ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ರೋಚಕ ಹೋರಾಟ ನಡೆಸಿದ ಪಾಕಿಸ್ತಾನ 1 ವಿಕೆಟ್ ಅಂತರದಿಂದ ಸೋಲೊಪ್ಪಿಕೊಂಡಿತು.
ದಕ್ಷಿಣ ಆಫ್ರಿಕಾ ತಂಡದ ಕೇಶವ್ ಮಹಾರಾಜ್ ಹಾಗೂ ತಬ್ರೇಜ್ ಶಂಸಿ 10ನೇ ವಿಕೆಟ್ ಜೊತೆಯಾಟದಲ್ಲಿ 11 ರನ್ ಸೇರಿಸುವ ಮೂಲಕ ತಮ್ಮ ತಂಡಕ್ಕೆ ಜಯ ತಂದುಕೊಟ್ಟರು. ಆದರೆ, ಈ ಪಂದ್ಯದಲ್ಲಿ ಪಾಕಿಸ್ತಾನ ಸೋತದ್ದು ಕೆಟ್ಟ ನಿಯಮ, ಅಂಪೈರ್‌ಗಳ ತಪ್ಪು ತೀರ್ಪಿನಿಂದಾಗಿ ಎಂದು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಟೀಕಿಸಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 46.4 ಓವರ್‌ಗಳಲ್ಲಿ 270 ರನ್ ಗಳಿಸಿ ಆಲೌಟ್ ಆಗಿತ್ತು. ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಪಡೆ 45 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 260 ರನ್ ಗಳಿಸಿತ್ತು.
46ನೇ ಓವರ್ ಬೌಲ್ ಮಾಡಿದ ಹ್ಯಾರಿಸ್ ರೌಫ್, 3ನೇ ಎಸೆತದಲ್ಲಿ ಅಮೋಘ ಕ್ಯಾಚ್ ಪಡೆಯುವ ಮೂಲಕ ಲುಂಗಿ ಗಿಡಿ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಹೀಗಾಗಿ ಕೊನೇ ವಿಕೆಟ್‌ಗೆ 11 ರನ್ ಗಳಿಸುವ ಒತ್ತಡ ಆಫ್ರಿಕಾ ಬ್ಯಾಟರ್‌ಗಳ ಮೇಲೆ ಬಿದ್ದಿತ್ತು.
ಇದೇ ಓವರ್‌ನ ಕೊನೇ ಎಸೆತ ಶಂಸಿ ಅವರ ಬ್ಯಾಟ್ ವಂಚಿಸಿ, ಪ್ಯಾಡ್‌ಗೆ ಬಡಿಯಿತು. ಪಾಕ್ ಆಟಗಾರರು ಔಟ್‌ಗಾಗಿ ಮನವಿ ಮಾಡಿದರು. ಆದರೆ, ಅಂಪೈರ್ ನಿರಾಕರಿಸಿದರು. ಬಾಬರ್ ಅಜಂ ಡಿಆರ್‌ಎಸ್ (ತೀರ್ಪಿನ ಪುನರ್ ಪರಿಶೀಲನೆ ವ್ಯವಸ್ಥೆ) ಮೊರೆ ಹೋದರು.
ಆಫ್ ಸ್ಟಂಪ್‌ನ ಆಚೆ ಬಿದ್ದು ಒಳನುಗ್ಗಿದ ಚೆಂಡು, ಲೆಗ್‌ಸ್ಟಂಪ್‌ನ ಅಂಚಿಗೆ ತಾಗುತ್ತಿದ್ದದು ಪರಿಶೀಲನೆ ವೇಳೆ ಕಂಡು ಬಂದಿತು. ಆದರೆ, ಅಂಪೈರ್ ಮೊದಲು ನಾಟೌಟ್ ನೀಡಿದ್ದರಿಂದ, ಪಾಕ್‌ಗೆ ವಿಕೆಟ್ ಒಲಿಯಲಿಲ್ಲ. ಇದಾದ ಬಳಿಕ, ಶಂಸಿ ಹಾಗೂ ಮಹಾರಾಜ್ ವಿಕೆಟ್ ಕೊಡದೆ ಆಡಿ, ಜಯ ಕಸಿದುಕೊಂಡರು.
ಹರ್ಭಜನ್ ಅಸಮಾಧಾನ
ಅಂಪೈರ್ ತೀರ್ಪಿನ ಬಗ್ಗೆ ಎಕ್ಸ್‌ನಲ್ಲಿ (ಟ್ವಿಟರ್) ಅಸಮಾಧಾನ ವ್ಯಕ್ತಪಡಿಸಿರುವ ಹರ್ಭಜನ್, 'ಕೆಟ್ಟ ತೀರ್ಪು, ತಪ್ಪು ನಿಯಮಗಳಿಂದಾಗಿ ಪಾಕಿಸ್ತಾನ ಈ ಪಂದ್ಯದಲ್ಲಿ ಬೆಲೆ ತೆತ್ತಿತು. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ನಿಯಮವನ್ನು ಬದಲಿಸಬೇಕು. ಅಂಪೈರ್ ಔಟ್ ನೀಡಿರಲಿ ಅಥವಾ ಇಲ್ಲದಿರಲಿ, ಚೆಂಡು ಸ್ಟಂಪ್‌ಗೆ ಬಡಿಯುತ್ತಿದೆ ಎಂದಾದರೆ ಅದನ್ನು ಔಟ್ ಎಂದು ಪರಿಗಣಿಸಬೇಕು. ಹಾಗೆ ಮಾಡದಿದ್ದರೆ ತಂತ್ರಜ್ಞಾನವಿದ್ದು ಪ್ರಯೋಜನವೇನು?' ಎಂದು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.