ADVERTISEMENT

T20 WC 2024 USA v IND | ಅಮೆರಿಕ ವಿರುದ್ಧ ಜಯ: ಸೂಪರ್ ಎಂಟರ ಘಟ್ಟಕ್ಕೆ ಭಾರತ

ಪಿಟಿಐ
Published 12 ಜೂನ್ 2024, 18:36 IST
Last Updated 12 ಜೂನ್ 2024, 18:36 IST
<div class="paragraphs"><p>ಗೆಲುವಿನ ಬಳಿಕ ಅಮೆರಿಕ ಆಟಗಾರರ ಕೈಕುಲುಕಿದ ಭಾರತ ತಂಡ ಆಟಗಾರ ಶಿವಂ ದುಬೆ</p></div>

ಗೆಲುವಿನ ಬಳಿಕ ಅಮೆರಿಕ ಆಟಗಾರರ ಕೈಕುಲುಕಿದ ಭಾರತ ತಂಡ ಆಟಗಾರ ಶಿವಂ ದುಬೆ

   

– ಪಿಟಿಐ ಚಿತ್ರ

ನ್ಯೂಯಾರ್ಕ್: ‌ಆಟಗಾರರ ಸತ್ವಪರೀಕ್ಷೆ ಮಾಡುವ ಪಿಚ್‌ನಲ್ಲಿ ಭಾರತದ ಅರ್ಷದೀಪ್ ಸಿಂಗ್ ಮತ್ತು ಸೂರ್ಯಕುಮಾರ್ ಯಾದವ್ ಅವರು ಪ್ರಖರವಾಗಿ ಬೆಳಗಿದರು.

ADVERTISEMENT

ನಾಸೌ ಕೌಂಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ಆತಿಥೇಯ ಅಮೆರಿಕ ಎದುರು ನಡೆದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಭಾರತ ತಂಡ ಜಯಿಸಿತು.

ಆರ್ಷದೀಪ್ (4–0–9–4) ಅವರ ಕರಾರುವಾಕ್ ದಾಳಿಯ ಮುಂದೆ ಅಮೆರಿಕ ತಂಡವನ್ನು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 110 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. 39 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ತಂಡಕ್ಕೆ ಸೂರ್ಯಕುಮಾರ್ (ಅಜೇಯ 50; 49ಎ) ಆಸರೆಯಾದರು. ಅವರಿಗೆ ಮತ್ತೊಬ್ಬ ‘ಮುಂಬೈಕರ್’ ಶಿವಂ ದುಬೆ (ಅಜೇಯ 31) ಜೊತೆಗೂಡಿದರು.

ಇದರಿಂದಾಗಿ ರೋಹಿತ್ ಪಡೆಯು 18.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 111 ರನ್ ಗಳಿಸಿ ಗೆದ್ದಿತು. ಆದರೆ ಈ ಹಾದಿ ಸುಗಮವಾಗಿರಲಿಲ್ಲ.

ವಿರಾಟ್ ಕೊಹ್ಲಿ ಟೂರ್ನಿಯಲ್ಲ ಸತತ ಮೂರನೇ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರು. ಈ ಪಂದ್ಯದಲ್ಲಿ ಅವರು ಎದುರಿಸಿದ ಮೊದಲ ಎಸೆತದಲ್ಲಿಯೇ ಸೌರಭ್ ನೇತ್ರಾವಳ್ಕರ್ ಅವರಿಗೆ ವಿಕೆಟ್ ಒಪ್ಪಿಸಿದರು. ಮೂರನೇ ಓವರ್‌ನಲ್ಲಿ ರೋಹಿತ್ ಕೂಡ ಸೌರಭ್ ಅವರಿಗೇ ವಿಕೆಟ್ ಕೊಟ್ಟರು.

ಇದರಿಂದಾಗಿ ತಂಡದ ರನ್‌ ಗಳಿಕೆ ವೇಗ ಕುಂಠಿತವಾಯಿತು. ಅಲ್ಲದೇ ಚೆಂಡು ಹೆಚ್ಚು ಎತ್ತರಕ್ಕೆ ಪುಟಿಯದ ಅಂಕಣದಲ್ಲಿ ಬ್ಯಾಟಿಂಗ್ ಸವಾಲಿನದಾಗಿತ್ತು. ಇದನ್ನು ಸೂರ್ಯ ಮತ್ತು ಶಿವಂ ತಾಳ್ಮೆಯಿಂದ ಎದುರಿಸಿದರು.

