ಧರ್ಮಶಾಲಾ: ಹಿಮಾಲಯದ ಅಂಗಣದಲ್ಲಿ ಶನಿವಾರ ಮುಸ್ಸಂಜೆ ಆಸ್ಟ್ರೇಲಿಯಾ ತಂಡವು ರೋಚಕ ಜಯ ಸಾಧಿಸಿತು. ನ್ಯೂಜಿಲೆಂಡ್ ತಂಡವು ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿತು.
ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿದ್ದ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ 5 ರನ್‌ಗಳಿಂದ ಜಯಿಸಿತು. ಅದಕ್ಕೆ ಟ್ರಾವಿಸ್ ಹೆಡ್ (67 ಎಸೆತದಲ್ಲಿ 109) ಅಬ್ಬರದ ಶತಕ ಪ್ರಮುಖ ಕಾರಣವಾಯಿತು. 389 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ನ್ಯೂಜಿಲೆಂಡ್ ಹೋರಾಟಕ್ಕೆ ಬೆಂಗಳೂರು ಹುಡುಗ ರಚಿನ್ (89 ಎಸೆತಗಳಲ್ಲಿ 116) ತಮ್ಮ ಶತಕದ ಮೂಲಕ ಬಲ ತುಂಬಿದರು. ಉಳಿದ ಬ್ಯಾಟರ್‌ಗಳೂ ತಂಡವನ್ನು ಗೆಲುವಿನ ಗಡಿ ದಾಟಿಸುವ ಪ್ರಯತ್ನ ಮಾಡಿದರು. ಆದರೂ ಕೊನೆಯ ಓವರ್‌ನಲ್ಲಿ 19 ರನ್‌ಗಳ ಅಗತ್ಯವಿದ್ದಾಗ ಕಿವೀಸ್ ತಂಡದಲ್ಲಿ ಎರಡು ವಿಕೆಟ್‌ಗಳು ಮಾತ್ರ ಬಾಕಿ ಇದ್ದವು. ಜಿಮ್ಮಿ ನಿಶಾಮ್ (58; 39ಎ) ಕ್ರೀಸ್‌ನಲ್ಲಿ ಇದ್ದರು.
ಈ ಓವರ್ ಅನ್ನು ಅನುಭವಿ ಬೌಲರ್ ಮಿಚೆಲ್ ಸ್ಟಾರ್ಕ್ ಬೌಲಿಂಗ್ ಮಾಡಿದರು. ಕೆಲವು ನಾಟಕೀಯ ಪ್ರಸಂಗಗಳು ಈ ಓವರ್‌ನಲ್ಲಿ ನಡೆದವು. ಸ್ಟಾರ್ಕ್ ಹಾಕಿದ ವೈಡ್ ಎಸೆತ ಬೌಂಡರಿಗೆರೆ ದಾಟಿತು. ಇದರಿಂದಾಗಿ ಕಿವೀಸ್ ಬಳಗದಲ್ಲಿ ಸಂತಸ ಹೊನಲಾಯಿತು. ಆದರೆ ಇದರಿಂದ ಎದೆಗುಂದದ ಆಸ್ಟ್ರೇಲಿಯಾ ಆಟಗಾರರು ಅಮೋಘವಾಗಿ ಫೀಲ್ಡಿಂಗ್ ಮಾಡಿ ರನ್‌ಗಳನ್ನು ತಡೆದರು. ಇದೇ ಓವರ್‌ನಲ್ಲಿ ನಿಶಾಮ್ ಅವರನ್ನು ರನೌಟ್ ಮಾಡಿದ ಫೀಲ್ಡರ್ ಲಾಬುಷೇನ್ ಮತ್ತು ವಿಕೆಟ್‌ಕೀಪರ್ ಜೋಷ್ ಇಂಗ್ಲಿಷ್ ಕಿವೀಸ್‌ಗೆ ಬಲವಾದ ಪೆಟ್ಟು ಕೊಟ್ಟರು. ಆಗಲೂ ಕೊನೆಯ ಎಸೆತದಲ್ಲಿ ಆರು ರನ್ ಅಗತ್ಯವಿತ್ತು. ಬ್ಯಾಟರ್ ಫರ್ಗ್ಯುಸನ್ ಅವರಿಗೆ ಸಿಕ್ಸರ್ ಹೊಡೆಯಲು ಸ್ಟಾರ್ಕ್ ಬಿಡಲಿಲ್ಲ.
19 ಓವರ್ 175 ರನ್
ಬೆಳಿಗ್ಗೆ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡವು ಆಸ್ಟ್ರೇಲಿಯಾದ ಆರಂಭಿಕ ಜೋಡಿ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ (65ಎಸೆತಗಳಲ್ಲಿ 81) ಅವರಿಬ್ಬರೂ ಮೊದಲ ವಿಕೆಟ್ ಜೊತೆಯಾಟದಲ್ಲಿ 175 ರನ್ ಗಳಿಸಿದರು. ಅದೂ ಕೇವಲ 19 ಓವರ್‌ಗಳಲ್ಲಿ. ಈ ಅಡಿಪಾಯದ ಮೇಲೆ ಆಸ್ಟ್ರೇಲಿಯಾ 388 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಗಾಯದಿಂದ ಚೇತರಿಸಿಕೊಂಡು ಮರಳಿದ ನಂತರ ಟ್ರಾವಿಸ್ ಆಡಿದ ಮೊದಲ ಪಂದ್ಯ ಇದು. ಅವರು ವಾರ್ನರ್‌ಗಿಂತ ವೇಗವಾಗಿ ಆಡಿದರು. 25 ಎಸೆತಗಳಲ್ಲಿ 50 ರನ್ ಗಳಿಸಿದರು. ನಂತರ ಶತಕದತ್ತ ವೇಗವಾಗಿ ಸಾಗಿದರು. ಏಕದಿನ ಕ್ರಿಕೆಟ್‌ನಲ್ಲಿ ಇದು ಅವರ 4ನೇ ಶತಕ. ಟೂರ್ನಿಯಲ್ಲಿ ಮೂರನೇ ಶತಕ ದಾಖಲಿಸುವ ವಾರ್ನರ್ ಆಸೆ ಈಡೇರಲಿಲ್ಲ. ಇವರ ಜೊತೆಯಾಟವನ್ನು 20ನೇ ಓವರ್ ಬೌಲಿಂಗ್ ಮಾಡಿದ ಗ್ಲೆನ್ ಫಿಲಿಪ್ಸ್ ಮುರಿದರು. ಅವರ ಬೌಲಿಂಗ್‌ಗೆ ವಾರ್ನರ್ ಔಟ್ ಆದರು. ಮೂರು ಓವರ್‌ಗಳ ನಂತರ ಹೆಡ್ ವಿಕೆಟ್ ಕೂಡ ಉರುಳಿಸಿದ ಗ್ಲೆನ್ ಸಂಭ್ರಮಿಸಿದರು.
