ADVERTISEMENT

AUS vs NZ | 48ನೇ ಓವರ್‌ನಲ್ಲಿ 4 ಸಿಕ್ಸರ್; 49ನೇ ಓವರ್‌ನಲ್ಲಿ 3 ವಿಕೆಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2023, 10:52 IST
Last Updated 28 ಅಕ್ಟೋಬರ್ 2023, 10:52 IST
<div class="paragraphs"><p>ಆಸ್ಟ್ರೇಲಿಯಾದ ಪ್ಯಾಟ್‌ ಕಮಿನ್ಸ್‌ ಹಾಗೂ ನ್ಯೂಜಿಲೆಂಡ್‌ನ ಟ್ರೆಂಟ್‌ ಬೌಲ್ಟ್‌</p></div>

ಆಸ್ಟ್ರೇಲಿಯಾದ ಪ್ಯಾಟ್‌ ಕಮಿನ್ಸ್‌ ಹಾಗೂ ನ್ಯೂಜಿಲೆಂಡ್‌ನ ಟ್ರೆಂಟ್‌ ಬೌಲ್ಟ್‌

   

ಪಿಟಿಐ ಚಿತ್ರಗಳು

ಧರ್ಮಶಾಲಾ: ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಆಸ್ಟ್ರೇಲಿಯಾ, ಕೊನೆ ಹಂತದಲ್ಲಿ ನಾಟಕೀಯ ಕುಸಿತ ಕಂಡಿತು.

ADVERTISEMENT

ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆಸಿಸ್, 49.2 ಓವರ್‌ಗಳಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 388 ರನ್‌ ಪೇರಿಸಿತು. 400ಕ್ಕಿಂತ ಅಧಿಕ ರನ್‌ ಗಳಿಸುವ ಅವಕಾಶವನ್ನು ಸ್ವಲ್ಪದರಲ್ಲೇ ಕೈ ಚೆಲ್ಲಿತು.

ಆಸಿಸ್‌ ಪರ ಇನಿಂಗ್ಸ್‌ ಆರಂಭಿಸಿದ ಡೇವಿಡ್‌ ವಾರ್ನರ್‌ ಹಾಗೂ ಟ್ರಾವಿಸ್‌ ಹೆಡ್‌ ಆರಂಭದಲ್ಲೇ ಟಿ20 ಶೈಲಿಯಲ್ಲಿ ಬ್ಯಾಟ್‌ ಬೀಸಿದರು. ವಾರ್ನರ್‌ 65 ಎಸೆತಗಳಲ್ಲಿ 81 ರನ್‌ ಗಳಿಸಿರೆ, ಹೆಡ್‌ 67 ಎಸೆತಗಳಲ್ಲಿ 109 ರನ್‌ ಗಳಿಸಿದರು. ಮಿಚೇಲ್‌ ಮಾರ್ಷ್ (36), ಸ್ಟೀವ್‌ ಸ್ಮಿತ್‌ (18), ಮಾರ್ನಸ್‌ ಲಾಬುಷೇನ್‌ (18) ಅಲ್ಪಕಾಣಿಕೆ ನೀಡಿದರು.

1–19 ಓವರ್‌ಗಳಲ್ಲಿ 175 ರನ್ ಬಿಟ್ಟುಕೊಟ್ಟಿದ್ದ ಕಿವೀಸ್, ನಂತರ 20-39 ಓವರ್‌ಗಳಲ್ಲಿ 104 ರನ್‌ ನೀಡಿ 5 ವಿಕೆಟ್‌ ಗಳಿಸಿ ಕಮ್‌ಬ್ಯಾಕ್ ಮಾಡಿತ್ತು. ಆದರೆ, ಕೊನೇ ಹಂತದಲ್ಲಿ 40 ರಿಂದ 50 ಓವರ್‌ಗಳಲ್ಲಿ ಬರೋಬ್ಬರಿ 109 ರನ್‌ ಬಿಟ್ಟುಕೊಟ್ಟಿತು.

ಅಂತಿಮ ಓವರ್‌ಗಳಲ್ಲಿ ಗ್ಲೆನ್ ಮಾಕ್ಸ್‌ವೆಲ್‌ (24 ಎಸೆತ, 41 ರನ್), ಜೋಶ್‌ ಇಂಗ್ಲಿಸ್ (28 ಎಸೆತ, 38 ರನ್) ಹಾಗೂ ಪ್ಯಾಟ್‌ ಕಮಿನ್ಸ್‌ (14 ಎಸೆತ, 37 ರನ್) ಅಬ್ಬರಿಸಿದರು.

