ADVERTISEMENT

CWC 2023 | PAK Vs SA: ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಗೆಲುವು

ಪಿಟಿಐ
Published 27 ಅಕ್ಟೋಬರ್ 2023, 8:12 IST
Last Updated 27 ಅಕ್ಟೋಬರ್ 2023, 8:12 IST
<div class="paragraphs"><p>ಗೆಲುವಿನ ರನ್ ಬಾರಿಸಿ ಸಂಭ್ರಮಿಸಿದ ದಕ್ಷಿಣ ಆಫ್ರಿಕಾದ ಕೇಶವ್ ಮಹರಾಜ್</p></div>

ಗೆಲುವಿನ ರನ್ ಬಾರಿಸಿ ಸಂಭ್ರಮಿಸಿದ ದಕ್ಷಿಣ ಆಫ್ರಿಕಾದ ಕೇಶವ್ ಮಹರಾಜ್

   

– ರಾಯಿಟರ್ಸ್ ಚಿತ್ರ

ಚೆನ್ನೈ: ಈ ಬಾರಿಯ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ  ಅತ್ಯಂತ ಹೆಚ್ಚು ರೋಚಕತೆ ಮೂಡಿಸಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನ ವಿರುದ್ಧ ಜಯಿಸಿತು. 

ADVERTISEMENT

ಇದರೊಂದಿಗೆ ಬಾಬರ್ ಆಜಂ ಬಳಗದ ಸೆಮಿಫೈನಲ್ ಹಾದಿಯು ಮತ್ತಷ್ಟು ಕಠಿಣವಾಯಿತು. 1 ವಿಕೆಟ್‌ನಿಂದ ಗೆದ್ದ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿಯಿತು. 

ಟೂರ್ನಿಯಲ್ಲಿ ತೆಂಬಾ ಬವುಮಾ ಬಳಗವು  ಇಲ್ಲಿಯವರೆಗೆ ಗೆದ್ದ್ದಿದ್ದ ನಾಲ್ಕು ಪಂದ್ಯಗಳಲ್ಲಿಯೂ ನೂರು ರನ್‌ಗಳಿಗಿಂತ ಹೆಚ್ಚು ಅಂತರದ ಸುಲಭ ಜಯ ಸಾಧಿಸಿತ್ತು. ಆದರೆ ಇಲ್ಲಿ ಮಾತ್ರ ಜಯ ಸುಲಭವಾಗಿ ಒಲಿಯಲಿಲ್ಲ.

271 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ  ಏಡನ್ ಮರ್ಕರಂ (91; 93ಎ 4X7, 6X3) ಅವರೊಬ್ಬರೇ ದೊಡ್ಡ ಇನಿಂಗ್ಸ್ ಆಡಿದರು. ಇದರಿಂದಾಗಿ ಜಯದ ಆಸೆ ಜೀವಂತವಾಗಿಟ್ಟರು.  ಇಡೀ ಟೂರ್ನಿಯಲ್ಲಿ ಅಬ್ಬರಿಸಿದ್ದ  ಉಳಿದ ಬ್ಯಾಟರ್‌ಗಳನ್ನು ಕಟ್ಟಿಹಾಕಿದ ಪಾಕ್ ಬೌಲರ್‌ಗಳು ಗೆಲುವಿನ ಅವಕಾಶವನ್ನು ತಮ್ಮತ್ತ ಎಳೆದುಕೊಂಡಿದ್ದರು.

