ADVERTISEMENT

ವಿಶ್ವಕಪ್‌ನಲ್ಲಿ ಬಾಬರ್ ಅಜಂ ವೈಫಲ್ಯ: ಕಾರಣ ಹೇಳಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ

ಐಎಎನ್ಎಸ್
Published 13 ಅಕ್ಟೋಬರ್ 2023, 13:46 IST
Last Updated 13 ಅಕ್ಟೋಬರ್ 2023, 13:46 IST
<div class="paragraphs"><p>ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಂ ಅಭ್ಯಾಸ ನಡೆಸುತ್ತಿರುವುದು.</p></div>

ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಂ ಅಭ್ಯಾಸ ನಡೆಸುತ್ತಿರುವುದು.

   

ಪಿಟಿಐ ಚಿತ್ರ

ಅಹಮದಾಬಾದ್‌: ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಅಧಿಕ ರನ್‌ ಗಳಿಸಬಹುದಾದ ಬ್ಯಾಟರ್‌ ಎನಿಸಿಕೊಂಡಿದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಂ, ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.

ADVERTISEMENT

ಐಸಿಸಿ ಏಕದಿನ ಕ್ರಿಕೆಟ್‌ ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬಾಬರ್‌, ನೆದರ್ಲೆಂಡ್ಸ್‌ ಹಾಗೂ ಶ್ರೀಲಂಕಾ ವಿರುದ್ಧ ನಡೆದ ಪಂದ್ಯಗಳಲ್ಲಿ ಕ್ರಮವಾಗಿ 5 ಹಾಗೂ 10 ರನ್‌ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ವಿಶ್ವಕಪ್‌ ಟೂರ್ನಿಯ ಬಹುನಿರೀಕ್ಷಿತ ಭಾರತ–ಪಾಕಿಸ್ತಾನ ಪಂದ್ಯ ನಾಳೆ (ಅಕ್ಟೋಬರ್ 14ರಂದು) ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೀಗಾಗಿ ಬಾಬರ್‌ ಅಜಂ ಲಯ ಕಳೆದುಕೊಂಡಿರುವುದು ಪಾಕ್‌ ಪಡೆಗೆ ತಲೆನೋವಾಗಿದೆ.

ಈ ನಡುವೆ ಬಾಬರ್‌ ಅಜಂ ಬ್ಯಾಟಿಂಗ್‌ ಕುರಿತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್‌ ರಾಜಾ ಅವರು ಜಿಯೊಸಿನಿಮಾದ 'ಆಕಾಶವಾಣಿ' ಕಾರ್ಯಕ್ರದಲ್ಲಿ ಮಾತನಾಡಿದ್ದಾರೆ.

'ಬಾಬರ್‌ ಅಜಂ ಪುಟಿದೆದ್ದು, ಸಾಕಷ್ಟು ರನ್‌ ಗಳಿಸಬೇಕಿದೆ. ತಂಡ ಮುನ್ನಡೆಸುತ್ತಿರುವುದರಿಂದ ಬಹುಶಃ ಒತ್ತಡಕ್ಕೊಳಗಾಗಿ, ಮಂಕಾಗಿರಬಹುದು. ಅದರಿಂದಾಗಿ ಅವರು ಎಂದಿನಂತೆ ಆಡಲು ಸಾಧ್ಯವಾಗುತ್ತಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಬಾಬರ್‌ ಇದೆಲ್ಲವನ್ನೂ (ವೈಫಲ್ಯ) ಮರೆತು, ತಾಜಾ ಮನಸ್ಥಿತಿಯಿಂದ ಮುನ್ನಡೆಯಬೇಕು. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕು' ಎಂದು ಕಿವಿಮಾತು ಹೇಳಿದ್ದಾರೆ.

ಮುಂದುವರಿದು, 'ಬಾಬರ್‌ ಸಮರ್ಥ ಆಟಗಾರ ಎಂಬುದು ಮುಖ್ಯವಾದ ಸಂಗತಿ. ಆತನ ಆಟ ಶ್ರೇಷ್ಠ ಮತ್ತು ಗುಣಮಟ್ಟದಿಂದ ಕೂಡಿದೆ. ಹಾಗಾಗಿ ಅವರು ಹಿನ್ನಡೆ ಬಗ್ಗೆ ಹೆಚ್ಚು ಯೋಚಿಸದೆ ಮುಕ್ತ ಮನಸ್ಸಿನಿಂದ ಆಡಬೇಕಿದೆ' ಎಂದು ಹೇಳಿದ್ದಾರೆ.

ಉಭಯ ತಂಡಗಳ ಅಜೇಯ ಓಟ
ಭಾರತ ಹಾಗೂ ಪಾಕಿಸ್ತಾನ ತಂಡಗಳು ಟೂರ್ನಿಯಲ್ಲಿ ಸದ್ಯ ತಲಾ ಎರಡು ಪಂದ್ಯಗಳನ್ನು ಗೆದ್ದಿದ್ದು, ಜಯದ ಓಟ ಮುಂದುವರಿಸುವ ಲೆಕ್ಕಾಚಾರದಲ್ಲಿವೆ.

ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಎದುರು 6 ವಿಕೆಟ್‌ ಅಂತರದ ಗೆಲುವು ಸಾಧಿಸಿರುವ ಭಾರತ, ಎರಡನೇ ಪಂದ್ಯದಲ್ಲಿ ಅಫ್ಗಾನಿಸ್ತಾನ ಎದುರು 8 ವಿಕೆಟ್‌ಗಳ ಸುಲಭ ಜಯ ಸಾಧಿಸಿತ್ತು.

ಇತ್ತ ಪಾಕಿಸ್ತಾನ ತಂಡ ನೆದರ್ಲೆಂಡ್ಸ್‌ ಮತ್ತು ಶ್ರೀಲಂಕಾ ವಿರುದ್ಧ ಗೆಲುವು ಗಳಿಸಿದೆ. ಉಭಯ ತಂಡಗಳು ಪಾಯಿಂಟ್‌ ಪಟ್ಟಿಯಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.