ನವದೆಹಲಿ: ಅಮೆರಿಕದಲ್ಲಿ ನಡೆದ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯಗಳಿಗೆ ಮಾಡಲಾದ ವೆಚ್ಚವು ಬಜೆಟ್‌ನಲ್ಲಿ ಅಂದಾಜಿಸಿದ್ದಕ್ಕಿಂತಲೂ ಅಧಿಕವಾಗಿದೆ. ಈ ಕುರಿತು ಮಂಡಳಿಯ ವಾರ್ಷಿಕ ಸಭೆಯಲ್ಲಿ ಚರ್ಚಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತೀರ್ಮಾನಿಸಿದೆ ಎಂದು ವರದಿಯಾಗಿದೆ.
ಐಸಿಸಿ ವಾರ್ಷಿಕ ಸಭೆಯು ಶ್ರೀಲಂಕಾ ರಾಜಧಾನಿ ಕೊಲೊಂಬೊದಲ್ಲಿ ಜುಲೈ 19ರಂದು ನಡೆಯಲಿದೆ.
ಲೆಕ್ಕ ಪರಿಶೋಧನೆ ಪೂರ್ಣಗೊಂಡಿಲ್ಲ. ಕ್ರೀಡಾಂಗಣದ ಬಳಿ ಮಾರಾಟವಾದ ಟಿಕೆಟ್‌ಗಳಿಂದ ಬಂದ ಹಣವನ್ನು ಸಂಪೂರ್ಣ ಲೆಕ್ಕ ಮಾಡಿಲ್ಲ. ಹೀಗಾಗಿ, ನಷ್ಟದ ಪ್ರಮಾಣವನ್ನು ನಿರ್ದಿಷ್ಟವಾಗಿ ಹೇಳಲಾಗದು. ಆದಾಗ್ಯೂ, ಮಂಡಳಿಯ ಸದಸ್ಯ ರಾಷ್ಟ್ರಗಳು ಅಮೆರಿಕದಲ್ಲಿ ನಡೆದ ಪಂದ್ಯಗಳ ವೇಳೆ ಕೋಟ್ಯಂತರ ರೂಪಾಯಿಯಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಿವೆ.
ಐಸಿಸಿ ಟೂರ್ನಿಗಳ ನಿರ್ದೇಶಕರಾಗಿದ್ದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕ್ರಿಸ್ ಟೆಟ್ಲಿ ಅವರು ಸದ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
'ಮಂಡಳಿಯ ಸದಸ್ಯರಿಗೆ ಟೆಟ್ಲಿ ಕಾರ್ಯವೈಖರಿ ಸಮಾಧಾನ ತಂದಿಲ್ಲ. ಆದರೆ, ಅವರು ರಾಜೀನಾಮೆ ನೀಡಿರುವುದಕ್ಕೂ, ವಿಶ್ವಕಪ್‌ಗೂ ಸಂಬಂಧವಿದೆ ಎಂದು ಹೇಳಲಾಗದು. ಟೆಟ್ಲಿ ವಿಶ್ವಕಪ್‌ಗೂ ಮುನ್ನವೇ ರಾಜೀನಾಮೆ ನೀಡಲು ಬಯಸಿದ್ದರು ಎನ್ನಲಾಗಿತ್ತು' ಎಂದು ಐಸಿಸಿ ಮೂಲಗಳು ತಿಳಿಸಿವೆ.
ಜೂನ್ 1ರಿಂದ ಜೂನ್ 29ರ ವರೆಗೆ ನಡೆದ ಈ ಬಾರಿಯ ವಿಶ್ವಕಪ್ ಟೂರ್ನಿಯು ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯಿತು. ಅಮೆರಿಕದ 3 ಕ್ರೀಡಾಂಗಣಗಳಲ್ಲಿ 16 ಹಾಗೂ ವೆಸ್ಟ್‌ಇಂಡೀಸ್‌ನ 6 ಕ್ರೀಡಾಂಗಣಗಳಲ್ಲಿ 39 ಪಂದ್ಯಗಳು ನಡೆದವು. ಭಾರತ ತಂಡ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.