ADVERTISEMENT

CWC 2023 NZ vs SL: ಶ್ರೀಲಂಕಾ ವಿರುದ್ಧ ಗೆಲುವು, ಸೆಮಿಫೈನಲ್ ಸನಿಹ ನ್ಯೂಜಿಲೆಂಡ್

ಮಹಮ್ಮದ್ ನೂಮಾನ್
Published 9 ನವೆಂಬರ್ 2023, 11:59 IST
Last Updated 9 ನವೆಂಬರ್ 2023, 11:59 IST
<div class="paragraphs"><p>ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾದ ಚರಿತ್ ಅಸಲಂಕ ವಿಕೆಟ್ ಪಡೆದ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಅವರನ್ನು ಸಹ ಆಟಗಾರರು ಅಭಿನಂದಿಸಿದರು. </p></div>

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾದ ಚರಿತ್ ಅಸಲಂಕ ವಿಕೆಟ್ ಪಡೆದ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಅವರನ್ನು ಸಹ ಆಟಗಾರರು ಅಭಿನಂದಿಸಿದರು.

   

-ಪ್ರಜಾವಾಣಿ ಚಿತ್ರ /ಪ್ರಶಾಂತ್ ಎಚ್.ಜಿ.

ಬೆಂಗಳೂರು: ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿದ ನ್ಕೂಜಿಲೆಂಡ್‌ ತಂಡದವರು ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಸನಿಹ ಬಂದು ನಿಂತರು. 

ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಕೇನ್‌ ವಿಲಿಯಮ್ಸನ್‌ ಬಳಗ ಅಧಿಕಾರಯುತ ಪ್ರದರ್ಶನ ನೀಡಿತು. ಮೊದಲು ಬ್ಯಾಟ್‌ ಮಾಡಿದ ಎದುರಾಳಿಗಳನ್ನು 171 ರನ್‌ಗಳಿಗೆ ನಿಯಂತ್ರಿಸಿತಲ್ಲದೆ, 23.2 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. 

ಡೆವೊನ್‌ ಕಾನ್ವೆ (45; 42 ಎ., 4X9), ರಚಿನ್‌ ರವೀಂದ್ರ (42; 34 ಎ., 4X3, 6X3) ಮತ್ತು ಡೆರಿಲ್‌ ಮಿಚೆಲ್‌ (43; 31 ಎ., 4X5, 6X2) ಅವರು ಜಯದ ಹಾದಿ ಸುಗಮಗೊಳಿಸಿದರು. ಲಂಕಾ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದ ಬೌಲರ್‌ಗಳಿಗೂ ಗೆಲುವಿನ ಶ್ರೇಯ ಸಲ್ಲಬೇಕು. 

ತನ್ನ ಲೀಗ್‌ ವ್ಯವಹಾರ ಕೊನೆ ಗೊಳಿಸಿದ ಕಿವೀಸ್‌ 9 ಪಂದ್ಯಗಳಿಂದ 10 ಪಾಯಿಂಟ್ಸ್‌ ಸಂಗ್ರಹಿಸಿದೆ. ಅಫ್ಗಾನಿಸ್ತಾನ– ದಕ್ಷಿಣ ಆಫ್ರಿಕಾ (ನ.10) ಮತ್ತು ಪಾಕಿಸ್ತಾನ– ಇಂಗ್ಲೆಂಡ್ (ನ.11) ನಡುವಣ ಪಂದ್ಯಗಳ ಬಳಿಕವೇ ನ್ಯೂಜಿಲೆಂಡ್‌ನ ಸೆಮಿ ಪ್ರವೇಶ ನಿರ್ಧಾರವಾಗಲಿದೆ. 

