ಬೆಂಗಳೂರು: ಶ್ರೀಲಂಕಾ ತಂಡದ ವಿರುದ್ಧ ಗುರುವಾರ (ನವೆಂಬರ್ 9 ರಂದು) ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಮೂರು ವಿಕೆಟ್ ಪಡೆದ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ವಿಕೆಟ್ ಪಡೆದ ಸಾಧನೆ ಮಾಡಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 10 ಓವರ್ ಎಸೆದ ಬೌಲ್ಟ್, 37 ರನ್ ನೀಡಿ 3 ಮೇಡಿನ್ ಸಹಿತ 3 ವಿಕೆಟ್ ಉರುಳಿಸಿದರು. ಬೌಲ್ಟ್ ಹಾಗೂ ಕಿವೀಸ್ ಬೌಲಿಂಗ್ ಎದುರು ದಿಕ್ಕೆಟ್ಟ ಲಂಕಾ ಪಡೆ 46.4 ಓವರ್‌ಗಳು ಆಗುವಷ್ಟರಲ್ಲಿ 171 ರನ್ ಗಳಿಗೆ ಆಲೌಟ್ ಆಯಿತು.
ನ್ಯೂಜಿಲೆಂಡ್ ತಂಡ ಈ ಗುರಿಯನ್ನು 23.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪಿತು.
ನ್ಯೂಜಿಲೆಂಡ್‌ನ ಮೂರನೇ ಬೌಲರ್
ಈ ಪಂದ್ಯದಲ್ಲಿ ಮೂರು ವಿಕೆಟ್ ಪಡೆಯುವುದರೊಂದಿಗೆ ಬೌಲ್ಟ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ವಿಕೆಟ್ ಕಬಳಿಸಿದ ನ್ಯೂಜಿಲೆಂಡ್‌ನ ಮೂರನೇ ಬೌಲರ್ ಎಂಬ ಶ್ರೇಯಕ್ಕೆ ಭಾಜನರಾದರು. ಜೊತೆಗೆ ವಿಶ್ವಕಪ್ ಪಂದ್ಯಗಳಲ್ಲಿ 50ಕ್ಕಿಂತ ಹೆಚ್ಚು ವಿಕೆಟ್ ಕಿತ್ತ ಸಾಧನೆಯನ್ನೂ ಮಾಡಿದರು.
ನ್ಯೂಜಿಲೆಂಡ್ ತಂಡದ ಪರ 78 ಟೆಸ್ಟ್, 113 ಏಕದಿನ ಹಾಗೂ 55 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಬೌಲ್ಟ್ ಖಾತೆಯಲ್ಲಿ ಸದ್ಯ 601 ವಿಕೆಟ್‌ಗಳಿವೆ.
ಸಹ ಆಟಗಾರ ಟಿಮ್ ಸೌಥಿ ಮತ್ತು ಮಾಜಿ ನಾಯಕ ಡೆನಿಯಲ್ ವೆಟೋರಿ ಮಾತ್ರ ನ್ಯೂಜಿಲೆಂಡ್ ಪರ ಬೌಲ್ಟ್‌ಗಿಂತ ಮುಂದಿದ್ದಾರೆ. ಸೌಥಿ, ಮೂರೂ ಮಾದರಿಯ 368 ಪಂದ್ಯಗಳ 448 ಇನಿಂಗ್ಸ್‌ಗಳಲ್ಲಿ 732 ವಿಕೆಟ್ ಉರುಳಿಸಿದ್ದಾರೆ. ವೆಟೋರಿ 442 ಪಂದ್ಯಗಳ 498 ಇನಿಂಗ್ಸ್‌ಗಳಲ್ಲಿ 705 ವಿಕೆಟ್ ಪಡೆದಿದ್ದಾರೆ.
ವಿಶ್ವಕಪ್‌ನ 28 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಬೌಲ್ಟ್ ಖಾತೆಯಲ್ಲಿ ಸದ್ಯ 52 ವಿಕೆಟ್‌ಗಳಿವೆ.
ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾ (39 ಇನಿಂಗ್ಸ್‌ಗಳಲ್ಲಿ 71 ವಿಕೆಟ್), ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (39 ಇನಿಂಗ್ಸ್‌ಗಳಲ್ಲಿ 68 ವಿಕೆಟ್), ಆಸ್ಟ್ರೇಲಿಯಾದ ಮಿಚೇಲ್ ಸ್ಟಾರ್ಕ್ (26 ಇನಿಂಗ್ಸ್‌ಗಳಲ್ಲಿ 59 ವಿಕೆಟ್), ಶ್ರೀಲಂಕಾದ ಲಸಿತ್ ಮಲಿಂಗ (28 ಇನಿಂಗ್ಸ್‌ಗಳಲ್ಲಿ 56 ವಿಕೆಟ್) ಮತ್ತು ಪಾಕಿಸ್ತಾನದ ವಾಸಿಂ ಅಕ್ರಂ (36 ಇನಿಂಗ್ಸ್‌ಗಳಲ್ಲಿ 55 ವಿಕೆಟ್) ಮಾತ್ರವೇ ಬೌಲ್ಟ್‌ಗಿಂತ ಹೆಚ್ಚು ವಿಕೆಟ್ ಕಬಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.