ಕೋಲ್ಕತ್ತ: ಇಡೀ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೇ ಸೆಮಿಫೈನಲ್ ಪ್ರವೇಶಿಸಿರುವ ಭಾರತದ ತಂಡದ ‘ಓಟ’ಕ್ಕೆ ಕಡಿವಾಣ ಹಾಕುವ ಛಲದಲ್ಲಿ ದಕ್ಷಿಣ ಆಫ್ರಿಕಾ ಇದೆ. ಇನ್ನೊಂದೆಡೆ ಆಡಿದ ಪ್ರತಿ ಪಂದ್ಯದಲ್ಲಿಯೂ ರನ್‌ಗಳ ಹೊಳೆ ಹರಿಸುತ್ತಿರುವ ಹರಿಣಗಳ ಆಟಕ್ಕೆ ಕಡಿವಾಣ ಹಾಕಲು ಆತಿಥೇಯರು ಸುಸಜ್ಜಿತರಾಗಿ ನಿಂತಿದ್ದಾರೆ.
ಈ ಎರಡೂ ತಂಡಗಳು ಈಡನ್ ಗಾರ್ಡನ್ಸ್‌ನಲ್ಲಿ ಭಾನುವಾರ ಮುಖಾಮುಖಿಯಾಗಲಿವೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡಗಳು ರೌಂಡ್ ರಾಬಿನ್ ಲೀಗ್‌ನಲ್ಲಿ ಅತ್ಯಂತ ಬಲಾಢ್ಯ ತಂಡಗಳಾಗಿ ಹೊರಹೊಮ್ಮಿವೆ. ಆಡಿದ ಏಳು ಪಂದ್ಯಗಳಲ್ಲಿಯೂ ಭಾರತ ಗೆದ್ದಿದೆ.
ಆದರೆ ಇಷ್ಟೇ ಪಂದ್ಯಗಳನ್ನು ಆಡಿರುವ ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ನೆದರ್ಲೆಂಡ್ಸ್ ವಿರುದ್ಧ ಅನುಭವಿಸಿದ್ದ ಆಘಾತ ಬಿಟ್ಟರೆ ಉಳಿದದ್ದರಲ್ಲಿ ಭರ್ಜರಿ ಜಯ ಸಾಧಿಸಿದೆ. ಅಲ್ಲದೇ ಉಳಿದೆಲ್ಲ ತಂಡಗಳಿಗಿಂತ ಹೆಚ್ಚು ನೆಟ್ ರನ್ ರೇಟ್ ಹೊಂದಿದೆ.
ಆದರೂ ಭಾರತವನ್ನು ಸೋಲಿಸುವುದು ಸುಲಭವಲ್ಲ. ಎಲ್ಲ ವಿಭಾಗಗಳಲ್ಲಿಯೂ ಆಟಗಾರರು ಶ್ರೇಷ್ಠ ಲಯದಲ್ಲಿದ್ದಾರೆ. ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್ ಉತ್ತಮ ಆರಂಭ ನೀಡುತ್ತಿದ್ದಾರೆ. ಅದರ ಮೇಲೆ ಜಯದ ಸೌಧ ಕಟ್ಟುವಲ್ಲಿ ‘ಚೇಸಿಂಗ್ ಮಾಸ್ಟರ್‘ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದಾರೆ. ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಕೂಡ ಲಯಕ್ಕೆ ಮರಳಿದ್ದಾರೆ.
ರವೀಂದ್ರ ಜಡೇಜ ತಮ್ಮ ಆಲ್‌ರೌಂಡ್ ಆಟವನ್ನು ಮುಂದುವರಿಸಿದ್ದಾರೆ.
