ಬೆಂಗಳೂರು: ಶ್ರೀಲಂಕಾದ ಪಥುಮ್ ನಿಸಾಂಕ ಗುರುವಾರ ರಾತ್ರಿ ಹೊಡೆದ ಸಿಕ್ಸರ್‌ಗೆ ಮೈದಾನದ ಆಚೆ ಹೋಗಿ ಬಿದ್ದ ಚೆಂಡಿನೊಂದಿಗೇ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ಸೆಮಿಫೈನಲ್ ಪ್ರವೇಶದ ಅವಕಾಶವೂ ದೂರವಾಯಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 8 ವಿಕೆಟ್‌ಗಳಿಂದ ಲಂಕಾ ಎದುರು ಮಂಡಿಯೂರಿತು. ಆಗ ಇನಿಂಗ್ಸ್‌ನಲ್ಲಿ ಇನ್ನೂ 148 ಎಸೆತಗಳು ಬಾಕಿ ಇದ್ದವು. ಗ್ಯಾಲರಿಯಲ್ಲಿದ್ದ ಇಂಗ್ಲೆಂಡ್ ಅಭಿಮಾನಿ
ಗಳ ಕಂಗಳು ಹನಿಗೂಡಿದ್ದವು.
ಟೂರ್ನಿಯಲ್ಲಿ ಆಡಿರುವ ಒಟ್ಟು ಐದು ಪಂದ್ಯಗಳಲ್ಲಿ ಒಂದು ಮಾತ್ರ ಜಯಿಸಿರುವ ಬಟ್ಲರ್ ಬಳಗವು ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಸೆಮಿಫೈನಲ್ ಪ್ರವೇಶಿಸುವ ಹಾದಿ
ಕಡುಕಠಿಣವಾಗಿದೆ. ಏಕೆಂದರೆ; ತನ್ನ ಪಾಲಿಗೆ ಉಳಿದ ಇನ್ನೂ ನಾಲ್ಕು ಪಂದ್ಯಗಳಲ್ಲಿ ದೊಡ್ಡ ರನ್ ರೇಟ್‌ನೊಂದಿಗೆ ಜಯಿಸಬೇಕು.
ಆದರೆ ಬಲಾಢ್ಯ ತಂಡಗಳಾದ ಭಾರತ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಎದುರು ಆಡಬೇಕಿದೆ. ಇನ್ನೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಡ ಬೇಕು. ಈಚೆಗೆ ಅಫ್ಗಾನಿಸ್ತಾನದಂತಹ ಸಾಧಾರಣ ತಂಡದ ಎದುರೂ ಸೋತಿ ರುವ ಇಂಗ್ಲೆಂಡ್ ಬಳಗಕ್ಕೆ ನೆದರ್ಲೆಂಡ್ಸ್ ಕೂಡ ಕಠಿಣ ಸವಾಲೊಡ್ಡಬಹುದು.
ಇಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನಿರ್ಧಾರವೇ ಇಂಗ್ಲೆಂಡ್ ತಂಡಕ್ಕೆ ತಿರುಗುಬಾಣವಾಯಿತು. ಶ್ರೀಲಂಕಾದ ಮಧ್ಯಮವೇಗಿಗಳಾದ ಏಂಜೆಲೊ ಮ್ಯಾಥ್ಯೂಸ್ (14ಕ್ಕೆ2) ಮತ್ತು ಲಾಹಿರು ಕುಮಾರ (35ಕ್ಕೆ3) ಅವರು ಜೊಸ್ ಬಟ್ಲರ್ ಬಳಗವನ್ನು 156 ರನ್‌ಗಳಿಗೆ ನಿಯಂತ್ರಿಸಿದರು. ಈ ಜಯದೊಂದಿಗೆ ಶ್ರೀಲಂಕಾ ನಾಲ್ಕರ ಘಟ್ಟ ಪ್ರವೇಶದ ಕನಸನ್ನು ಜೀವಂತವಾಗಿಟ್ಟುಕೊಂಡಿತು.
ಆರಂಭಿಕ ಬ್ಯಾಟರ್ ನಿಸಾಂಕ (ಅಜೇಯ 77; 83ಎ, 4X7, 6X2) ಮತ್ತು ಸದೀರ ಸಮರವಿಕ್ರಮ (ಅಜೇಯ 65; 54ಎ, 4X7, 6X1) ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 137 ರನ್ ಸೇರಿಸಿದರು.
ಉತ್ತಮ ಆರಂಭ– ಮ್ಯಾಥ್ಯೂಸ್ ಮಿಂಚು: ಇಂಗ್ಲೆಂಡ್ ತಂಡಕ್ಕೆ ಜಾನಿ ಬೆಸ್ಟೊ ಮತ್ತು ಡೇವಿಡ್ ಮಲಾನ್ ಉತ್ತಮ ಆರಂಭ ನೀಡಿದರು. ಮೊದಲ ಆರು ಓವರ್‌ಗಳಲ್ಲಿ 45 ರನ್ ಗಳಿಸಿದರು. ಆದರೆ 35 ವರ್ಷದ ಏಂಜೆಲೊ ಮ್ಯಾಥ್ಯೂಸ್ ಇಂಗ್ಲೆಂಡ್ ಬ್ಯಾಟಿಂಗ್ ಬುಡವನ್ನು ಅಲುಗಾಡಿಸಿದರು. ಮಥೀಷ ಪಥಿರಾಣ ಗಾಯಗೊಂಡಿದ್ದರಿಂದ ಮ್ಯಾಥ್ಯೂಸ್ ಸ್ಥಾನ ಪಡೆದಿದ್ದರು. ಡೇವಿಡ್ ಮಲಾನ್ ವಿಕೆಟ್ ಪಡೆದು ಜೊತೆಯಾಟ ಮುರಿದರು. ಮೋಯಿನ್ ಅಲಿ ವಿಕೆಟ್ ಕೂಡ ಅವರ ಪಾಲಾಯಿತು. ಜೋ ರೂಟ್ ರನೌಟ್ ಆಗಲೂ ಕಾರಣರಾದರು.