ಆದರೆ ದಕ್ಷಿಣ ಆಫ್ರಿಕಾದ ಬಾಲಂಗೋಚಿ ಬ್ಯಾಟರ್‌ಗಳು ಪಾಕ್ ಆಸೆಗೆ ತಣ್ಣೀರೆರಚಿದರು.  250 ರನ್‌ಗಳಿಗೆ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ತಂಡವನ್ನು ಕಟ್ಟಿಹಾಕುವಲ್ಲಿ ಬೌಲರ್‌ಗಳು ಎಡವಿದರು.   ಕೇಶವ ಮಹಾರಾಜ್ (ಅಜೇಯ 7), ಲುಂಗಿ ಗಿಡಿ (4 ರನ್) ಮತ್ತು  ತಬ್ರೇಜ್ ಶಮ್ಸಿ (ಔಟಾಗದೆ 4) ಗೆಲುವಿನ ಕಾಣಿಕೆ ನೀಡಿದರು. ಅದರಲ್ಲೂ ಮಹಾರಾಜ್ ಮತ್ತು ಶಮ್ಸಿ ಅವರು ಮುರಿಯದ ಹತ್ತನೇ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 11 ರನ್‌ಗಳು ಮಹತ್ವದ್ದಾಗಿದ್ದವು. ಅವರಿಬ್ಬರೂ ಸೇರಿ ಎದುರಿಸಿದ 15 ಎಸೆತಗಳಲ್ಲಿ ಕೆಲವು ನಾಟಕೀಯ ತಿರುವುಗಳೂ ಇದ್ದವು.

ಹ್ಯಾರಿಸ್ ರವೂಫ್ ಹಾಕಿದ 46ನೇ ಓವರ್‌ನಲ್ಲಿ ಎಲ್‌ಬಿಡಬ್ಲ್ಯುಗಾಗಿ ಸಲ್ಲಿಸಿದ ಮನವಿಯೂ ಪಾಕಿಸ್ತಾನಕ್ಕೆ ಕೈಹಿಡಿಯಲಿಲ್ಲ. ಇದರಿಂದಾಗಿ ಶಮ್ಸಿ ಔಟಾಗಲಿಲ್ಲ. 47ನೇ ಓವರ್‌ನಲ್ಲಿ  ಇಬ್ಬರೂ ಎಚ್ಚರಿಕೆಯಿಂದ ಮೂರು ರನ್‌ಗಳನ್ನು ಮಾತ್ರ ಗಳಿಸಿದರು. 48ನೇ ಓವರ್‌ ಹಾಕಲು ಸ್ಪಿನ್ನರ್ ನವಾಜ್‌ಗೆ ಚೆಂಡು ಕೊಟ್ಟ ನಾಯಕ ಬಾಬರ್ ನಂತರ ಕೈಕೈ ಹಿಸುಕಿಕೊಂಡರು.

ಈ ಓವರ್‌ನ ಎರಡನೇ ಎಸೆತವನ್ನು ಬೌಂಡರಿಗೆ ಕಳಿಸಿದ ಮಹಾರಾಜ್ ಕುಣಿದು ಕುಪ್ಪಳಿಸಿದರು. ಪಾಕ್ ಆಟಗಾರರು ಹತಾಶೆಗೊಂಡರು.

ಎರಡು ಅರ್ಧಶತಕಗಳು

ಪಾಕ್ ತಂಡವು ಹೋರಾಟದ ಮೊತ್ತ ಪೇರಿಸಲು ಬಾಬರ್ ಆಜಂ ಮತ್ತು ಸೌದ್ ಶಕೀಲ್ ಗಳಿಸಿದ ಅರ್ಧಶತಕಗಳು ನೆರವಾದವು.

ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಏಳು ಓವರ್‌ಗಳಲ್ಲಿಯೇ ಎರಡು ವಿಕೆಟ್ ಕಳೆದುಕೊಂಡಿತು. ವೇಗಿ ಮಾರ್ಕೊ ಜೆನ್ಸನ್ ಅವರ ಪರಿಣಾಮಕಾರಿ ದಾಳಿಯಿಂದಾಗಿ ಶಫೀಕ್ ಮತ್ತು ಇಮಾಮ್ ಉಲ್ ಹಕ್ ಅವರು ಪೆವಿಲಿಯನ್ ಸೇರಿದ್ದರು. ಈ ಹಂತದಲ್ಲಿ ನಾಯಕ ಬಾಬರ್ ಮತ್ತು ಮೊಹಮ್ಮದ್ ರಿಜ್ವಾನ್ ಅವರು ಜೊತೆಗೂಡಿ ದೊಡ್ಡ ಇನಿಂಗ್ಸ್ ಆಡುವ ಭರವಸೆ ಮೂಡಿಸಿದ್ದರು. ಆದರೆ, ಗೆರಾಲ್ಡ್ ಕೋಜಿ ಎಸೆತದಲ್ಲಿ ರಿಜ್ವಾನ್ ಔಟಾಗುವುದರೊಂದಿಗೆ ಜೊತೆಯಾಟ ಮುರಿದುಬಿತ್ತು.

