ADVERTISEMENT

CWC |ಇಂಗ್ಲೆಂಡ್‌–ನೆದರ್ಲೆಂಡ್ಸ್‌ ಪೈಪೋಟಿ: ಚಾಂಪಿಯನ್ಸ್‌ ಟ್ರೋಫಿಗೆ ಅರ್ಹತೆ ಗುರಿ

ಇಂಗ್ಲೆಂಡ್‌– ನೆದರ್ಲೆಂಡ್ಸ್‌ ಪೈಪೋಟಿ ನಾಳೆ; ಒತ್ತಡದಲ್ಲಿ ಬಟ್ಲರ್‌ ಬಳಗ

ಪಿಟಿಐ
Published 7 ನವೆಂಬರ್ 2023, 13:38 IST
Last Updated 7 ನವೆಂಬರ್ 2023, 13:38 IST
ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ತಾಲೀಮು ಕೈಗೊಂಡರು –ಪಿಟಿಐ ಚಿತ್ರ
ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ತಾಲೀಮು ಕೈಗೊಂಡರು –ಪಿಟಿಐ ಚಿತ್ರ   

ಪುಣೆ: ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡಿರುವ ಇಂಗ್ಲೆಂಡ್‌ ಮತ್ತು ನೆದರ್ಲೆಂಡ್ಸ್‌ ತಂಡಗಳು ಬುಧವಾರ ಇಲ್ಲಿ ಪರಸ್ಪರ ಎದುರಾಗಲಿದ್ದು, 2025ರ ಚಾಂಪಿಯನ್ಸ್‌ ಟ್ರೋಫಿಗೆ ಅರ್ಹತೆ ಪಡೆಯಲು ಪ್ರಯತ್ನಿಸಲಿವೆ.

ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು, ಏಳು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಸಾಧಿಸಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಎರಡು ಗೆಲುವುಗಳೊಂದಿಗೆ ನಾಲ್ಕು ಪಾಯಿಂಟ್ಸ್‌ ಹೊಂದಿರುವ ನೆದರ್ಲೆಂಡ್ಸ್‌, ಒಂಬತ್ತನೇ ಸ್ಥಾನದಲ್ಲಿದೆ.

ಶನಿವಾರ ನಡೆದಿದ್ದ ಪಂದ್ಯದಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಆಸ್ಟ್ರೇಲಿಯಾ ಕೈಯಲ್ಲಿ ಎದುರಾಗಿದ್ದ 33 ರನ್‌ಗಳ ಸೋಲು ಇಂಗ್ಲೆಂಡ್‌ನ ಶವಪೆಟ್ಟಿಗೆಗೆ ಕೊನೆಯ ಮೊಳೆಯಾಗಿ ಪರಿಣಮಿಸಿತ್ತು. ನೆದರ್ಲೆಂಡ್ಸ್‌ ಕೂಡಾ ಸೆಮಿ ‘ರೇಸ್‌’ನಿಂದ ಈಗಾಗಲೇ ಹೊರಬಿದ್ದಿದೆ.

ADVERTISEMENT

ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಆತಿಥೇಯ ಪಾಕಿಸ್ತಾನದ ಜತೆಯಲ್ಲಿ ಈ ವಿಶ್ವಕಪ್‌ನಲ್ಲಿ ಅಗ್ರ ಏಳು ಸ್ಥಾನಗಳನ್ನು ಪಡೆಯುವ ತಂಡಗಳು ಅರ್ಹತೆ ಪಡೆಯಲಿವೆ ಎಂದು ಐಸಿಸಿ ಈಚೆಗೆ ಹೇಳಿತ್ತು. ಆದ್ದರಿಂದ ಏಳರೊಳಗಿನ ಸ್ಥಾನಕ್ಕಾಗಿ ಇಂಗ್ಲೆಂಡ್‌ ಸೇರಿದಂತೆ ಕೆಲವು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿವೆ.

