ನವದೆಹಲಿ: ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರು ನಿರ್ಮಿಸಿರುವ ಅತಿ ಹೆಚ್ಚು ಶತಕ ಗಳಿಕೆ ದಾಖಲೆಯನ್ನು ವಿರಾಟ್ ಕೊಹ್ಲಿ ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಟೂರ್ನಿ ವೇಳೆಯೇ ಸರಿಗಟ್ಟಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಹೇಳಿದ್ದಾರೆ.
ದಿಗ್ಗಜ ಕ್ರಿಕೆಟಿಗ ತೆಂಡೂಲ್ಕರ್ ಅವರು ಏಕದಿನ ಕ್ರಿಕೆಟ್‌ನಲ್ಲಿ 463 ಪಂದ್ಯಗಳಿಂದ 49 ಶತಕಗಳನ್ನು ಸಿಡಿಸಿದ್ದಾರೆ. ಕೊಹ್ಲಿಗೆ ಈ ದಾಖಲೆಯನ್ನು ಸರಿಗಟ್ಟಲು 2 ಶತಕ ಅಥವಾ ಮುರಿಯಲು 3 ಶತಕಗಳ ಅಗತ್ಯವಿದೆ. ಈವರೆಗೆ 282 ಪಂದ್ಯಗಳಲ್ಲಿ ಆಡಿರುವ ಕೊಹ್ಲಿ ಖಾತೆಯಲ್ಲಿ ಸದ್ಯ 47 ಶತಕಗಳಿವೆ.
ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗುಂಪು ಹಂತದಲ್ಲೇ ಇನ್ನೂ 8 ಪಂದ್ಯಗಳನ್ನು ಆಡಲಿದೆ. ಈ ವೇಳೆ ಸಚಿನ್ ದಾಖಲೆ ಮೀರುವ ಅವಕಾಶ ಕೊಹ್ಲಿಗೆ ಇದೆ.
ಐಸಿಸಿ ರಿವ್ಯೂವ್ ಪಾಡ್‌ಕಾಸ್ಟ್ ಎಪಿಸೋಡ್‌ನಲ್ಲಿ ಇದರ ಬಗ್ಗೆ ಮಾತನಾಡಿರುವ ಪಾಂಟಿಂಗ್, 'ನನ್ನ ಪ್ರಕಾರ ಕೊಹ್ಲಿ ಈ ಸಾಧನೆ ಮಾಡುತ್ತಾರೆ. ಕೊಹ್ಲಿ ಮೂರು ಶತಕ ಗಳಿಸುವರೇ ಎಂಬುದು ಬೇರೆ ವಿಷಯ. ಆದರೆ, ಖಂಡಿತವಾಗಿಯೂ ಎರಡು ಶತಕ ಗಳಿಸುತ್ತಾರೆ' ಎಂದು ಅಭಿಪ್ರಾಪಟ್ಟಿದ್ದಾರೆ.
ಭಾರತದ ಪಿಚ್‌ಗಳು ರನ್‌ಗಳಿಸಲು ಅನುಕೂಲಕರವಾಗಿವೆ. ವಿರಾಟ್ ಉತ್ತಮ ಲಯದಲ್ಲಿರುವಂತೆ ಕಾಣುತ್ತಿದೆ. ಅವರು ರನ್ ಗಳಿಸಲು ಎದುರು ನೋಡುತ್ತಿರುತ್ತಾರೆ ಎಂಬುದು ನಮಗೆಲ್ಲ ಗೊತ್ತೇ ಇದೆ. ಕೊಹ್ಲಿ ತಮ್ಮ ಮತ್ತು ತಂಡದ ಯಶಸ್ಸನ್ನು ಸದಾ ಬಯಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಾರಿಗೆ ಗೊತ್ತು ಇದು ಕೊಹ್ಲಿ ಪಾಲಿಗೆ ಕೊನೆಯ ವಿಶ್ವಕಪ್ ಟೂರ್ನಿ ಆದರೂ ಆಗಬಹುದು ಎಂದಿರುವ ಪಾಂಟಿಂಗ್, ಟೂರ್ನಿ ಮುಕ್ತಾಯದ ವೇಳೆಗೆ ಸಚಿನ್ ದಾಖಲೆಯನ್ನು ಮುರಿಯಲು ಸಾಧ್ಯವಾಗದಿದ್ದರೆ, ದಾಖಲೆ ಸರಿಗಟ್ಟಲಿದ್ದಾರೆ. ಇದೂ ಗಮನಾರ್ಹ ಸಾಧನೆಯಾಗಲಿದೆ ಎಂದು ಉಲ್ಲೇಖಿಸಿದ್ದಾರೆ.
2019ರ ಆಗಸ್ಟ್‌ನಿಂದ 2022ರ ಡಿಸೆಂಬರ್‌ವರೆಗೆ ಶತಕದ ಬರ ಅನುಭವಿಸಿದ್ದ ವಿರಾಟ್, ಅಲ್ಲಿಂದ ಈಚೆಗೆ ಆಡಿರುವ 15 ಇನಿಂಗ್ಸ್‌ಗಳಲ್ಲಿ 4 ಶತಕ ಸಿಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.