ನ್ಯೂಯಾರ್ಕ್: ಬ್ಯಾಟರ್‌ಗಳಿಗೆ ತ್ರಾಸದಾಯಕವಾಗಿದ್ದ ಪಿಚ್‌ನಲ್ಲಿ 113 ರನ್‌ಗಳ ಅಲ್ಪಮೊತ್ತವನ್ನು ರಕ್ಷಿಸುವಲ್ಲಿ ದಕ್ಷಿಣ ಆಫ್ರಿಕಾ ಯಶಸ್ವಿಯಾಯಿತು. ಸೋಮವಾರ ನಡೆದ ಟಿ20 ವಿಶ್ವಕಪ್‌ನ ‘ಡಿ’ ಗುಂಪಿನ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶ ವಿರುದ್ಧ 4 ರನ್‌ಗಳ ಜಯ ಸಾಧಿಸಿತು.
ಈ ಹಣಾಹಣಿಯು ಇದೇ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಭಾರತ– ಪಾಕಿಸ್ತಾನ ನಡುವಣ ಪಂದ್ಯವನ್ನು ನೆನಪಿಸಿತು. ಭಾರತ ತಂಡವೂ 119 ರನ್‌ಗಳ ಕಡಿಮೆ ಮೊತ್ತವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿತ್ತು.
ಆಡಿರುವ ಮೂರೂ ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡವು 6 ಅಂಕಗಳೊಂದಿಗೆ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಜತೆಗೆ ಸೂಪರ್ ಎಂಟರ ಘಟ್ಟಕ್ಕೆ ಸ್ಥಾನವನ್ನು ಕಾಯ್ದಿರಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡವು ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅವರ ಅರ್ಧಶತಕದ ಜೊತೆಯಾಟದ ನೆರವಿಂದ 6 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾ ತಂಡವು 50 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಆದರೆ, ಮಧ್ಯಮ ಕ್ರಮಾಂಕದಲ್ಲಿ ತೌಹಿದ್ ಹೃದಯ್ (37; 34ಎ) ಮತ್ತು ಅನುಭವಿ ಮಹ್ಮದುಲ್ಲಾ (20) ಅವರು ಚೇತರಿಕೆ ನೀಡಿದರು. ಐದನೇ ವಿಕೆಟ್ ಜೊತೆಯಾಟದಲ್ಲಿ 44 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ತೌಹಿದ್ ವಿಕೆಟ್ ಬೀಳುತ್ತಿದ್ದಂತೆ ತಂಡವು ಒತ್ತಡಕ್ಕೆ ಒಳಗಾಯಿತು.
ಮತ್ತೊಂದೆಡೆ ದಕ್ಷಿಣ ಆಫ್ರಿಕಾದ ಬೌಲರ್‌ಗಳು ಬಿಗಿ ದಾಳಿಯ ಮೂಲಕ ಹಿಡಿತ ಸಾಧಿಸಿದರು. ಕೇಶವ್ ಮಹಾರಾಜ ಹಾಕಿದ ಕೊನೆಯ ಓವರ್‌ನಲ್ಲಿ ಬಾಂಗ್ಲಾ ತಂಡದ ಗೆಲುವಿಗೆ 11 ರನ್ ಬೇಕಿತ್ತು. ಅಂತಿಮ ಎರಡು ಎಸೆತದಲ್ಲಿ 6 ರನ್ ಬೇಕಿದ್ದಾಗ ಮಹ್ಮದುಲ್ಲಾದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದರು. ಆದರೆ, ಬೌಂಡರಿ ಲೈನ್ ಬಳಿ ಏಡನ್ ಮರ್ಕರಂ ಕ್ಯಾಚ್ ಹಿಡಿದು ಬಾಂಗ್ಲಾಕ್ಕೆ ನಿರಾಸೆ ಮೂಡಿಸಿದರು. ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 109 ರನ್ ಗಳಿಸಿ ಸವಾಲನ್ನು ಮುಗಿಸಿತು. ಕೇಶವ್ ಮಹಾರಾಜ ಮೂರು ವಿಕೆಟ್ ಪಡೆದರೆ, ಕಗಿಸೊ ರಬಾಡ ಮತ್ತು ಹೆನ್ರಿಚ್ ನಾರ್ಟ್ಜೆ ತಲಾ ಎರಡು ವಿಕೆಟ್ ಗಳಿಸಿದರು.
