ದೆಹಲಿ: ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಮೊದಲ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಫ್ಗಾನಿಸ್ತಾನ 69 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಇದರೊಂದಿಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಭಾರಿ ಮುಖಭಂಗಕ್ಕೊಳಗಾಗಿದೆ. ಅಲ್ಲದೆ ಟೂರ್ನಿಯಲ್ಲಿ ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಎರಡನೇ ಸೋಲು ಕಂಡಿದೆ. ಮತ್ತೊಂದೆಡೆ ಅಫ್ಗಾನ್ ಪಡೆ ಚೊಚ್ಚಲ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಅಫ್ಗಾನಿಸ್ತಾನ 49.5 ಓವರ್‌ಗಳಲ್ಲಿ 284 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ (80) ಹಾಗೂ ಇಕ್ರಮ್ ಅಲಿಖಿಲ್ (58) ಸಮಯೋಚಿತ ಅರ್ಧಶತಕಗಳನ್ನು ಗಳಿಸಿದರು.
ಈ ಪೈಕಿ ಗುರ್ಬಾಜ್ ಮೊದಲ ವಿಕೆಟ್‌ಗೆ ಇಬ್ರಾಹಿಂ ಜದ್ರಾನ್ (28) ಜೊತೆ ಸೇರಿ 114 ರನ್‌ಗಳ ಜೊತೆಯಾಟ ಕಟ್ಟಿದರು. ಮಧ್ಯಮ ಕ್ರಮಾಂಕದಲ್ಲಿ ಅಲಿಖಿಲ್ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಕೆಳ ಕ್ರಮಾಂಕದಲ್ಲಿ ರಶೀದ್ ಖಾನ್ (23) ಹಾಗೂ ಮುಜೀಬ್ ಉರ್ ರೆಹಮಾನ್ (28) ಉಪಯುಕ್ತ ಕಾಣಿಕೆ ನೀಡಿದರು. ಇಂಗ್ಲೆಂಡ್ ಪರ ಆದಿಲ್ ರಶೀದ್ ಮೂರು ವಿಕೆಟ್ ಗಳಿಸಿದರು.
ಈ ಗುರಿ ಬೆನ್ನಟ್ಟಿದ ಆಂಗ್ಲರ ಪಡೆ, ಹ್ಯಾರಿ ಬ್ರೂಕ್ (66) ಅರ್ಧಶತಕದ ಹೊರತಾಗಿಯೂ 40.3 ಓವರ್‌ಗಳಲ್ಲಿ 215 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಜಾನಿ ಬೆಸ್ಟೊ (2), ಜೋ ರೂಟ್ (11), ನಾಯಕ ಜೋಸ್ ಬಟ್ಲರ್ (9), ಲಿಯಮ್ ಲಿವಿಂಗ್‌ಸ್ಟೋನ್ (10) ಹಾಗೂ ಸ್ಯಾಮ್ ಕರನ್ (10) ಬ್ಯಾಟಿಂಗ್ ವೈಫಲ್ಯ ಕಂಡರು. ಇನ್ನುಳಿದಂತೆ ಡೇವಿಡ್ ಮಲನ್ 32 ಹಾಗೂ ಆದಿಲ್ ರಶೀದ್ 20 ರನ್ ಗಳಿಸಿದರು.
ಅಫ್ಗಾನಿಸ್ತಾನಪರ ರಶೀದ್ ಖಾನ್ ಹಾಗೂ ಮುಜೀಬ್ ತಲಾ ಮೂರು ವಿಕೆಟ್ ಮತ್ತು ಮೊಹಮ್ಮದ್ ನಬಿ ಎರಡು ವಿಕೆಟ್ ಕಬಳಿಸಿ ಮಿಂಚಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.