ಕೋಲ್ಕತ್ತ: ಈಡನ್ ಗಾರ್ಡನ್‌ನಲ್ಲಿ ಭಾನುವಾರ ಕಿಕ್ಕಿರಿದು ಸೇರಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ತಮ್ಮ ಜನ್ಮದಿನದ ‘ಸಿಹಿ’ಯನ್ನು ಹಂಚಿದರು.
ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ದಾಖಲಿಸಿದ ವಿರಾಟ್, ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಸಮಗಟ್ಟಿದರು. 11 ವರ್ಷಗಳ ನಂತರ ಸಚಿನ್‌ಗೆ ಸರಿಯಾಟಿಯಾಗಿ ನಿಂತರು. 2012ರಲ್ಲಿ ಏಕದಿನ ಪಂದ್ಯದಲ್ಲಿ ಸಚಿನ್ 49ನೇ ಶತಕ ದಾಖಲಿಸಿದ್ದರು. ಅದು ಅವರ ನೂರನೇ ನೂರು (ಟೆಸ್ಟ್ ಮಾದರಿಯ ಶತಕಗಳು ಸೇರಿ) ಕೂಡ ಆಗಿತ್ತು.
ಇನ್ನೊಂದೆಡೆ ಸ್ಪಿನ್ ಮೋಡಿ ಮೆರೆದ ರವೀಂದ್ರ ಜಡೇಜ ದಕ್ಷಿಣ ಆಫ್ರಿಕಾ ತಂಡವನ್ನು ಹೆಡೆಮುರಿ ಕಟ್ಟಿದರು. ಆತಿಥೇಯ ಭಾರತ ತಂಡವು 243 ರನ್‌ಗಳ ಭಾರಿ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಟ್ಟಿ ಮಾಡಿಕೊಂಡಿತು. ಟೂರ್ನಿಯಲ್ಲಿ ಭಾರತಕ್ಕೆ ಇದು ಸತತ ಎಂಟನೇ ಜಯವಾಗಿದೆ.
ಟೂರ್ನಿಯುದ್ದಕ್ಕೂ ರನ್‌ಗಳ ಹೊಳೆಯನ್ನೇ ಹರಿಸಿದ್ದ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಇಲ್ಲಿ 327 ರನ್‌ಗಳ ಗೆಲುವಿನ ಗುರಿಗೆ ಉತ್ತರವಾಗಿ 27.1 ಓವರ್‌ಗಳಲ್ಲಿ 83 ರನ್ ಗಳಿಸಿ ಶರಣಾಯಿತು. ಕ್ರೀಡಾಂಗಣದಲ್ಲಿ ಸೇರಿದ್ದ 70 ಸಾವಿರಕ್ಕೂ ಹೆಚ್ಚು ಅಭಿ ಮಾನಿಗಳು ಸಂಭ್ರಮದಲ್ಲಿ ತೇಲಿದರು. ತ್ರಿವರ್ಣ ಧ್ವಜಗಳು ನಲಿದವು.
ಉತ್ತಮ ಆರಂಭ: ಈಡನ್ ಗಾರ್ಡನ್ ಪಿಚ್ ಮರ್ಮವನ್ನು ಸರಿಯಾಗಿ ಅರಿತಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದಾಗ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಅಲ್ಲದೇ ಶುಭಮನ್ ಗಿಲ್ ಅವರೊಂದಿಗೆ ರೋಹಿತ್ ಉತ್ತಮ ಆರಂಭವನ್ನೂ ನೀಡಿದರು. ಇನಿಂಗ್ಸ್‌ನ ಮೊದಲ 35 ಎಸೆತಗಳಲ್ಲಿ 62 ರನ್ ಪೇರಿಸಿದರು. ಅದರಲ್ಲಿ ಗಿಲ್ ತುಸು ನಿಧಾನವಾಗಿ (23; 24ಎ) ಆಡಿದರೂ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು. ಆದರೆ ರೋಹಿತ್ 24 ಎಸೆತಗಳಲ್ಲಿ 40 ರನ್ ಸೂರೆ ಮಾಡಿದರು. ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಸಿಡಿಸಿ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದರು. ಆದರೆ ಆರನೇ ಓವರ್‌ನಲ್ಲಿ ಕಗಿಸೊ ರಬಾಡ ಎಸೆತದಲ್ಲಿ ರೋಹಿತ್ ಔಟಾದರು.
ಗಿಲ್ ಜೊತೆಗೆ ಸೇರಿದ ವಿರಾಟ್ ಕೊಹ್ಲಿ ದೊಡ್ಡ ಹೊಡೆತಗಳಿಗೆ ಕೈಹಾಕಲಿಲ್ಲ. ಪಿಚ್‌ನಲ್ಲಿ ಚೆಂಡಿನ ಚಲನೆ ತುಸು ನಿಧಾನವಾಗತೊಡಗಿತ್ತು. ತಿರುವು ಮತ್ತು ಅನಿರೀಕ್ಷಿತ ಬೌನ್ಸ್ ಕೂಡ ಆಗುತ್ತಿತ್ತು. ಆದ್ದರಿಂದ ಅವರು ಎಚ್ಚರಿಕೆಯಿಂದ ಆಡಿದರು.
