ಪುಣೆ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಅನುಭವಿ ಆಟಗಾರ ಮುಷ್ಫಿಕುರ್ ರಹೀಂ ಅವರು, ಭಾರತ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯಕ್ಕೂ ಮುನ್ನ ತಮ್ಮ ತಂಡದ ಆಟಗಾರರಿಗೆ ವಿರಾಟ್ ಕೊಹ್ಲಿಯನ್ನು ಕೆಣಕದಂತೆ ಎಚ್ಚರಿಸಿದ್ದಾರೆ.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಇಂದು ಪುಣೆಯಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಸ್ಟಾರ್‌ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿರುವ ರಹೀಂ, 'ವಿಶ್ವದ ಕೆಲವು ಬ್ಯಾಟರ್‌ಗಳು ಸ್ಲೆಡ್ಜ್ ಮಾಡಿದರೆ ಇಷ್ಟಪಡುತ್ತಾರೆ. ಆ ಮೂಲಕ ಅವರು ಪುಟಿದೇಳುತ್ತಾರೆ. ಹಾಗಾಗಿ ನಾನು ಎಂದಿಗೂ ವಿರಾಟ್ ಕೊಹ್ಲಿಯನ್ನು ಕೆಣಕುವುದಿಲ್ಲ. ಅಷ್ಟೇ ಅಲ್ಲ ಕೊಹ್ಲಿಯನ್ನು ಕೆಣಕದಂತೆ ಮತ್ತು ಸಾಧ್ಯವಾದಷ್ಟು ಬೇಗನೆ ಔಟ್ ಮಾಡುವಂತೆ ನಮ್ಮ ಬೌಲರ್‌ಗಳಿಗೆ ಸದಾ ಹೇಳುತ್ತಿರುತ್ತೇನೆ' ಎಂದಿದ್ದಾರೆ.
'ಆತನ (ಕೊಹ್ಲಿ) ಎದುರು ಆಡುವಾಗ, ಬ್ಯಾಟಿಂಗ್‌ಗೆ ಹೋದಾಗಲೆಲ್ಲ ನನ್ನನ್ನು ಕೆಣಕುತ್ತಾನೆ. ಯಾವುದೇ ಪಂದ್ಯವನ್ನು ಸೋಲಲು ಬಯಸದ ಆತ ಹೋರಾಟದ ಮನೋಭಾವವುಳ್ಳ ಆಟಗಾರ. ಆತನೊಂದಿಗಿನ ಪೈಪೋಟಿ, ಭಾರತದ ವಿರುದ್ಧ ಸೆಣಸಾಡುವುದು ನನಗಿಷ್ಟ' ಎಂದು ರಹೀಂ ಹೇಳಿಕೊಂಡಿದ್ದಾರೆ.
ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ವಿಶ್ವಕಪ್‌ನಲ್ಲಿ ಒಟ್ಟು ಐದು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ನಾಲ್ಕರಲ್ಲಿ ಜಯಿಸಿರುವ ಭಾರತ, ಒಂದು ಸಲ ಮುಗ್ಗರಿಸಿದೆ.
ಬಾಂಗ್ಲಾದೇಶ ವಿರುದ್ಧ 19 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ, 73.13ರ ಸರಾಸರಿಯಲ್ಲಿ 1,097 ರನ್ ಗಳಿಸಿದ್ದಾರೆ.
ಬಲಾಬಲ
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ತಲಾ ಮೂರು ಪಂದ್ಯಗಳನ್ನು ಆಡಿವೆ. ಭಾರತ ಮೂರರಲ್ಲೂ ಗೆದ್ದು ಅಜೇಯ ಓಟ ಮುಂದುವರಿಸಿದರೆ, ಬಾಂಗ್ಲಾ ಒಂದು ಪಂದ್ಯವನ್ನಷ್ಟೇ ಗೆದ್ದಿದೆ.
ಈ ಪಂದ್ಯವನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿ ಟೀಂ ಇಂಡಿಯಾ ಇದೆ. ಕಳೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಸೋತಿರುವ ಬಾಂಗ್ಲಾ, ಜಯದ ಹಳಿಗೆ ಮರಳಲು ತಂತ್ರ ರೂಪಿಸುತ್ತಿದೆ. ಪಂದ್ಯ ಮಧ್ಯಾಹ್ನ 2ಕ್ಕೆ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.