ಉತ್ತಮ ರನ್‌ರೇಟ್‌ ಹೊಂದಿರುವ ಕಾರಣ ಕಿವೀಸ್‌ ತಂಡ ಸೆಮಿಗೇರುವ ಸಾಧ್ಯತೆಯೇ ಅಧಿಕ. ಹಾಗಾದಲ್ಲಿ ನಾಲ್ಕರಘಟ್ಟದಲ್ಲಿ ಭಾರತ– ನ್ಯೂಜಿಲೆಂಡ್‌ ಹಣಾಹಣಿ ನಡೆಯಲಿದೆ.

ಸುಲಭ ಗುರಿ ಬೆನ್ನಟ್ಟಿದ ನ್ಯೂಜಿ ಲೆಂಡ್‌ ತಂಡಕ್ಕೆ ಕಾನ್ವೆ ಮತ್ತು ರಚಿನ್‌ ಮೊದಲ ವಿಕೆಟ್‌ಗೆ 12.2 ಓವರ್‌ಗಳಲ್ಲಿ 86 ರನ್‌ ಸೇರಿಸಿ ಉತ್ತಮ ಆರಂಭ ನೀಡಿದರು. ಇವರಿಬ್ಬರು ಎರಡು ರನ್‌ಗಳ ಅಂತರದಲ್ಲಿ ಮರಳಿದರು. ಆ ಬಳಿಕ ಮೂರು ವಿಕೆಟ್‌ಗಳನ್ನು ಅನಗತ್ಯವಾಗಿ ಕಳೆದುಕೊಂಡಿತು. ಗುರಿ ಕಡಿಮೆಯಿದ್ದ ಕಾರಣ ಒತ್ತಡಕ್ಕೆ ಒಳಗಾಗದೆ ಜಯ ಸಾಧಿಸಿತು. 

ಕಿವೀಸ್ ಶಿಸ್ತಿನ ಬೌಲಿಂಗ್‌: ಮೊದಲು ಬ್ಯಾಟ್‌ಗೆ ಕಳುಹಿಸಲ್ಪಟ್ಟ ಲಂಕಾ ತಂಡ, ನ್ಯೂಜಿಲೆಂಡ್‌ನ ಶಿಸ್ತಿನ ಬೌಲಿಂಗ್‌ ಮುಂದೆ ನಲುಗಿ ಸವಾಲಿನ ಮೊತ್ತ ಪೇರಿಸಲು ವಿಫಲವಾಯಿತು. ಆರಂಭಿಕ ಬ್ಯಾಟರ್‌ ಕುಸಾಲ್‌ ಪೆರೀರಾ (51; 28 ಎ., 4X9, 6X2) ಅವರ ಅಬ್ಬರದ ಅರ್ಧಶತಕ ಹೊರತುಪಡಿಸಿದರೆ, ಲಂಕಾ ಇನಿಂಗ್ಸ್‌ನಲ್ಲಿ ಜೀವಕಳೆ ಇರಲಿಲ್ಲ.

ಖಾತೆ ತೆರೆಯುವ ಮುನ್ನವೇ ಪೆರೀರಾಗೆ ಜೀವದಾನ ಲಭಿಸಿತು. ಸೌಥಿ ಅವರ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್ ಟಾಮ್‌ ಲೇಥಮ್‌ ಸುಲಭ ಕ್ಯಾಚ್‌ ಕೈಚೆಲ್ಲಿದರು. ಆದರೆ ಮುಂದಿನ ಎಸೆತ ದಲ್ಲಿ ಸೌಥಿ, ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಪಥುಮ್‌ ನಿಸಾಂಕ (2) ಅವರನ್ನು ವಿಕೆಟ್‌ಕೀಪರ್‌ಗೆ ಕ್ಯಾಚ್‌ ಕೊಡಿಸುವಲ್ಲಿ ಯಶಸ್ವಿಯಾದರು.