ಇನ್ನೊಂದು ಬದಿಯಿಂದ ಲಾಹಿರು ಅವರು 48 ರನ್ ಗಳಿಸಿದ್ದ ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ವಿಕೆಟ್ ಗಳಿಸಿದರು. ಈ ಹೊಡೆತದಿಂದ ಮೇಲೆ ಳಲು ಇಂಗ್ಲೆಂಡ್‌ಗೆ ಸಾಧ್ಯವಾಗಲಿಲ್ಲ.
ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಡೇವಿಡ್ ವಿಲ್ಲಿ ಎರಡು ವಿಕೆಟ್ ಕಿತ್ತು ಪೆಟ್ಟು ಕೊಟ್ಟರು. ಆಗ ಲಂಕಾ ತಂಡದ ಮೊತ್ತ 23 ಆಗಿತ್ತಷ್ಟೇ. ಇದರಿಂದಾಗಿ ಸಾಧಾರಣ ಮೊತ್ತದ ಪಂದ್ಯವು ರೋಚಕತೆಯತ್ತ ಹೊರಳುವ ಲಕ್ಷಣ ತೋರಿತ್ತು. ಆದರೆ ನಿಸಾಂಕ ಮತ್ತು ಸದೀರ ಗೆಲುವಿನ ಹಾದಿ ಸುಲಭಗೊಳಿಸಿದರು. ಇಂಗ್ಲೆಂಡ್ ಬೌಲರ್‌ಗಳ ಯಾವುದೇ ಅಸ್ತ್ರವೂ ಫಲ ಕೊಡಲಿಲ್ಲ.
ಮೇಲೇರಿದ ಲಂಕಾ
ಇಂಗ್ಲೆಂಡ್ ವಿರುದ್ಧದ ಗೆಲುವು ಟೂರ್ನಿಯಲ್ಲಿ ಶ್ರೀಲಂಕಾ ತಂಡಕ್ಕೆ ಸಿಕ್ಕ ಎರಡನೇ ಜಯ. ಇದರೊಂದಿಗೆ ಆಡಿರುವ 5 ಪಂದ್ಯಗಳಲ್ಲಿ 4 ಪಾಯಿಂಟ್ ಕಲೆಹಾಕಿದ ಸಿಂಹಳಿಯರು, ಅಂಕ ಪಟ್ಟಿಯಲ್ಲಿ ರನ್ ರೇಟ್ ಆಧಾರದಲ್ಲಿ 5ನೇ ಸ್ಥಾನಕ್ಕೇರಿದರು.
ಇತ್ತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿದ್ದ ಇಂಗ್ಲೆಂಡ್, ಐದು ಪಂದ್ಯಗಳಲ್ಲಿ ನಾಲ್ಕನೇ ಸೋಲು ಅನುಭವಿಸಿತು. ಅದರೊಂದಿಗೆ, ಅಂಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿಯಿತು.
ಈ ಪಂದ್ಯಕ್ಕೂ ಮುನ್ನ ಶ್ರೀಲಂಕಾ ಹಾಗೂ ಇಂಗ್ಲೆಂಡ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ 7 ಹಾಗೂ 8ನೇ ಸ್ಥಾನದಲ್ಲಿದ್ದವು.
ಭಾರತ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳಲ್ಲಿವೆ.
ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 33.2 ಓವರ್‌ಗಳಲ್ಲಿ 156 (ಜಾನಿ ಬೆಸ್ಟೊ 30, ಡೇವಿಡ್ ಮಲಾನ್ 28, ಬೆನ್ ಸ್ಟೋಕ್ಸ್ 43,ಮೋಯಿನ್ ಅಲಿ 15, ಡೇವಿಡ್ ವಿಲಿ ಔಟಾಗದೆ 14, ಮಹೀಷ ತೀಕ್ಷಣ 21ಕ್ಕೆ1, ಕಸುನ್ ರಜಿತಾ 36ಕ್ಕೆ2, ಏಂಜೆಲೊ ಮ್ಯಾಥ್ಯೂಸ್ 14ಕ್ಕೆ2, ಲಾಹಿರು ಕುಮಾರ 35ಕ್ಕೆ3)
ಶ್ರೀಲಂಕಾ: 25.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 160 (ಪಥುಮ್ ನಿಸಾಂಕ ಔಟಾಗದೆ 77, ಕುಸಾಲ ಮೆಂಡಿಸ್ 11, ಸದೀರಾಸಮರವಿಕ್ರಮ ಔಟಾಗದೆ 65, ಡೇವಿಡ್ ವಿಲಿ 30ಕ್ಕೆ2)
ಫಲಿತಾಂಶ: ಶ್ರೀಲಂಕಾ ತಂಡಕ್ಕೆ 8 ವಿಕೆಟ್‌ಗಳ ಜಯ ಮತ್ತು ಎರಡು ಅಂಕ.
ಪಂದ್ಯಶ್ರೇಷ್ಠ: ಲಾಹಿರು ಕುಮಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.