ಪ್ರತಿಷ್ಠಿತ ಚಾಂ‍ಪಿಯನ್ಸ್‌ ಟ್ರೋಫಿಯಲ್ಲಿ ಆಡುವ ಅವಕಾಶವಂಚಿತರಾಗಿ ಅವಮಾನಕ್ಕೆ ಗುರಿಯಾಗುವುದನ್ನು ತಪ್ಪಿಸಲು ಜೋಸ್‌ ಬಟ್ಲರ್‌ ಬಳಗಕ್ಕೆ ಇನ್ನುಳಿದ ಎರಡು ಪಂದ್ಯಗಳಲ್ಲಿ ಜಯ ಅನಿವಾರ್ಯ. ಇಂಗ್ಲೆಂಡ್‌ ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಆದರೆ ಆತ್ಮವಿಶ್ವಾಸ ಮತ್ತು ಫಾರ್ಮ್‌ ಕಳೆದುಕೊಂಡಿರುವ ತಂಡಕ್ಕೆ ಗೆಲುವಿನ ಹಾದಿಗೆ ಮರಳುವುದು ಅಷ್ಟು ಸುಲಭವಲ್ಲ. ತಂಡದ ಬ್ಯಾಟಿಂಗ್‌ ವಿಭಾಗ ಪೂರ್ಣ ವಿಫಲವಾಗಿದೆ. ಜಾನಿ ಬೆಸ್ಟೋ ಮತ್ತು ಡೇವಿಡ್‌ ಮಲಾನ್‌ ಉತ್ತಮ ಆರಂಭ ನೀಡುವಲ್ಲಿ ಎಡವಿದ್ದಾರೆ. ಸ್ಥಿರ ಪ್ರದರ್ಶನಕ್ಕೆ ಹೆಸರಾಗಿದ್ದ ಜೋ ರೂಟ್‌ ಅವರೂ ಗಮನ ಸೆಳೆದಿಲ್ಲ. ನಾಯಕ ಬಟ್ಲರ್‌ ಮತ್ತು ಸ್ಫೋಟಕ ಬ್ಯಾಟರ್‌ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರಿಗೂ ಫಾರ್ಮ್‌ ಕೈಕೊಟ್ಟಿದೆ.

ಸೋಲಿನ ಸರಪಳಿ ಕಡಿಯಬೇಕಾದರೆ ಬ್ಯಾಟರ್‌ಗಳಿಂದ ಜವಾಬ್ದಾರಿಯುತ ಆಟ ಮೂಡಿಬರಬೇಕಿದೆ. ಬ್ಯಾಟರ್‌ಗಳಿಗೆ ಹೋಲಿಸಿದರೆ ಇಂಗ್ಲೆಂಡ್‌ನ ಬೌಲರ್‌ಗಳು ಅಲ್ಪ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೂ ಭಾರತದ ಪಿಚ್‌ಗಳಿಗೆ ಹೊಂದಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.

ಸ್ಕಾಟ್‌ ಎಡ್ವರ್ಡ್ಸ್‌ ನಾಯಕತ್ವದ ನೆದರ್ಲೆಂಡ್ಸ್‌ ಕೂಡಾ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆಯುವತ್ತ ಚಿತ್ತ ನೆಟ್ಟಿದೆ. ‘ಆರೆಂಜ್‌ ಆರ್ಮಿ’ಯು ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳಿಗೆ ಆಘಾತ ನೀಡಿದೆ. ಇಂಗ್ಲೆಂಡ್‌ ವಿರುದ್ಧ ಗೆದ್ದರೆ, ಈ ಟೂರ್ನಿಯು ಸ್ಮರಣೀಯ ಎನಿಸಲಿದೆ.

ಆಲ್‌ರೌಂಡರ್‌ಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಂಡಿರುವ ನೆದರ್ಲೆಂಡ್ಸ್‌ ತಂಡದ ಮೇಲಿನ ಕ್ರಮಾಂಕದ ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಪ್ರದರ್ಶನದಲ್ಲಿ ಸ್ಥಿರತೆ ಕಂಡುಕೊಳ್ಳಬೇಕಿದೆ. ಅಫ್ಗಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿಫಲರಾಗಿದ್ದ ವೆಸ್ಲಿ ಬ್ಯಾರೆಸಿ ಬದಲು ವಿಕ್ರಮ್‌ಜೀತ್‌ ಸಿಂಗ್‌ ಅವರಿಗೆ ಮತ್ತೆ ಅವಕಾಶ ಲಭಿಸುವ ಸಾಧ್ಯತೆಯಿದೆ.

ಪಂದ್ಯ ಆರಂಭ: ಮಧ್ಯಾಹ್ನ 2

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್

***

ಬಲಾಬಲ

ಇಂಗ್ಲೆಂಡ್‌ ಮತ್ತು ನೆದರ್ಲೆಂಡ್ಸ್‌ ತಂಡಗಳು ವಿಶ್ವಕಪ್‌ನಲ್ಲಿ ಮೂರು ಪಂದ್ಯಗಳು ಸೇರಿದಂತೆ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು ಆರು ಸಲ ಎದುರಾಗಿದ್ದು, ಎಲ್ಲದರಲ್ಲೂ ಇಂಗ್ಲೆಂಡ್‌ ಗೆದ್ದಿದೆ. 1996, 2003 ಮತ್ತು 2011ರ ವಿಶ್ವಕಪ್‌ನಲ್ಲಿ ಉಭಯ ತಂಡಗಳು ಪೈಪೋಟಿ ನಡೆಸಿದ್ದವು.

ಇಂಗ್ಲೆಂಡ್‌ ತಂಡದ ಆಟಗಾರ ಸ್ಯಾಮ್‌ ಕರನ್ –ಎಎಫ್‌ಪಿ ಚಿತ್ರ
ನೆದರ್ಲೆಂಡ್ಸ್‌ ತಂಡದ ಆಟಗಾರರ ಅಭ್ಯಾಸ –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.