ಎಡಗೈ ವೇಗಿ ಟ್ರೆಂಟ್ ಬೌಲ್ಟ್‌ (37ಕ್ಕೆ 3) ಐದನೇ ಓವರ್‌ನಲ್ಲಿ ಕುಸಾಲ್‌ ಮೆಂಡಿಸ್‌ (6) ಮತ್ತು ಸದೀರ ಸಮರವಿಕ್ರಮ (1) ಅವರನ್ನು ಔಟ್ ಮಾಡಿದರು. ಇವರಿಬ್ಬರು ಕ್ರಮವಾಗಿ ರಚಿನ್ ರವೀಂದ್ರ ಮತ್ತು ಡೆರಿಲ್ ಮಿಚೆಲ್‌ಗೆ ಕ್ಯಾಚಿತ್ತರು. 

ಒಂದು ಬದಿಯಲ್ಲಿ ವಿಕೆಟ್‌ ಬೀಳುತ್ತಿದ್ದರೂ, ಪೆರೀರಾ ಅಬ್ಬರದ ಆಟವಾಡಿದರು. ಸೌಥಿ ಬೌಲ್‌ ಮಾಡಿದ ಇನಿಂಗ್ಸ್‌ನ ನಾಲ್ಕು ಮತ್ತು ಆರನೇ ಓವರ್‌ನಲ್ಲಿ ಒಟ್ಟು ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ ಹೊಡೆದರಲ್ಲದೆ, 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ಪರ ದಾಖಲಾದ ಎರಡನೇ ಅತಿವೇಗದ ಅರ್ಧಶತಕ ಇದು.  ಆದರೆ ಅವರ ಬೀಸಾಟಕ್ಕೆ 10ನೇ ಓವರ್‌ನಲ್ಲಿ ತೆರೆಬಿತ್ತು. ಲಾಕಿ ಫರ್ಗ್ಯುಸನ್‌ ಬೌಲಿಂಗ್‌ನಲ್ಲಿ ಡ್ರೈವ್‌ ಮಾಡಲು ಮುಂದಾಗಿ ಮಿಚೆಲ್‌ ಸ್ಯಾಂಟ್ನರ್‌ಗೆ ಕ್ಯಾಚ್‌ ನೀಡಿದರು. 

ಮಧ್ಯಮ ಕ್ರಮಾಂಕದಲ್ಲಿ ಮರು ಹೋರಾಟಕ್ಕೆ ಪ್ರಯತ್ನಿಸಿದ ಏಂಜೆಲೊ ಮ್ಯಾಥ್ಯೂಸ್‌ (16; 27 ಎ.) ಮತ್ತು ಧನಂಜಯ ಡಿಸಿಲ್ವಾ (19; 24 ಎ) ಅವರಿಗೆ ಸ್ಪಿನ್ನರ್‌ ಮಿಚೆಲ್ ಸ್ಯಾಂಟ್ನರ್‌ ಪೆವಿಲಿಯನ್‌ ಹಾದಿ ತೋರಿದರು. ಸ್ಕೋರ್‌ 105 ಆಗುವಷ್ಟರಲ್ಲಿ ಏಳು ವಿಕೆಟ್‌ಗಳು ಬಿದ್ದವು.

