ತರೂಬಾ (ಟ್ರಿನಿಡಾಡ್ ಅಂಡ್ ಟೊಬಾಗೊ): ಲಾಕಿ ಫರ್ಗ್ಯೂಸನ್ (4–4–0–3) ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಅತ್ಯಂತ ಮಿತವ್ಯಯದ ಬೌಲಿಂಗ್ ದಾಖಲೆಗೆ ಪಾತ್ರರಾದರು. ನ್ಯೂಜಿಲೆಂಡ್ ಬೌಲರ್‌ಗಳು ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಪುವಾ ನ್ಯೂಗಿನಿ ತಂಡವನ್ನು 78 ರನ್‌ಗೆ ಉರುಳಿಸಿದರು. ನಂತರ 46 ಎಸೆತಗಳು ಇರುವಂತೆಯೇ ಏಳು ವಿಕೆಟ್‌ಗಳಿಂದ ಗೆದ್ದರು.
ಸೋಮವಾರ ನಡೆದ ‘ಸಿ’ ಗುಂಪಿನ ಔಪಚಾರಿಕ ಪಂದ್ಯದಲ್ಲಿ ನ್ಯೂಜಿಲೆಂಡ್ 12.2 ಓವರ್‌ಗಳಲ್ಲಿ 3 ವಿಕೆಟ್‌ಗೆ 79 ರನ್ ಹೊಡೆಯಿತು.
ಫಿನ್ ಅಲೆನ್ (0) ಮತ್ತು ರಚಿನ್ ರವೀಂದ್ರ (6) ಅವರು ಬೇಗನೆ ನಿರ್ಗಮಿಸಿದರು. ಡೆವೋನ್ ಕಾನ್ವೆ (35, 32ಎ) ತಂಡದ ನೆರವಿಗೆ ಬಂದರು.
ನಂತರ ನಾಯಕ ಕೇನ್ ವಿಲಿಯಮ್ಸನ್ (ಔಟಾಗದೆ 18) ಮತ್ತು ಡೆರೆಲ್ ಮಿಚೆಲ್ (ಔಟಾಗದೆ 19) ಅವರಿಬ್ಬರೂ ಗೆಲುವಿನ ವಿಧಿ ಪೂರೈಸಿದರು. ಮಳೆಯ ಕಾರಣ ಪಂದ್ಯ ವಿಳಂಬವಾಗಿ ಆರಂಭಗೊಂಡಿತು.
ಅಫ್ಗಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಈಗಾಗಲೇ ಗುಂಪಿನಿಂದ ಸೂಪರ್ ಎಂಟರ ಹಂತ ಪ್ರವೇಶಿಸಿದ್ದವು. ಸೋಮವಾರ ನಡೆದ ಕೊನೆಯ ಪಂದ್ಯ ಗೆಲ್ಲುವ ಮೂಲಕ ನ್ಯೂಜಿಲೆಂಡ್ 4 ಪಾಯಿಂಟ್ಸ್ ಸಂಗ್ರಹಿಸಿದರೆ, ನ್ಯೂಗಿನಿ ತಂಡ ಆಡಿದ ನಾಲ್ಕು ಪಂದ್ಯಗಳಲ್ಲೂ ಸೋಲು ಅನುಭವಿಸಿತು.
ಈ ಹಿಂದೆ ಕೆನಡಾದ ಸಾದ್ ಬಿನ್ ಜಾಫರ್ (4–4–0–2) ಅವರು ಫರ್ಗ್ಯೂಸನ್ ಗಿಂತ ಮೊದಲು ಈ ಸಾಧನೆ ದಾಖಲಿಸಿದ್ದರು. ಆದರೆ ಅದು ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ (ಪನಮಾ ವಿರುದ್ಧ) ಬಂದಿತ್ತು.
ಸ್ಕೋರುಗಳು: ಪಾಪುವಾ ನ್ಯೂಗಿನಿ: 19.4 ಓವರುಗಳಲ್ಲಿ 78 (ಚಾರ್ಲ್ಸ್ ಅಮಿನಿ 17, ಸೇಸೆ ಬಾವು 12, ನಾರ್ಮನ್ ವನುವ 14; ಟ್ರೆಂಟ್ ಬೌಲ್ಟ್ 14ಕ್ಕೆ2, ಟಿಮ್ ಸೌಥಿ 11ಕ್ಕೆ2, ಲಾಕಿ ಫರ್ಗ್ಯೂಸನ್ ಸೊನ್ನೆಗೆ 3, ಈಶ್ ಸೋಧಿ 29ಕ್ಕೆ2)
ನ್ಯೂಜಿಲೆಂಡ್: 12.2 ಓವರ್‌ಗಳಲ್ಲಿ 3 ವಿಕೆಟ್‌ಗೆ 79 (ಡೆವೊನ್ ಕಾನ್ವೆ 35, ಕೇನ್ ವಿಲಿಯಮ್ಸನ್ ಔಟಾಗದೆ 18, ಡೆರಿಲ್ ಮಿಚೆಲ್ ಔಟಾಗದೆ 19, ಕಬುವಾ ಮೋರಿಯಾ 4ಕ್ಕೆ2)
ಪಂದ್ಯ ಶ್ರೇಷ್ಠ: ಲಾಕಿ ಫರ್ಗ್ಯೂಸನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.