್ಯದಲ್ಲಿ ಜಯಗಳಿಸಿದ್ದರು. ಅಖ್ತರ್ ಮತ್ತು ಲಾಲ್  ಇಬ್ಬರೂ ಈಗ ಇಲ್ಲ.

‌‘ನನ್ನ ತಂದೆ 1964ರಲ್ಲಿ ಆಡಿದ್ದ ತಂಡದ ಭಾಗವಾಗಿದ್ದರು. ಈಗ 60 ವರ್ಷಗಳ ನಂತರ ಭಾರತ ತಂಡದ ಜೊತೆ ಇಲ್ಲಿಗೆ ಬಂದಿರುವುದು ನನಗೆ ಮತ್ತು ನನ್ನ ಕುಟುಂಬಕ್ಕೆ ಸ್ಮರಣೀಯ ಸಂದರ್ಭ. ತಂಡದ ಯುವ ಆಟಗಾರರು ಉತ್ತಮವಾಗಿ ಆಡಿ ಪಂದ್ಯವನ್ನು ನಾವು ಗೆಲ್ಲುವೆವೆಂಬ ವಿಶ್ವಾಸವಿದೆ’ ಎಂದು 54 ವರ್ಷದ ಜೀಶಾನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.