11ನೇ ಓವರ್‌ನಲ್ಲಿ ಕೇಶವ್ ಮಹಾರಾಜ್ ಎಸೆತವನ್ನು ಅಂದಾಜಿಸುವಲ್ಲಿ ವಿಫಲರಾದ ಗಿಲ್ ಕ್ಲೀನ್‌ಬೌಲ್ಡ್ ಆದರು. ಈ ಹಂತದಲ್ಲಿ ವಿರಾಟ್ ಜೊತೆಗೂಡಿದ ಶ್ರೇಯಸ್ ಅಯ್ಯರ್ (77; 87ಎ) ಚೆಂದದ ಜೊತೆಯಾಟವಾಡಿದರು.
ಮೂರನೇ ವಿಕೆಟ್‌ಗೆ 134 ರನ್ ಸೇರಿಸಲು ಕಾರಣರಾದರು. ಅದರಲ್ಲಿ ಶ್ರೇಯಸ್ ಏಳು ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿದರು. 37ನೇ ಓವರ್‌ನಲ್ಲಿ ಶ್ರೇಯಸ್ ವಿಕೆಟ್ ಗಳಿಸಿದ ಲುಂಗಿ ಎನ್‌ಗಿಡಿ ಜೊತೆಯಾಟ ಮುರಿದರು. ಕೆ.ಎಲ್. ರಾಹುಲ್ ಕೇವಲ ಎಂಟು ರನ್ ಗಳಿಸಿದರು.
ಸೂರ್ಯಕುಮಾರ್ ಯಾದವ್ 14 ಎಸೆತಗಳಲ್ಲಿ 22 ರನ್ ಹೊಡೆದರು. ಆದರೆ ವಿರಾಟ್ ಮಾತ್ರ ತಮ್ಮ ಆಟಕ್ಕೆ ಆಂಡಿಕೊಂಡಿದ್ದರು.ಅವರು ಇಲ್ಲಿ ಒಂದೂ ಸಿಕ್ಸರ್ ದಾಖಲಿಸಲಿಲ್ಲ. 119 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಆದರೆ ಎಂದಿನಂತೆ ಸಂಭ್ರಮಿಸಲಿಲ್ಲ. ಹೆಲ್ಮೆಟ್ ತೆಗೆದು ಆಗಸದತ್ತ ಬ್ಯಾಟ್ ಎತ್ತಿ ವಂದಿಸಿದರು. ಬೆವರು ಒಸರುತ್ತಿದ್ದ ಮೊಗದಲ್ಲಿ ದಣಿವು ಕಂಡಿತ್ತು. ಇನ್ನೊಂದು ಬದಿಯಲ್ಲಿದ್ದ ರವೀಂದ್ರ ಜಡೇಜ ಅವರನ್ನು ಅಪ್ಪಿಕೊಂಡು ಅಭಿನಂದನೆ ಸ್ವೀಕರಿಸಿದರು.
ಕೇವಲ 15 ಎಸೆತಗಳಲ್ಲಿ 29 ರನ್ ಸೂರೆ ಮಾಡಿದ ಜಡೇಜ ಬೌಲಿಂಗ್‌ನಲ್ಲಿಯೂ ಮಿಂಚಿದರು.
ಐದು ವಿಕೆಟ್ ಗೊಂಚಲು: ಟೂರ್ನಿಯಲ್ಲಿ ನಾಲ್ಕು ಶತಕ ಬಾರಿಸಿರುವ ಕ್ವಿಂಟನ್ ಡಿ ಕಾಕ್ ಅವರನ್ನು ತಮ್ಮ ಮೊದಲ ಓವರ್‌ನಲ್ಲಿಯೇ ಕ್ಲೀನ್‌ಬೌಲ್ಡ್ ಮಾಡಿದ ಸಿರಾಜ್ ದಕ್ಷಿಣ ಆಫ್ರಿಕಾದ ಪತನಕ್ಕೆ ಮುನ್ನುಡಿ ಬರೆದರು.
ಒಂಬತ್ತನೇ ಓವರ್‌ನಲ್ಲಿ ತೆಂಬಾ ಬವುಮಾ ವಿಕೆಟ್ ಹಾರಿಸಿದ ಜಡೇಜ ತಮ್ಮ ಮೋಡಿ ಆರಂಭಿಸಿದರು. ಸಿಡಿಲಬ್ಬರದ ಶೈಲಿಯ ಬ್ಯಾಟರ್ ಹೆನ್ರಿಚ್ ಕ್ಲಾಸನ್, ಡೇವಿಡ್ ಮಿಲ್ಲರ್, ಕೇಶವ್ ಮಹಾರಾಜ್, ಕಗಿಸೊ ರಬಾಡ ವಿಕೆಟ್‌ಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಇನ್ನೊಂದು ಬದಿಯಿಂದ ಉಳಿದ ಬೌಲರ್‌ಗಳೂ ಅವರಿಗೆ ಉತ್ತಮ ಜೊತೆ ನೀಡಿದರು. ದಕ್ಷಿಣ ಆಫ್ರಿಕಾದ ಯಾವುದೇ ಬ್ಯಾಟರ್ ವೈಯಕ್ತಿಕ ಸ್ಕೋರ್ 15 ರನ್ ಕೂಡ ದಾಟಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.