3 ಓವರ್‌ಗಳಲ್ಲಿ 58 ರನ್‌
ಆಸ್ಟ್ರೇಲಿಯಾ ತಂಡದ ಮೊತ್ತ 45 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್‌ಗೆ 329 ರನ್‌ ಆಗಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಇಂಗ್ಲಿಸ್ ಮತ್ತು ಕಮಿನ್ಸ್‌ ಲೀಲಾಜಾಲವಾಗಿ ಬ್ಯಾಟ್‌ ಬೀಸಿದರು. ನ್ಯೂಜಿಲೆಂಡ್‌ ಪರ ಈ ಟೂರ್ನಿಯಲ್ಲಿ ಅಧಿಕ ವಿಕೆಟ್‌ ಪಡೆದ ವೇಗಿ ಎನಿಸಿರುವ ಮ್ಯಾಟ್‌ ಹೆನ್ರಿ ಹಾಕಿದ 46ನೇ ಓವರ್‌ನಲ್ಲಿ ಮೂರು ಬೌಂಡರಿ ಸಹಿತ 15 ರನ್‌, ಟ್ರೆಂಟ್‌ ಬೌಲ್ಟ್‌ ಹಾಕಿದ 47ನೇ ಓವರ್‌ನಲ್ಲಿ ತಲಾ ಒಂದು ಸಿಕ್ಸ್ ಹಾಗೂ ಬೌಂಡರಿ ಸಹಿತ 16 ರನ್‌ ದೋಚಿದರು.

ಬಳಿಕ ಜೇಮ್ಸ್‌ ನಿಶಾಮ್‌ ಹಾಕಿದ 48ನೇ ಓವರ್‌ನಲ್ಲಿ 4 ಸಿಕ್ಸರ್‌ ಸಹಿತ 27 ರನ್‌ ಚಚ್ಚಿದರು. ಹೀಗಾಗಿ ತಂಡದ ಮೊತ್ತ ಏಕಾಏಕಿ 387ಕ್ಕೆ ಏರಿತು. ಹೀಗಾಗಿ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 2ನೇ ಬಾರಿಗೆ 400ಕ್ಕಿಂತ ಅಧಿಕ ರನ್‌ ಕಲೆಹಾಕುವ ಸೂಚನೆ ನೀಡಿತ್ತು.

1 ರನ್‌, 4 ವಿಕೆಟ್‌
ಆದರೆ, ಬೌಲ್ಟ್‌ ಅದಕ್ಕೆ ಅವಕಾಶ ನೀಡಲಿಲ್ಲ. 49ನೇ ಓವರ್‌ನಲ್ಲಿ ಕೇವಲ 1 ರನ್‌ ನೀಡಿ ಇಂಗ್ಲಿಸ್, ಕಮಿನ್ಸ್‌ ಮತ್ತು ಆ್ಯಡಂ ಜಂಪಾ (0) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ನಂತರದ ಓವರ್‌ನಲ್ಲಿ ಮಿಚೇಲ್‌ ಸ್ಟಾರ್ಕ್‌ ಅವರನ್ನು ಹೊರದಬ್ಬಿದ ಹೆನ್ರಿ, ಆಸಿಸ್‌ ಇನಿಂಗ್ಸ್‌ಗೆ ಕೊನೆ ಹಾಡಿದರು.

ನ್ಯೂಜಿಲೆಂಡ್ ಪರ ಗ್ಲೆನ್‌ ಫಿಲಿಪ್ಸ್‌ ಹಾಗೂ ಟ್ರೆಂಟ್‌ ಬೌಲ್ಟ್‌ ತಲಾ ಮೂರು ವಿಕೆಟ್‌ ಪಡೆದರೆ, ಮಿಚೇಲ್‌ ಸ್ಯಾಂಟ್ನರ್‌ 2 ಹಾಗೂ ಜೇಮ್ಸ್ ನಿಶಾಮ್, ಮ್ಯಾಟ್‌ ಹೆನ್ರಿ ತಲಾ ಒಂದೊಂದು ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.