ಆದರೆ ಉಳಿದ ಬ್ಯಾಟರ್‌ಗಳು ಸಣ್ಣ ಸಣ್ಣ ಇನಿಂಗ್ಸ್ ಆಡಿದರೂ ತಂಡವು ಬೃಹತ್ ಮೊತ್ತ ಗಳಿಸಲು ಕಾರಣರಾದರು.
ರಚಿನ್ ಶತಕ
ಗುರಿ ಬೆನ್ನಟ್ಟಿದ ಕಿವೀಸ್‌ಗೂ ಡೆವೊನ್ ಕಾನ್ವೆ ಮತ್ತು ವಿಲ್ ಯಂಗ್ ಉತ್ತಮ ಆರಂಭ ನೀಡಿದರು. ಆದರೆ ತಂಡದ ಮೊತ್ತವೂ 72 ರನ್‌ಗಳಾಗಿದ್ದಾಗ ಇವರಿಬ್ಬರೂ ಪೆವಿಲಿಯನ್ ಸೇರಿದ್ದರು.
ಈ ಹಂತದಲ್ಲಿ ರಚಿನ್ ಮತ್ತು ಡೆರಿಲ್ ಮಿಚೆಲ್ (54) ಮೂರನೇ ವಿಕೆಟ್ ಜೊತೆಯಾಟದಲ್ಲಿ 96 ರನ್ ಸೇರಿಸಿದರು. ರಚಿನ್ ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಶತಕ ದಾಖಲಿಸಿದರು. ಅವರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಟಾಮ್ ಲಥಾಮ್ ಜೊತೆಗೆ 55 ರನ್ ಗಳಿಸಿದರು. ಆದರೆ, ಇನ್ನೊಂದೆಡೆ ಆಸ್ಟ್ರೇಲಿಯಾ ಬೌಲರ್‌ಗಳು ಪ್ರಮುಖ ಘಟ್ಟಗಳಲ್ಲಿ ವಿಕೆಟ್‌ಗಳನ್ನು ಉರುಳಿಸಿದರು.
ಸಂಕ್ಷಿಪ್ತ ಸ್ಕೋರು
ಆಸ್ಟ್ರೇಲಿಯಾ: 49.2 ಓವರ್‌ಗಳಲ್ಲಿ 388 (ಡೇವಿಡ್ ವಾರ್ನರ್ 81, ಟ್ರಾವಿಸ್ ಹೆಡ್ 109, ಮಿಚೆಲ್ ಮಾರ್ಷ್ 36, ಗ್ಲೆನ್ ಮ್ಯಾಕ್ಸ್‌ವೆಲ್ 41, ಜೋಷ್ ಇಂಗ್ಲಿಷ್ 38, ಪ್ಯಾಟ್ ಕಮಿನ್ಸ್ 37, ಟ್ರೆಂಟ್ ಬೌಲ್ಡ್ 77ಕ್ಕೆ3, ಮಿಚೆಲ್ ಸ್ಯಾಂಟನರ್ 80ಕ್ಕೆ2, ಗ್ಲೆನ್ ಫಿಲಿಪ್ಸ್ 37ಕ್ಕೆ3, ಜಿಮ್ಮಿ ನಿಶಾಮ್ 32ಕ್ಕೆ1, ಮ್ಯಾಟ್ ಹೆನ್ರಿ 67ಕ್ಕೆ1)
ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 383 (ಡೆವೊನ್ ಕಾನ್ವೆ 28, ವಿಲ್ ಯಂಗ್ 32, ರಚಿನ್ ರವೀಂದ್ರ 116, ಡೆರಿಲ್ ಮಿಚೆಲ್ 54, ಟಾಮ್ ಲಥಾಮ್ 21, ಜೇಮ್ಸ್ ನಿಶಾಮ್ 58, ಮಿಚೆಲ್ ಸ್ಯಾಂಟನರ್ 17, ಟ್ರೆಂಟ್ ಬೌಲ್ಟ್ ಔಟಾಗದೆ 10, ಜೋಷ್ ಹ್ಯಾಜಲ್‌ವುಡ್ 70ಕ್ಕೆ2, ಪ್ಯಾಟ್ ಕಮಿನ್ಸ್ 66ಕ್ಕೆ2, ಆ್ಯಡಂ ಜಂಪಾ 74ಕ್ಕೆ3)
ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 5 ರನ್‌ಗಳ ಜಯ ಹಾಗೂ ಎರಡು ಅಂಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.