ಮಹೀಶ ತೀಕ್ಷಣ (ಔಟಾಗದೆ 38; 91 ಎ., 4X3) ಮತ್ತು ದಿಲ್ಶಾನ್‌ ಮದುಶಂಕ (19; 48 ಎ., 4X2) ಅವರು ಕೊನೆಯ ವಿಕೆಟ್‌ಗೆ 43 ರನ್‌ ಸೇರಿಸಿ ತಂಡ ಬೇಗನೇ ಆಲೌಟ್‌ ಆಗುವುದನ್ನು ತಪ್ಪಿಸಿದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ 46.4 ಓವರ್‌ಗಳಲ್ಲಿ 171 (ಕುಸಾಲ್ ಪೆರೀರಾ 51, ಏಂಜೆಲೊ ಮ್ಯಾಥ್ಯೂಸ್‌ 16, ಧನಂಜಯ ಡಿಸಿಲ್ವಾ 19, ಮಹೀಶ ತೀಕ್ಷಣ ಔಟಾಗದೆ 38, ದಿಲ್ಶಾನ್‌ ಮದುಶಂಕ 19, ಟ್ರೆಂಟ್‌ ಬೌಲ್ಟ್‌ 37ಕ್ಕೆ 3, ಲಾಕಿ ಫರ್ಗ್ಯುಸನ್‌ 35ಕ್ಕೆ 2, ಮಿಚೆಲ್‌ ಸ್ಯಾಂಟ್ನರ್‌ 22ಕ್ಕೆ 2, ರಚಿನ್‌ ರವೀಂದ್ರ 21ಕ್ಕೆ 2); ನ್ಯೂಜಿಲೆಂಡ್ 23.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 172 (ಡೆವೊನ್‌ ಕಾನ್ವೆ 45, ರಚಿನ್‌ ರವೀಂದ್ರ 42, ಕೇನ್ ವಿಲಿಯಮ್ಸನ್‌ 14, ಡೆರಿಲ್‌ ಮಿಚೆಲ್ 43, ಮಾರ್ಕ್ ಚಾಪ್‌ಮನ್‌ 7, ಗ್ಲೆನ್‌ ಫಿಲಿಪ್ಸ್ ಔಟಾಗದೆ 17, ಏಂಜೆಲೊ ಮ್ಯಾಥ್ಯೂಸ್‌ 29ಕ್ಕೆ 2)

ಫಲಿತಾಂಶ: ನ್ಯೂಜಿಲೆಂಡ್‌ಗೆ 5 ವಿಕೆಟ್‌ ಗೆಲುವು 

ಪಂದ್ಯಶ್ರೇಷ್ಠ: ಟ್ರೆಂಟ್‌ ಬೌಲ್ಟ್‌ 

ಬೌಲ್ಟ್‌ 50 ವಿಕೆಟ್‌ ಸಾಧನೆ

ವೇಗಿ ಟ್ರೆಂಟ್‌ ಬೌಲ್ಟ್‌ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 50 ವಿಕೆಟ್‌ ಪಡೆದ ನ್ಯೂಜಿಲೆಂಡ್‌ ತಂಡದ ಮೊದಲ ಬೌಲರ್‌ ಎನಿಸಿಕೊಂಡರು. ಇದೇ ವೇಳೆ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಎಲ್ಲ ಮೂರು ಮಾದರಿ) 600 ವಿಕೆಟ್‌ ಪೂರೈಸಿದರು. ಟಿಮ್‌ ಸೌಥಿ ಮತ್ತು ಡೇನಿಯಲ್‌ ವೆಟೋರಿ ಬಳಿಕ ಈ ಸಾಧನೆ ಮಾಡಿದ ನ್ಯೂಜಿಲೆಂಡ್‌ನ ಮೂರನೇ ಬೌಲರ್‌ ಎಂಬ ಗೌರವ ಅವರಿಗೆ ಒಲಿಯಿತು.

ಕ್ರೀಡಾಂಗಣದಲ್ಲಿ 17,500 ಪ್ರೇಕ್ಷಕರು

ಈ ಪಂದ್ಯ ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುಮಾರು 17,500 ಪ್ರೇಕ್ಷಕರು ಸೇರಿದ್ದರು. ಇಲ್ಲಿ ಇದುವರೆಗೆ ನಡೆದಿರುವ ನಾಲ್ಕು ಪಂದ್ಯಗಳಿಗೂ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆತಿದೆ.

ಭಾನುವಾರ ನಡೆಯಲಿರುವ ಭಾರತ– ನೆದರ್ಲೆಂಡ್ಸ್‌ ಪಂದ್ಯಕ್ಕೆ ಕ್ರೀಡಾಂಗಣ ಕಿ‌ಕ್ಕಿರಿದು ತುಂಬುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.