ADVERTISEMENT

CWC | ಎಲ್ಲ ತಂಡಗಳ ತಲಾ 5 ಪಂದ್ಯ ಪೂರ್ಣ: ಅಂಕಪಟ್ಟಿಯಲ್ಲಿ ಭಾರತವೇ ಟಾಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2023, 3:07 IST
Last Updated 27 ಅಕ್ಟೋಬರ್ 2023, 3:07 IST
<div class="paragraphs"><p>ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ</p></div>

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ

   

(ರಾಯಿಟರ್ಸ್ ಚಿತ್ರ)

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 25 ಪಂದ್ಯಗಳ ಅಂತ್ಯಕ್ಕೆ ಟೀಮ್ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ADVERTISEMENT

10 ತಂಡಗಳ ಟೂರ್ನಿಯಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆದ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ. ರೌಂಡ್ ರಾಬಿನ್ ರೀತಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಒಟ್ಟು 45 ಲೀಗ್ ಪಂದ್ಯಗಳು ನಡೆಯಲಿವೆ. ಎಲ್ಲ ತಂಡಗಳು ತಲಾ ಐದು ಪಂದ್ಯಗಳನ್ನು ಪೂರ್ಣಗೊಳಿಸಿದ್ದು, ಇನ್ನು ನಾಲ್ಕು ಪಂದ್ಯಗಳು ಬಾಕಿ ಉಳಿದಿವೆ. ಇದರಿಂದಾಗಿ ಸೆಮಿಫೈನಲ್‌ಗೆ ಯಾವೆಲ್ಲ ತಂಡಗಳು ತಲುಪಲಿವೆ ಎಂಬುದು ಕುತೂಹಲ ಮೂಡಿಸಿವೆ.

ಸದ್ಯ ಭಾರತ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಅನುಕ್ರಮವಾಗಿ ಅಗ್ರ ನಾಲ್ಕು ಸ್ಥಾನಗಳನ್ನು ಹಂಚಿಕೊಂಡಿವೆ. ಭಾರತ ಈವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ ಎಂಬುದು ಗಮನಾರ್ಹ. ರೋಹಿತ್ ಶರ್ಮಾ ಬಳಗವು ಈವರೆಗೆ ಆಡಿರುವ ಎಲ್ಲ ಐದು ಪಂದ್ಯಗಳನ್ನು ಗೆದ್ದು ಒಟ್ಟು 10 ಅಂಕಗಳನ್ನು ಕಲೆ ಹಾಕಿದ್ದು, +1.353 ರನ್ ರೇಟ್ ಅನ್ನು ಕಾಯ್ದುಕೊಂಡಿದೆ.

ನೆದರ್ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ ಸೋಲಿನ ಆಘಾತ ಎದುರಿಸಿತ್ತು. ಆದರೂ +2.370 ನೇಟ್ ರನ್‌ರೇಟ್ ಕಾಯ್ದುಕೊಂಡಿದ್ದು, ಎಂಟು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಭಾರತದ ವಿರುದ್ಧ ಸೋಲಿಗೆ ಒಳಗಾಗಿದ್ದ ನ್ಯೂಜಿಲೆಂಡ್ ಅಷ್ಟೇ ಅಂಕಗಳೊಂದಿಗೆ (+1.481) ಮೂರನೇ ಸ್ಥಾನದಲ್ಲಿದೆ.

ಇನ್ನು ನಾಲ್ಕನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮೊದಲೆರಡು ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಿದ್ದರೂ ಆ ಬಳಿಕ ಹ್ಯಾಟ್ರಿಕ್ ಗೆಲುವು (+1.142) ದಾಖಲಿಸಿ ಲಯಕ್ಕೆ ಮರಳಿದೆ.

ಶ್ರೀಲಂಕಾ (ಎರಡು ಗೆಲುವು), ಪಾಕಿಸ್ತಾನ (ಎರಡು ಗೆಲುವು) ಮತ್ತು ಅಫ್ಗಾನಿಸ್ತಾನ (ಎರಡು ಗೆಲುವು) ಅನುಕ್ರಮವಾಗಿ ಐದು, ಆರು ಹಾಗೂ ಏಳನೇ ಸ್ಥಾನದಲ್ಲಿವೆ. ಇನ್ನು ಬಾಂಗ್ಲಾದೇಶ (1 ಗೆಲುವು), ಇಂಗ್ಲೆಂಡ್ (1 ಗೆಲುವು) ಮತ್ತು ನೆದರ್ಲೆಂಡ್ಸ್ (1 ಗೆಲುವು) ಕೊನೆಯ ಮೂರು ಸ್ಥಾನದಲ್ಲಿವೆ.

ಐದು ಪಂದ್ಯಗಳಲ್ಲಿ ನಾಲ್ಕು ಸೋಲುಗಳನ್ನು ಎದುರಿಸಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್, ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಕ್ಷೀಣವೆನಿಸಿದೆ. ಮತ್ತೊಂದೆಡೆ ಅಫ್ಗಾನಿಸ್ತಾನ, ಏಕದಿನ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಎರಡು ಗೆಲುವು ದಾಖಲಿಸಿದ್ದು (ಇಂಗ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧ) ಸೆಮಿಫೈನಲ್ ಕನಸು ಕಾಣುತ್ತಿದೆ.

ಒಟ್ಟಿನಲ್ಲಿ ಸೆಮಿಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಎಲ್ಲ ತಂಡಗಳಿಗೂ ಮುಂದಿನ ನಾಲ್ಕು ಪಂದ್ಯಗಳು ನಿರ್ಣಾಯಕವೆನಿಸಿವೆ.

ಪಾಕಿಸ್ತಾನ ವಿರುದ್ಧ ಭಾರತೀಯ ಆಟಗಾರರ ಸಂಭ್ರಮ

ಭಾರತದ ಸೆಮಿಫೈನಲ್ ಹಾದಿ...

ಮೊದಲ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, ಎರಡನೇ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಎಂಟು ವಿಕೆಟ್ ಜಯ ಗಳಿಸಿತ್ತು.

ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಏಳು ವಿಕೆಟ್ ಜಯ ಸಾಧಿಸಿತ್ತು. ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧವೂ ಏಳು ವಿಕೆಟ್ ಅಂತರದ ಜಯ ಗಳಿಸಿತ್ತು. ಬಳಿಕ ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್ ಗೆಲುವಿನೊಂದಿಗೆ ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿತ್ತು.

ಭಾರತ ಇನ್ನು ಅಕ್ಟೋಬರ್ 29ರಂದು ಇಂಗ್ಲೆಂಡ್, ನವೆಂಬರ್ 02ರಂದು ಶ್ರೀಲಂಕಾ, ನ. 5ರಂದು ದಕ್ಷಿಣ ಆಫ್ರಿಕಾ ಮತ್ತು ನ.12ರಂದು ನೆದರ್ಲೆಂಡ್ಸ್ ತಂಡಗಳ ಸವಾಲನ್ನು ಎದುರಿಸಲಿದೆ. ಹಾಗಾಗಿ ಕನಿಷ್ಠ ಒಂದೆರಡು ಪಂದ್ಯಗಳಲ್ಲಿ ಜಯ ಗಳಿಸಿದರೂ ಸೆಮಿಫೈನಲ್ ಹಾದಿ ಸುಗಮವೆನಿಸಲಿದೆ.

ಐಸಿಸಿ ಏಕದಿನ ವಿಶ್ವಕಪ್ 2023 ಅಂಕಪಟ್ಟಿ ಇಂತಿದೆ (25 ಪಂದ್ಯಗಳ ಅಂತ್ಯಕ್ಕೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.