ಅಹಮದಾಬಾದ್: ಅಜೇಯ ಅರ್ಧಶತಕ ದಾಖಲಿಸಿದ ರೆಸಿ ವ್ಯಾನ್ ಡರ್ ಡಸೆ ಆಟದಿಂದ ದಕ್ಷಿಣ ಆಫ್ರಿಕಾ ತಂಡವು ರೌಂಡ್ ರಾಬಿನ್ ಲೀಗ್ ಸುತ್ತಿನಲ್ಲಿ ಅಫ್ಗಾನಿಸ್ತಾನ ವಿರುದ್ಧ ಜಯಿಸಿತು.
ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 5 ವಿಕೆಟ್‌ಗಳಿಂದ ಗೆದ್ದಿತು. ಉಭಯ ತಂಡಗಳಿಗೂ ಇದು ಲೀಗ್ ಹಂತದ ಕೊನೆಯ ಪಂದ್ಯವಾಗಿತ್ತು.
ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ತೆಂಬಾ ಬವುಮಾ ಬಳಗವು ಒಟ್ಟು 14 ಅಂಕ ಗಳಿಸಿ, ಎರಡನೇ ಸ್ಥಾನದಲ್ಲಿ ಮುಂದುವರಿಯಿತು. ಟೂರ್ನಿಯುದ್ದಕ್ಕೂ ಗಮನ ಸೆಳೆಯುವಂತಹ ಆಟವಾಡಿರುವ ಅಫ್ಗಾನಿಸ್ತಾನವು ಎಂಟು ಅಂಕ ಗಳಿಸಿ ಅಭಿಯಾನ ಮುಗಿಸಿತು.
ಇಲ್ಲಿ ಟಾಸ್ ಗೆದ್ದ ಅಫ್ಗಾನಿಸ್ತಾನ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಜ್ಮತ್‌ವುಲ್ಲ ಒಮರ್‌ಝೈ ಅಜೇಯ 97 ರನ್ ಗಳಿಸಿದರು. ಅವರ ಚೆಂದದ ಆಟದ ಬಲದಿಂದ ಅಫ್ಗಾನಿಸ್ತಾನವು 50 ಓವರ್‌ಗಳಲ್ಲಿ 244 ರನ್ ಗಳಿಸಿತು.
ಉಳಿದ ಬ್ಯಾಟರ್‌ಗಳು ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೋಜಿ (44ಕ್ಕೆ4) ಅವರ ದಾಳಿಗೆ ತತ್ತರಿಸಿದರು. ಒಮರ್‌ಝೈ ಏಕಾಂಗಿ ಹೋರಾಟ ನಡೆಸಿದರು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 47.3 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 247 ರನ್ ಗಳಿಸಿತು.
ಕ್ವಿಂಟನ್ ಡಿ ಕಾಕ್ (41; 47ಎ) ಮತ್ತು ನಾಯಕ ಬವುಮಾ (23; 28ಎ) ಅವರು ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 64 ರನ್ ಸೇರಿಸಿದರು. ಬವುಮಾ 11ನೇ ಓವರ್‌ನಲ್ಲಿ ಮುಜೀಬ್ ಉರ್ ರೆಹಮಾನ್ ಎಸೆತದಲ್ಲಿ ಔಟಾದರು. ಆಗ ಕ್ರೀಸ್‌ಗೆ ಬಂದ ರಸಿ ವ್ಯಾನ್ 95 ಎಸೆತಗಳಲ್ಲಿ 76 ರನ್ ಗಳಿಸಿದರು. ಅದರಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು.
ಏಡನ್ ಮರ್ಕರಂ, ಡೇವಿಡ್ ಮಿಲ್ಲರ್ ಮತ್ತು ಆ್ಯಂಡಿಲೆ ಕೂಡ ಉಪಯುಕ್ತ ಕಾಣಿಕೆ ನೀಡಿದರು.
ಸಂಕ್ಷಿಪ್ತ ಸ್ಕೋರು: ಅಫ್ಗಾನಿಸ್ತಾನ: 50 ಓವರ್‌ಗಳಲ್ಲಿ 244 (ಗುರ್ಬಾಜ್ 25, ರೆಹಮತ್ ಶಾ 26, ಅಜ್ಮತ್‌ವುಲ್ಲಾ ಔಟಾಗದೆ 97, ನೂರ್ ಅಹಮದ್ 26, ಲುಂಗಿ ಗಿಡಿ 69ಕ್ಕೆ2, ಜೆರಾಲ್ಡ್ ಕೋಜಿ 44ಕ್ಕೆ4, ಕೇಶವ್ ಮಹಾರಾಜ್ 25ಕ್ಕೆ2)
ದಕ್ಷಿಣ ಆಫ್ರಿಕಾ: 47.3 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 247 (ಕ್ವಿಂಟನ್ ಡಿಕಾಕ್ 41, ತೆಂಬಾ ಬವುಮಾ 23, ರೆಸಿ ವ್ಯಾನ್ ಡೆರ್ ಡಸೆ ಔಟಾಗದೆ 76, ಏಡನ್ ಮರ್ಕರಂ 25, ಡೇವಿಡ್ ಮಿಲ್ಲರ್ 24, ಆ್ಯಂಡಿಲೆ ಪಿಶುವಾಯೊ ಔಟಾಗದೆ 39, ಮೊಹಮ್ಮದ್ ನಬಿ 35ಕ್ಕೆ2, ರಶೀದ್ ಖಾನ್ 37ಕ್ಕೆ2)
ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 5 ವಿಕೆಟ್‌ಗಳ ಜಯ.
ಪಂದ್ಯಶ್ರೇಷ್ಠ: ರೆಸಿ ವ್ಯಾನ್ ಡರ್ ಡಸೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.