ADVERTISEMENT

Virat Kohli: ಏಕದಿನದಲ್ಲಿ 50ನೇ ಶತಕ; ಒಂದೇ ಪಂದ್ಯದಲ್ಲಿ ಕೊಹ್ಲಿ ಹಲವು ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2023, 13:30 IST
Last Updated 15 ನವೆಂಬರ್ 2023, 13:30 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   

(ಪಿಟಿಐ ಚಿತ್ರ)

ಮುಂಬೈ: ಟೀಮ್ ಇಂಡಿಯಾದ ಬ್ಯಾಟರ್, 'ರನ್ ಮೆಶಿನ್' ಖ್ಯಾತಿಯ ವಿರಾಟ್ ಕೊಹ್ಲಿ, ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಅರ್ಧಶತಕ ಸೇರಿದಂತೆ ಹಲವು ದಾಖಲೆಗಳನ್ನು ಬರೆದಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ಐತಿಹಾಸಿಕ ಶತಕ ಸಾಧನೆ ಮಾಡಿರುವ ವಿರಾಟ್, ಹಲವು ಸ್ಮರಣೀಯ ದಾಖಲೆಗಳನ್ನು ಬರೆದರು.

ADVERTISEMENT

ಕೊಹ್ಲಿ 113 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ 117 ರನ್ ಗಳಿಸಿದರು.

ಸಚಿನ್ ಹೆಸರಲ್ಲಿದ್ದ ಅವಳಿ ದಾಖಲೆ ಮುರಿದ ವಿರಾಟ್...

ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕ ಗಳಿಸಿದ ಮೊತ್ತ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. ಈ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (49 ಶತಕ) ಅವರ ಹೆಸರಲ್ಲಿದ್ದ ದಾಖಲೆಯನ್ನು ಕಿಂಗ್ ಕೊಹ್ಲಿ ಮುರಿದಿದ್ದಾರೆ. ಇದೇ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಶತಕ ಗಳಿಸಿದ್ದ ವಿರಾಟ್, ಸಚಿನ್ ದಾಖಲೆಯನ್ನು ಸರಿಗಟ್ಟಿದ್ದರು.

ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಾಧನೆ:

  • ವಿರಾಟ್ ಕೊಹ್ಲಿ: 50

  • ಸಚಿನ್ ತೆಂಡೂಲ್ಕರ್: 49

  • ರೋಹಿತ್ ಶರ್ಮಾ: 31

  • ರಿಕಿ ಪಾಂಟಿಂಗ್: 30

  • ಸನತ್ ಜಯಸೂರ್ಯ: 28

ವಿರಾಟ್ ಕೊಹ್ಲಿ ಶತಕದ ಸಂಭ್ರಮ

ಸಚಿನ್ ಹೆಸರಲ್ಲಿದ್ದ 20 ವರ್ಷಗಳ ಹಳೆಯ ದಾಖಲೆ ಮುರಿದ ವಿರಾಟ್...

ಏಕದಿನ ವಿಶ್ವಕಪ್‌ನ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪೈಕಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದಾರೆ.

ಪ್ರಸಕ್ತ ತವರಿನಲ್ಲಿ ಸಾಗುತ್ತಿರುವ ವಿಶ್ವಕಪ್‌ನಲ್ಲಿ ಸಚಿನ್ ದಾಖಲೆ ಮುರಿದಿರುವ ವಿರಾಟ್, ಏಕದಿನ ವಿಶ್ವಕಪ್ ಆವೃತ್ತಿಯೊಂದರ 700ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿದರು. 2003ರ ಏಕದಿನ ವಿಶ್ವಕಪ್‌ನಲ್ಲಿ ಸಚಿನ್ 673 ರನ್ ಗಳಿಸಿದ್ದರು.

ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಸಾಧನೆ:

  • ವಿರಾಟ್ ಕೊಹ್ಲಿ: 711* ರನ್ (2023)

  • ಸಚಿನ್ ತೆಂಡೂಲ್ಕರ್: 673 ರನ್ (2003)

  • ಮ್ಯಾಥ್ಯೂ ಹೇಡನ್: 659 ರನ್ (2007)

  • ರೋಹಿತ್ ಶರ್ಮಾ: 648 ರನ್ (2019)

  • ಡೇವಿಡ್ ವಾರ್ನರ್: 647 ರನ್ (2019)

ಪಾಂಟಿಂಗ್ ದಾಖಲೆ ಪತನ...

ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆಯನ್ನು ಭಾರತದ ವಿರಾಟ್ ಕೊಹ್ಲಿ ಮುರಿದಿದ್ದಾರೆ. ಈ ಮೂಲಕ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾರ್ವಕಾಲಿಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ (18,426) ಗಳಿಸಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ (14,234) ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿರುವ ಕೊಹ್ಲಿ ಒಟ್ಟು 13,794 ರನ್ ಗಳಿಸಿದ್ದಾರೆ.

ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಸಾಧನೆ:

  • ಸಚಿನ್ ತೆಂಡೂಲ್ಕರ್: 18,426

  • ಕುಮಾರ ಸಂಗಕ್ಕರ: 14,234

  • ವಿರಾಟ್ ಕೊಹ್ಲಿ: 13,794*

  • ರಿಕಿ ಪಾಂಟಿಂಗ್: 13,704

  • ಸನತ್ ಜಯಸೂರ್ಯ: 13,430

8ನೇ ಸಲ 50ಕ್ಕೂ ಹೆಚ್ಚು ರನ್ ಸಾಧನೆ...

ಅಲ್ಲದೆ ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ 8ನೇ ಸಲ 50ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಖ್ಯಾತಿಗೂ ಕೊಹ್ಲಿ ಭಾಜನರಾಗಿದ್ದಾರೆ.

80ನೇ ಶತಕ..

ಒಟ್ಟಾರೆಯಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಟೆಸ್ಟ್, ಏಕದಿನ, ಟ್ವೆಂಟಿ-20 ಸೇರಿದಂತೆ) ವಿರಾಟ್ ಕೊಹ್ಲಿ 80ನೇ ಶತಕ ಸಾಧನೆ ಮಾಡಿದ್ದಾರೆ. ಇದರಲ್ಲಿ ಏಕದಿನದಲ್ಲಿ 50, ಟೆಸ್ಟ್‌ನಲ್ಲಿ 29 ಮತ್ತು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಒಂದು ಶತಕ ಸೇರಿವೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳ ಸಾಧನೆ (ಟೆಸ್ಟ್, ಏಕದಿನ, ಟ್ವೆಂಟಿ-20 ಸೇರಿದಂತೆ):

  • ಸಚಿನ್ ತೆಂಡೂಲ್ಕರ್: 100

  • ವಿರಾಟ್ ಕೊಹ್ಲಿ: 80

  • ರಿಕಿ ಪಾಂಟಿಂಗ್: 71

  • ಕುಮಾರ ಸಂಗಕ್ಕರ: 63

  • ಜ್ಯಾಕ್ ಕಾಲಿಸ್: 62

ವಿರಾಟ್ ಕೊಹ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.