ADVERTISEMENT

ಟೆನಿಸ್ ಚಾಂಪಿಯನ್‌ಷಿಪ್‌: ರೋಚಕ ಹಣಾಹಣಿ ಗೆದ್ದ ಜೈನಾ ಸೆಮಿಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 13:33 IST
Last Updated 22 ಸೆಪ್ಟೆಂಬರ್ 2021, 13:33 IST
ಕೆಎಸ್‌ಎಲ್‌ಟಿಎ
ಕೆಎಸ್‌ಎಲ್‌ಟಿಎ   

ಬೆಂಗಳೂರು: ಅಗ್ರ ಶ್ರೇಯಾಂಕಿತೆ ಜೈನಾ ಅಂಬರ್ ಮತ್ತು ನಾಲ್ಕನೇ ಶ್ರೇಯಾಂಕಿತ ಬಿ.ಶೌರ್ಯ, ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಎಐಟಿಎ 14 ವರ್ಷದೊಳಗಿನವರ ಸಿಎಸ್‌–7 ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕಿಯರ ಮತ್ತು ಬಾಲಕರ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು.

ಬಾಲಕಿಯರ ವಿಭಾಗದ ಎಂಟರ ಘಟ್ಟದಲ್ಲಿ ಕರ್ನಾಟಕದ ಜೈನಾ ಮತ್ತು ದಿಶಾ ಸಂತೋಷ್‌ ನಡುವಿನ ಪಂದ್ಯ ರೋಚಕವಾಗಿತ್ತು.4-6, 7-5, 6-3ರಲ್ಲಿ ಜೈನಾ ಜಯಭೇರಿ ಮೊಳಗಿಸಿದರು. ಮೊದಲ ಸೆಟ್‌ನಲ್ಲಿ 4–6ರ ಸೋಲು ಕಂಡಿದ್ದ ಜೈನಾ ಎರಡನೇ ಸೆಟ್‌ನಲ್ಲಿ 3–5ರ ಹಿನ್ನಡೆಯಲ್ಲಿದ್ದರು. ನಿರ್ಣಾಯಕ ಹಂತದಲ್ಲಿ ಮೂರು ಮ್ಯಾಚ್ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟು ಇನ್ನೇನು ಸೋತೇ ಬಿಡುತ್ತಾರೆ ಎಂಬ ಪರಿಸ್ಥಿತಿಯಲ್ಲಿದ್ದರು.

ಈ ಸಂದರ್ಭದಲ್ಲಿ ಪುಟಿದೆದ್ದ 13ರ ಹರೆಯದ ಜೈನಾ ನಾಲ್ಕು ಗೇಮ್‌ಗಳನ್ನು ಗೆದ್ದುಕೊಂಡು ಎರಡನೇ ಸೆಟ್ ತಮ್ಮದಾಗಿಸಿಕೊಂಡರು. ಮುಂದಿನ ಸೆಟ್‌ನಲ್ಲಿ ಭರ್ಜರಿ ತಿರುಗೇಟು ನೀಡಿದ ಅವರು 6–3ರಲ್ಲಿ ಜಯ ಗಳಿಸಿ ಪಂದ್ಯವನ್ನು ಗೆದ್ದುಕೊಂಡರು.

ADVERTISEMENT

ಬಾಲಕರ ವಿಭಾಗದಲ್ಲಿ ಶೌರ್ಯ ಪ್ರಬಲ ಪೈಪೋಟಿಯಲ್ಲಿ ಐದನೇ ಶ್ರೇಯಾಂಕದ ಕೆ.ಲತೀಶ್‌ ಎದುರು 7-6 (8), 6-3ರಲ್ಲಿ ಜಯ ಗಳಿಸಿದರು. ಅಗ್ರ ಶ್ರೇಯಾಂಕಿತ, ಮಣಿಪುರದ ಅಶ್ವಜೀತ್‌ 6-1, 7-5ರಲ್ಲಿ ಸಂಚಿತ್ ರಾವ್ ವಿರುದ್ಧ ಗೆಲುವು ಸಾಧಿಸಿದರೆ ಎರಡನೇ ಶ್ರೇಯಾಂಕದ ಡಿ.ಆರಾಧ್ಯ 6-0, 6-0ಯಿಂದ ಸಫೂರ್ ಮೊಯ್ದೀನ್ ವಿರುದ್ಧ, ಮೂರನೇ ಶ್ರೇಯಾಂಕದ ಕ್ಷಿತಿಜ್ಆರಾಧ್ಯ 6-3, 2-6, 6-0ರಲ್ಲಿ ಬಾಬು ಕ್ರಿಸ್ಟೊ ವಿರುದ್ಧ ಗೆದ್ದರು.

ಬಾಲಕಿಯರ ವಿಭಾಗದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಜೈನಾ ಅವರು ಸುಶ್ಮಿತಾ ರವಿ ವಿರುದ್ಧ ಸೆಣಸುವರು. ಮೂರನೇ ಶ್ರೇಯಾಂಕಿತೆ, ತಮಿಳುನಾಡಿನ ಸಮೃದ್ಧಿ ಎದುರಿನ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಸುಶ್ಮಿತಾ6-0, 6-2ರಲ್ಲಿ ಗೆಲುವು ಸಾಧಿಸಿದರು. ಶ್ರೇಯಾಂಕರಹಿತ ಆಟಗಾರ್ತಿ ತಮಿಳುನಾಡಿನ ದಿವ್ಯಾ ರಮೇಶ್ ಧನ್ಯತಾ ಧರಣಿ ಎದುರು 6-2, 6-2ರಲ್ಲಿ ಜಯ ಸಾಧಿಸಿದರು. ಎರಡನೇ ಶ್ರೇಯಾಂಕಿತೆ ಅಣ್ವಿ ಪುನಗಂಟಿ6-3, 6-2ರಲ್ಲಿ ಏಳನೇ ಶ್ರೇಯಾಂಕದ ವಾರುಣ್ಯ ಎದುರು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.