ಬೌಲಿಂಗ್ ವಿಭಾಗ ವಂತೂ ಯಶಸ್ಸಿನ ಉತ್ತುಂಗದಲ್ಲಿದೆ. ಆಡಿದ ಮೂರು ಪಂದ್ಯಗಳಲ್ಲಿಯೇ ಎರಡು ಬಾರಿ ಐದು ವಿಕೆಟ್ ಗೊಂಚಲು ಗಳಿಸಿರುವ ಮೊಹಮ್ಮದ್ ಶಮಿ, ಮೊದಲ ಪವರ್ ಪ್ಲೇನಲ್ಲಿಯೇ ಪ್ರತಾಪ ಮೆರೆಯುತ್ತಿರುವ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಮುಂದೆ ಆಫ್ರಿಕಾ ಬ್ಯಾಟರ್‌ಗಳ ಅಬ್ಬರಕ್ಕೆ ತಡೆಯೊಡ್ಡುವ ಸವಾಲು ಇದೆ. ಸ್ಪಿನ್ನರ್ ಕುಲದೀಪ್ ಯಾದವ್ ಅವರ ಸ್ಪಿನ್ ಎಸೆತಗಳ ಸತ್ವ ಪರೀಕ್ಷೆಯೂ ಇಲ್ಲಿ ಆಗಬಹುದು.
ನಾಲ್ಕು ಶತಕ ಗಳಿಸಿರುವ ಕ್ವಿಂಟನ್ ಡಿಕಾಕ್, ಎರಡು ಬಾರಿ ಮೂರಂಕಿ ದಾಟಿರುವ ರೆಸಿ ವ್ಯಾನ್ ಡರ್ ಡಸೆ, ತಲಾ ಒಂದು ಶತಕ ಗಳಿಸಿರುವ ಏಡನ್ ಮರ್ಕರಂ ಮತ್ತು ಹೆನ್ರಿಚ್ ಕ್ಲಾಸನ್ ಅವರನ್ನು ಕಟ್ಟಿಹಾಕುವುದು ಪ್ರಮುಖ ಸವಾಲು. ಇವರಲ್ಲದೇ ಡೇವಿಡ್ ಮಿಲ್ಲರ್ ಕೂಡ ಬೀಸಾಟ ಮಾಡುವ ಬ್ಯಾಟರ್ ಆಗಿದ್ದಾರೆ. ಆದರೆ ನಾಯಕ ಬವುಮಾ ಮಾತ್ರ ಇನ್ನೂ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಂಡಿಲ್ಲ.
ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೊ ಯಾನ್ಸನ್ ಅವರನ್ನು ಎದುರಿಸುವುದು ಭಾರತದ ಬ್ಯಾಟರ್‌ಗಳಿಗೆ ಇರುವ ಪ್ರಮುಖ ಸವಾಲು. ಸ್ಪಿನ್ನರ್ ಕೇಶವ್ ಮಹಾರಾಜ ಹಾಗೂ ಜಿರಾಲ್ಡ್ ಕೋಜಿ ತಂಡವನ್ನು ಜಯದತ್ತ ಮುನ್ನಡೆಸುವ ಸಮರ್ಥರಾಗಿದ್ದಾರೆ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಆರ್. ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಪ್ರಸಿದ್ಧ ಕೃಷ್ಣ.
ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೋಝಿ, ಕ್ವಿಂಟನ್ ಡಿಕಾಕ್ (ವಿಕೆಟ್‌ಕೀಪರ್), ರೀಝಾ ಹೆನ್ರಿಕ್ಸ್, ಮಾರ್ಕೊ ಯಾನ್ಸನ್, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ಕೀಪರ್), ಆ್ಯಂಡಿಲೆ ಪಿಶುವಾಯೊ, ಕೇಶವ್ ಮಹಾರಾಜ್, ಏಡನ್ ಮರ್ಕರಂ, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಕಗಿಸೊ ರಬಾಡ, ತಬ್ರೇಜ್ ಶಮ್ಸಿ, ರೆಸಿ ವ್ಯಾನ್ ಡರ್ ಡಸೆ, ಲಿಜಾದ್ ವಿಲಿಯಮ್ಸ್.
ಪಂದ್ಯ ಆರಂಭ: ಮಧ್ಯಾಹ್ನ 2
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್
ಪಿಚ್ ಹೇಗಿದೆ?
ಈಡನ್ ಗಾರ್ಡನ್ ಪಿಚ್‌ನಲ್ಲಿ ಆಡುವುದು ಬ್ಯಾಟರ್‌ಗಳಿಗೆ ಸವಾಲೊಡ್ಡುತ್ತದೆ. ಈ ಟೂರ್ನಿಯಲ್ಲಿ ಇಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಬೃಹತ್ ಮೊತ್ತಗಳು ದಾಖಲಾಗಿಲ್ಲ.
