ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಶತಕ ಗಳಿಸಿರುವ ನ್ಯೂಜಿಲೆಂಡ್‌ನ ಉದಯೋನ್ಮುಖ ಬ್ಯಾಟರ್ ರಚಿನ್ ರವೀಂದ್ರ ಅವರನ್ನು ಭಾರತದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಮುಕ್ತಕಂಠದಿಂದ ಹೊಗಳಿದ್ದಾರೆ.
ಇದನ್ನು ಉಲ್ಲೇಖ ಮಾಡಿರುವ ಸೆಹ್ವಾಗ್, ಕಳೆದ ಹಲವಾರು ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಕಾಟ ಕೊಡುವುದನ್ನು ಸಚಿನ್ ಹಾಗೂ ರಾಹುಲ್ ರೂಢಿ ಮಾಡಿಕೊಂಡಿದ್ದರು. ಈಗಲೂ ಆ ಪ್ರವೃತ್ತಿಯನ್ನು ರಚಿನ್ ಮುಂದುವರಿಸಿದ್ದಾರೆ. ಎಂತಹ ಅದ್ಭುತ ಆಟ ಎಂದು ಶ್ಲಾಘಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಚಿನ್ ಅಮೋಘ ಶತಕ ಗಳಿಸಿದ್ದಾರೆ. ಇದು ಈ ಬಾರಿಯ ವಿಶ್ವಕಪ್‌ನಲ್ಲಿ ರಚಿನ್ ಗಳಿಸಿದ ಮೂರನೇ ಶತಕವಾಗಿದೆ. 94 ಎಸೆತಗಳಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 108 ರನ್ ಗಳಿಸಿದರು.
ರಚಿನ್ ಬೆಂಗಳೂರು ನಂಟು...
ರಚಿನ್ ಅವರು ಹುಟ್ಟಿ ಬೆಳೆದದ್ದು ನ್ಯೂಜಿಲೆಂಡ್‌ನಲ್ಲಾದರೂ, ಬೆಂಗಳೂರು ಜತೆ ನಂಟು ಹೊಂದಿದ್ದಾರೆ. ಅವರ ತಂದೆ, ರವೀಂದ್ರ ಬೆಂಗಳೂರಿನವರು. ಹೆತ್ತವರ ಜತೆ ರಚಿನ್ ಹಲವು ಸಲ ಬೆಂಗಳೂರಿಗೆ ಬಂದಿದ್ದಾರೆ. ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪ್ರೀತಿಯ ಮೇಲೆ ಮಗನಿಗೆ ರಚಿನ್ (ರ ಹಾಗೂ ಚಿನ್) ಎಂಬ ಹೆಸರನ್ನು ಇಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.