ಇದಕ್ಕೂ ಮೊದಲು ತಂಜಿಮ್ ಹಸನ್ ಶಕಿಬ್ (18ಕ್ಕೆ3) ಅವರು ತಸ್ಕಿನ್ ಅಹ್ಮದ್ (19ಕ್ಕೆ2) ಬೆಂಬಲ ದೊಡನೆ ದಕ್ಷಿಣ ಆಫ್ರಿಕಾದ ಪ್ರಬಲ ಬ್ಯಾಟಿಂಗ್ ಸರದಿಯನ್ನು ಕಾಡಿದರು. ಮುಸ್ತಫಿಝುರ್ (4–0–18–0) ಅವರೂ ಈ ಪ್ರಯತ್ನಕ್ಕೆ ಕೈಜೋಡಿಸಿದರು. ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ ಐದು ಓವರ್‌ಗಳಲ್ಲಿ 23 ರನ್‌ಗಳಾಗುಷ್ಟರಲ್ಲಿನಾಲ್ಕು ವಿಕೆಟ್ ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿತ್ತು.
ಹೆನ್ರಿಚ್ ಕ್ಲಾಸೆನ್ (46) ಮತ್ತು ಡೇವಿಡ್ ಮಿಲ್ಲರ್ (29) ಅವರಿಬ್ಬರು ಆರಂಭದ ಕುಸಿತವನ್ನು ತಡೆಗಟ್ಟಿದರೂ ತಂಡ ದೊಡ್ಡ ಮೊತ್ತ ಗಳಿಸಲಾಗಲಿಲ್ಲ. ಸ್ಪಿನ್ನರ್‌ಗಳೂ ಜಿಪುಣರಾಗಿದ್ದರು. ನಾಸೌ ಕೌಂಟಿ ಪಿಚ್ ಬ್ಯಾಟರ್‌ಗಳನ್ನು ಎಂದಿನಂತೆ ಕಾಡಿತು.
ಕ್ಲಾಸೆನ್ ಮತ್ತು ಮಿಲ್ಲರ್ ಐದನೇ ವಿಕೆಟ್ ಜೊತೆಯಾಟದಲ್ಲಿ 79 ರನ್ ಸೇರಿಸಿ ತಂಡವನ್ನು ಚೇತರಿಕೆಯತ್ತ ಒಯ್ದರು. ಆದರೆ ರನ್‌ವೇಗ ಹೆಚ್ಚಿಸಲು ಅವರಿಗೆ ಸಾಧ್ಯವಾಗಲಿಲ್ಲ.
ದಕ್ಷಿಣ ಆಫ್ರಿಕಾ: 20 ಓವರುಗಳಲ್ಲಿ 6 ಕ್ಕೆ 113 (ಕ್ವಿಂಟನ್ ಡಿಕಾಕ್ 18, ಹೆನ್ರಿಚ್ ಕ್ಲಾಸೆನ್ 46, ಡೇವಿಡ್ ಮಿಲ್ಲರ್ 29; ತಂಜಿಮ್ ಹಸನ್ ಶಕಿಬ್ 18ಕ್ಕೆ3, ತಸ್ಕಿನ್ ಅಹ್ಮದ್ 19ಕ್ಕೆ2, ರಿಷದ್ ಹುಸೇನ್ 32ಕ್ಕೆ1). ಬಾಂಗ್ಲಾದೇಶ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 109 (ತೌಹಿದ್ ಹೃದಯ್ 37, ಮಹ್ಮದುಲ್ಲಾ 20; ಕೇಶವ್ ಮಹಾರಾಜ 27ಕ್ಕೆ 3, ಕಗಿಸೊ ರಬಾಡ 19ಕ್ಕೆ 2, ಹೆನ್ರಿಚ್ ನಾರ್ಟ್ಜೆ 17ಕ್ಕೆ 2). ಪಂದ್ಯದ ಆಟಗಾರ: ಹೆನ್ರಿಚ್ ಕ್ಲಾಸೆನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.