ಮುಂಬೈ: ಆರಂಭಿಕ ಬ್ಯಾಟರ್ ಇಬ್ರಾಹಿಂ ಜದ್ರಾನ್ ಸಿಡಿಸಿದ ಅಮೋಘ ಶತಕದ ಬಲದಿಂದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಫ್ಗಾನಿಸ್ತಾನ ಸವಾಲಿನ ಮೊತ್ತ ಕಲೆಹಾಕಿದೆ.
ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಗಾನಿಸ್ತಾನ, ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 291 ರನ್ ಗಳಿಸಿದೆ.
ರಮಾನುಲ್ಲಾ ಗರ್ಬಾಜ್ (21) ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಇಬ್ರಾಹಿಂ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ, ಕೊನೆವರೆಗೂ ನಿಂತು ಆಡಿದ ಅವರು 143 ಎಸೆತಗಳಲ್ಲಿ 129 ರನ್ ಗಳಿಸಿ ಔಟಾಗದೆ ಉಳಿದರು.
ರಹಮತ್ ಶಾ (30), ನಾಯಕ ಹಷ್ಮತ್‌ವುಲ್ಲಾ ಶಾಹಿದಿ (26), ಅಜ್ಮತ್‌ವುಲ್ಲಾ ಒಮರ್ಜೈ (22) ಅಲ್ಪ ಕಾಣಿಕೆ ನೀಡಿದರು. ಕೊನೆಯಲ್ಲಿ ಬೀಸಾಟವಾಡಿದ ರಶೀದ್ ಖಾನ್ ಕೇವಲ 18 ಎಸೆತಗಳಲ್ಲಿ 35 ರನ್ ಸಿಡಿಸಿ ತಂಡದ ಮೊತ್ತವನ್ನು ಮುನ್ನೂರರ ಸನಿಹಕ್ಕೆ ಕೊಂಡೊಯ್ದರು.
ಆಸಿಸ್ ಪರ ಜೋಶ್ ಹ್ಯಾಷಲ್‌ವುಡ್ ಎರಡು ವಿಕೆಟ್ ಪಡೆದರೆ, ಮಿಚೇಲ್ ಸ್ಟಾರ್ಕ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಆ್ಯಡಂ ಜಂಪಾ ತಲಾ ಒಂದೊಂದು ವಿಕೆಟ್ ಕಿತ್ತರು.
ಸೆಮಿಫೈನಲ್‌ಗೇರುವ ಪಣ
ಸೆಮಿಫೈನಲ್ ಹಂತಕ್ಕೇರಲು ಪಣತೊಟ್ಟಿರುವ ಉಭಯ ತಂಡಗಳು ತಲಾ ಎಳು ಪಂದ್ಯಗಳಲ್ಲಿ ಕಣಕ್ಕಿಳಿದಿವೆ. ಈ ಪೈಕಿ ಆಸ್ಟ್ರೇಲಿಯಾ 5ರಲ್ಲಿ ಗೆದ್ದು 10 ಪಾಯಿಂಟ್ ಹಾಗೂ +0.92 ರನ್ ರೇಟ್‌ನೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ನಾಲ್ಕರಲ್ಲಿ ಗೆದ್ದಿರುವ ಅಫ್ಗಾನಿಸ್ತಾನ 8 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಹೀಗಾಗಿ ಇಲ್ಲಿ ಗೆಲ್ಲುವುದು ಎರಡೂ ತಂಡಗಳಿಗೆ ಅನಿವಾರ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.