ಬೌಲರ್‌ಗಳು ಹೆಚ್ಚು ಯಶಸ್ಸು ಸಾಧಿಸಿದ್ದಾರೆ. ಆ ಎರಡೂ ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡಗಳೇ ಮೊದಲು ಬ್ಯಾಟಿಂಗ್ ಮಾಡಿದ್ದವು. ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವು ಬಾಂಗ್ಲಾದೇಶಕ್ಕೆ 230 ರನ್‌ಗಳ ಗುರಿಯೊಡ್ಡಿ 87 ರನ್‌ಗಳಿಂದ ಗೆದ್ದಿತ್ತು. ಇನ್ನೊಂದು ಪಂದ್ಯದಲ್ಲಿ ಬಾಂಗ್ಲಾ ತಂಡವು ಪಾಕಿಸ್ತಾನಕ್ಕೆ 204 ರನ್‌ಗಳ ಸಾಧಾರಣ ಗುರಿಯೊಡ್ಡಿ, 7 ವಿಕೆಟ್‌ಗಳಿಂದ ಸೋತಿತ್ತು. ಆದ್ದರಿಂದ ಬ್ಯಾಟರ್‌ಗಳು
ಇಲ್ಲಿ ಎಚ್ಚರದಿಂದ ಆಡುವುದು ಮುಖ್ಯವಾಗಲಿದೆ.
ಟೂರ್ನಿಗೆ ಪಾಂಡ್ಯ ಅಲಭ್ಯ; ಪ್ರಸಿದ್ಧಗೆ ಅವಕಾಶ
ಪಾದದ ಗಾಯದಿಂದಾಗಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಅವರ ಬದಲಿಗೆ ಕನ್ನಡಿಗ, ವೇಗಿ ಪ್ರಸಿದ್ಧ ಕೃಷ್ಣ ಅವರಿಗೆ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.
ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಅವರ ಕಾಲು ಉಳುಕಿ ಗಾಯವಾಗಿತ್ತು. ಆದರೆ, ನಂತರ ಚಿಕಿತ್ಸೆಯಲ್ಲಿ ಅವರು ಪೂರ್ಣ ಚೇತರಿಸಿಕೊಂಡಿಲ್ಲ. ಪಾದದಲ್ಲಿ ಉರಿಯೂತ ಕಡಿಮೆಯಾಗದ ಕಾರಣ ಅವರಿಗೆ ದೀರ್ಘ ವಿಶ್ರಾಂತಿಗಾಗಿ ವೈದ್ಯರು ಸಲಹೆ ನೀಡಿದ್ದಾರೆ.
17 ಏಕದಿನ ಪಂದ್ಯಗಳನ್ನು ಆಡಿರುವ ಪ್ರಸಿದ್ಧ ಅವರನ್ನು ತಂಡಕ್ಕೆ ಸೇರಿಸಲಾಗಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
‘ಈ ಪರಿಸ್ಥಿತಿಯನ್ನು ಅರಗಿಸಿಕೊಳ್ಳುವುದು ಬಹಳ ಕಷ್ಟವಾಗುತ್ತಿದೆ. ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯುವುದರಿಂದ ಮನಸ್ಸಿಗೆ ಬಹಳ ನೋವಾಗಿದೆ. ಆದರೆ ನಮ್ಮ ತಂಡದ ಗೆಲುವಿಗಾಗಿ ಸದಾ ಆಶಿಸುತ್ತೇನೆ. ತಂಡದ ಎಲ್ಲರೂ ನನ್ನ ಮೇಲೆ ತೋರಿರುವು ಪ್ರೀತಿ, ವಿಶ್ವಾಸ ಮತ್ತು ಸ್ನೇಹ ಅಮೂಲ್ಯವಾದದ್ದು. ಅವರೆಲ್ಲರಿಗೂ ಕೃತಜ್ಞತೆಗಳು’ ಎಂದು ಹಾರ್ದಿಕ್ ಎಕ್ಸ್ ಖಾತೆಯಲ್ಲಿ ಸಂದೇಶ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.