ಇನಿಂಗ್ಸ್‌ ಕೊನೆಯ 24 ಎಸೆತಗಳಲ್ಲಿ 24 ರನ್‌ಗಳು ಅವಶ್ಯವಿದ್ದವು. ಅಲ್ಲಿಯವರೆಗೂ ಅಮೆರಿಕ ತಂಡವು ಗೆಲುವಿನ ಕನಸು ಕಾಣುತ್ತಿತ್ತು. ಈ ಹಂತದಲ್ಲಿ ಸೂರ್ಯ ಹೊಡೆದ ಒಂದು ಸಿಕ್ಸರ್‌ ಭಾರತವನ್ನು ಗೆಲುವಿನತ್ತ ಮುನ್ನಡೆಸಿತು.

ಅರ್ಷದೀಪ್ ದಾಖಲೆ: ಆರ್ಷದೀಪ್‌ ಸಿಂಗ್ ಅವರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶ್ರೇಷ್ಠ ವೈಯಕ್ತಿಕ ಬೌಲಿಂಗ್ ಸಾಧನೆ ಮಾಡಿದರು. 2014ರಲ್ಲಿ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಆರ್. ಅಶ್ವಿನ್ (11ಕ್ಕೆ4) ಅವರು ಮಾಡಿದ್ದ ದಾಖಲೆಯನ್ನು ಮೀರಿ ನಿಂತರು.

ಇನಿಂಗ್ಸ್‌ನ ಮೊದಲ ಓವರ್‌ನ ಪ್ರಥಮ ಎಸೆತದಲ್ಲಿ ಶಯಾನ್ ಜಹಾಂಗೀರ್ ಮತ್ತು ಆರನೇ ಎಸೆತದಲ್ಲಿ ಆ್ಯಂಡ್ರೀಸ್ ಗೌಸ್ ಅವರ ವಿಕೆಟ್ ಕಬಳಿಸಿದರು.

ಈ ಪಂದ್ಯದಲ್ಲಿ ತಂಡದ ನಾಯಕತ್ವ ವಹಿಸಿದ್ದ ಆ್ಯರನ್ ಜೋನ್ಸ್ (11 ರನ್) ಅವರ ವಿಕೆಟ್ ಕಬಳಿಸಿ ಹಾರ್ದಿಕ್ ಪಾಂಡ್ಯ ಸಂಭ್ರಮಿಸಿದರು.

ಈ ಹಂತದಲ್ಲಿ ಅಮೆರಿಕ ತಂಡಕ್ಕೆ ಆರಂಭಿಕ ಬ್ಯಾಟರ್ ಸ್ಟೀವನ್ ಟೇಲರ್ (24; 30ಎ) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ ನಿತೀಶ್ ಕುಮಾರ್ (27; 23ಎ) ಸ್ವಲ್ಪ ಜೀವ ತುಂಬಿದರು.12ನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಸ್ಪಿನ್ನರ್ ಅಕ್ಷರ್ ಪಟೇಲ್ ಮುರಿದರು. ಅವರು ಟೇಲರ್ ವಿಕೆಟ್ ಗಳಿಸಿದರು.

ಅರ್ಷದೀಪ್ ಅವರು ತಮ್ಮ ಎರಡನೇ ಸ್ಪೆಲ್‌ನಲ್ಲಿ ನಿತೀಶ್ ಕುಮಾಋ್‌ ಹಾಗೂ ಹರ್ಮೀತ್ ಸಿಂಗ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಅಮೆರಿಕ ತಂಡದಲ್ಲಿರುವ ನ್ಯೂಜಿಲೆಂಡ್ ಮೂಲದ ಕೋರಿ ಆ್ಯಂಡರ್ಸನ್ (15; 12ಎ) ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಗಳಿಸಿದರು.

ವಿಶ್ರಾಂತಿ: ಅಮೆರಿಕ ತಂಡದ ನಾಯಕ ಭಾರತೀಯ ಮೂಲದ ಮೊನಾಂಕ್ ಪಟೇಲ್, ಕನ್ನಡಿಗ ನಾಸ್ತುಷ್ ಕೆಂಜಿಗೆ ಹಾಗೂ ಮಿಲಿಂದ್ ಕುಮಾರ್ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.