ಮುಂಬೈ: ಭಾರತ ಕ್ರಿಕೆಟ್ ತಂಡವು ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನ ತೋರಿದೆ ಎಂದು ಬಾಲಿವುಡ್ ನಟಿ ಕತ್ರಿನಾ ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ಟೂರ್ನಿಯಲ್ಲಿ ಆಡಿರುವ ಎಲ್ಲ (10) ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಆಟವನ್ನು ನೋಡಲು ರೋಮಾಂಚನಕಾರಿಯಾಗಿತ್ತು ಎಂದೂ ಅನುಭವ ಹಂಚಿಕೊಂಡಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ನವೆಂಬರ್ 19ರಂದು) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.
ಪಂದ್ಯದ ಕುರಿತು ಮಾತನಾಡಿರುವ ಕೈಫ್, 'ಅಸಾಧಾರಣ ಪ್ರದರ್ಶನ ತೋರಿರುವ ಭಾರತ ತಂಡವನ್ನು ಹುರಿದುಂಬಿಸುತ್ತೇನೆ. ಟೂರ್ನಿಯುದ್ದಕ್ಕೂ ಪಂದ್ಯಗಳು ರೋಮಾಂಚನಕಾರಿಯಾಗಿದ್ದವು' ಎಂದಿದ್ದಾರೆ.
'ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ನಮ್ಮ ನೆರೆಹೊರೆಯವರೇ. ಹೀಗಾಗಿ ಅವರನ್ನು ನೋಡುವುದು ಮತ್ತು ಉತ್ತೇಜಿಸುವುದು ಮತ್ತಷ್ಟು ಖುಷಿಯ ಸಂಗತಿ. ಟೀಂ ಇಂಡಿಯಾ ಫೈನಲ್‌ನಲ್ಲಿಯೂ ಅತ್ಯದ್ಭುತ ಪ್ರದರ್ಶನ ನೀಡಲಿದೆ ಎಂಬ ಖಾತ್ರಿ ಇದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಮುಂಬೈನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ 117 ರನ್ ಗಳಿಸಿದ ಕೊಹ್ಲಿ, ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿದ ಸಾಧನೆ ಮಾಡಿದರು. ಆ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ಪುಡಿಗಟ್ಟಿದರು.
ಈ ವೇಳೆ ಕತ್ರಿನಾ ಅವರು ತಮ್ಮ ಪತಿ ವಿಕ್ಕಿ ಕೌಶಲ್ ಅವರೊಂದಿಗೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದರು. ನಟ ರಜನಿಕಾಂತ್, ಅನುಷ್ಕಾ ಶರ್ಮಾ, ರಣಬೀರ್ ಕಪೂರ್, ಜಾನ್ ಅಬ್ರಹಾಂ, ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರ ಅಡ್ವಾನಿ, ಕುನಾಲ್ ಖೆಮ್ಮು, ಸೋಹಾ ಅಲಿ ಖಾನ್ ಸೇರಿದಂತೆ ಇನ್ನೂ ಹಲವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.