ಆಗ ತಾಳ್ಮೆಯಿಂದ ಆಡಿದ ಬಾಬರ್ 65 ಎಸೆತಗಳಲ್ಲಿ 50 ರನ್ ಗಳಿಸಿದರು. ಆಧರೆ ಇಫ್ತಿಕಾರ್ ಅಹಮದ್ 21 ರನ್‌ ಗಳಿಸಿ ಔಟಾದರು. ಈ ಸಂದರ್ಭದಲ್ಲಿ ಕ್ರೀಸ್‌ ಗೆ ಬಂದ ಶಕೀಲ್ ಆಟಕ್ಕೆ ಕುದುರುವಷ್ಟರಲ್ಲಿ ಬಾಬರ್ ಔಟಾದರು. ಶಕೀಲ್ ಜೊತೆಗೆ ಶದಬ್ ಖಾನ್ (43 ರನ್) ತಂಡದ ಮೊತ್ತ ಹೆಚ್ಚಲು ಕಾರಣರಾದರು.

ದಕ್ಷಿಣ ಆಫ್ರಿಕಾದ ಬೌಲರ್ ತಬ್ರೇಜ್ ಶಮ್ಸಿ ನಾಲ್ಕು ವಿಕೆಟ್ ಗಳಿಸಿ ಪಾಕ್ ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು.

ಸಂಕ್ಷಿಪ್ತ ಸ್ಕೋರು:

ಪಾಕಿಸ್ತಾನ: 46.4 ಓವರ್‌ಗಳಲ್ಲಿ 270 (ಬಾಬರ್ ಆಜಂ 50, ಮೊಹಮ್ಮದ್ ರಿಜ್ವಾನ 31, ಇಫ್ತಿಕಾರ್ ಅಹಮದ್ 21, ಸೌದ್ ಶಕೀಲ್ 52, ಶಾದಾಬ್ ಖಾನ್ 43, ಮೊಹಮ್ಮದ್ ನವಾಜ್ 24, ಮಾರ್ಕೊ ಜೆನ್ನ್ 43ಕ್ಕೆ3, ಗೆರಾಲ್ಡ್ ಕೋಜಿ 42ಕ್ಕೆ2, ತಬ್ರೇಜ್ ಶಮ್ಸಿ 60ಕ್ಕೆ4)

ದಕ್ಷಿಣ ಆಫ್ರಿಕಾ: 47.2 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 271  (ತೆಂಬಾ ಬವುಮಾ 28, ಕ್ವಿಂಟನ್ ಡಿ ಕಾಕ್ 24, ರಸಿ ವ್ಯಾನ್ ಡೆರ್ ಡಸೆ 21, ಡೇವಿಡ್ ಮಿಲ್ಲರ್ 29, ಮಾರ್ಕೊ ಜೆನ್ಸೆನ್ 20, ಕೇಶವ್ ಮಹಾರಾಜ್ ಔಟಾಗದೆ 7, ತಬ್ರೇಜ್ ಶಮ್ಸಿ ಔಟಾಗದೇ 4, ಶಹೀನ್ ಅಫ್ರಿದಿ 45ಕ್ಕೆ3, ಹ್ಯಾರಿಸ್ ರವೂಫ್ 62ಕ್ಕೆ2, ಮೊಹಮ್ಮದ್ ವಸೀಂ ಜೂನಿಯರ್ 50ಕ್ಕೆ2, ಉಸಾಮ ಮೀರ್ 45ಕ್ಕೆ2)

ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 1 ವಿಕೆಟ್ ಜಯ ಮತ್ತು 2 ಅಂಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.