ADVERTISEMENT

ಸಚಿನ್ ರೀತಿ ಆಡುವೆ ಎಂದಿದ್ದೆ: ಆಸಿಸ್ ಎದುರು ಶತಕ ಸಿಡಿಸಿದ ಇಬ್ರಾಹಿಂ ಹೇಳಿಕೆ

ಪಿಟಿಐ
Published 7 ನವೆಂಬರ್ 2023, 14:34 IST
Last Updated 7 ನವೆಂಬರ್ 2023, 14:34 IST
<div class="paragraphs"><p>ಅಫ್ಗಾನಿಸ್ತಾನದ ಆರಂಭಿಕ ಬ್ಯಾಟರ್‌ ಇಬ್ರಾಹಿಂ ಜದ್ರಾನ್‌</p></div>

ಅಫ್ಗಾನಿಸ್ತಾನದ ಆರಂಭಿಕ ಬ್ಯಾಟರ್‌ ಇಬ್ರಾಹಿಂ ಜದ್ರಾನ್‌

   

ಪಿಟಿಐ ಚಿತ್ರ

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಪಂದ್ಯದಲ್ಲಿ ಶತಕ ಸಿಡಿಸಿದ ಅಫ್ಗಾನಿಸ್ತಾನದ ಇಬ್ರಾಹಿಂ ಜದ್ರಾನ್‌ ಅವರು ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರಂತೆ ಆಡುವುದಾಗಿ ಮೊದಲೇ ಹೇಳಿದ್ದೆ ಎಂದು ಹೇಳಿಕೊಂಡಿದ್ದಾರೆ.

ADVERTISEMENT

ಇಂದು (ನವೆಂಬರ್ 7) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಅಫ್ಗಾನಿಸ್ತಾನ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ ಇಬ್ರಾಹಿಂ ಅವರು, ವಿಶ್ವಕಪ್ ಟೂರ್ನಿಯಲ್ಲಿ ಅಫ್ಗಾನಿಸ್ತಾನ ಪರ ಶತಕ ಸಿಡಿಸಿದ ಮೊದಲ ಆಟಗಾರ ಎನಿಸಿದ್ದಾರೆ.

143 ಎಸೆತಗಳನ್ನು ಎದುರಿಸಿದ ಜದ್ರಾನ್‌, ಅಜೇಯ 129 ರನ್‌ ಗಳಿಸಿದರು. ಅವರೊಂದಿಗೆ ಇನಿಂಗ್ಸ್‌ ಆರಂಭಿಸಿದ ರಮಾನುಲ್ಲಾ ಗರ್ಬಾಜ್‌ (21), ರಹಮತ್‌ ಶಾ (30), ನಾಯಕ ಹಷ್ಮತ್‌ವುಲ್ಲಾ ಶಾಹಿದಿ (26), ಅಜ್ಮತ್‌ವುಲ್ಲಾ ಒಮರ್ಜೈ (22) ಅಲ್ಪ ಕಾಣಿಕೆ ನೀಡಿದರು. ಕೊನೆಯಲ್ಲಿ ಬೀಸಾಟವಾಡಿದ ರಶೀದ್‌ ಖಾನ್‌ ಕೇವಲ 18 ಎಸೆತಗಳಲ್ಲಿ 35 ರನ್‌ ಸಿಡಿಸಿದರು.

ಹೀಗಾಗಿ ಅಫ್ಗಾನಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 291 ರನ್‌ ಕಲೆಹಾಕಿದೆ.

ಸವಾಲಿನ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ 20 ಓವರ್‌ಗಳ ಮುಕ್ತಾಯಕ್ಕೆ 98 ರನ್‌ ಗಳಿಸಿ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಗ್ಲೆನ್‌ ಮ್ಯಾಕ್ಸ್‌ವೆಲ್‌ (22) ಮತ್ತು ಪ್ಯಾಟ್‌ ಕಮಿನ್ಸ್‌ (1) ಕ್ರೀಸ್‌ನಲ್ಲಿದ್ದಾರೆ.

ಅಫ್ಗಾನ್‌ಗೆ ನೆರವಾದ ಸಚಿನ್ ಟಿಪ್ಸ್‌
ಈ ಪಂದ್ಯದ ಮುನ್ನಾದಿನ ಸಚಿನ್‌ ತೆಂಡೂಲ್ಕರ್‌ ಅವರು ಅಫ್ಗಾನಿಸ್ತಾನ ಆಟಗಾರರನ್ನು ಭೇಟಿಯಾಗಿ ಉಪಯುಕ್ತ ಸಲಹೆಗಳನ್ನು ನೀಡಿದ್ದರು. ಇದು ಅಫ್ಗಾನ್‌ ಆಟಗಾರರಿಗೆ ಇಂದಿನ ಪಂದ್ಯದಲ್ಲಿ ನೆರವಾಗಿದೆ. ಸಚಿನ್‌ ಜೊತೆ ಹೆಚ್ಚು ಸಮಯ ಮಾತನಾಡಿದ್ದ ಇಬ್ರಾಹಿಂ, ಆಸ್ಟ್ರೇಲಿಯಾದ ಬಲಿಷ್ಠ ಬೌಲಿಂಗ್‌ ದಾಳಿ ಎದುರು ಲೀಲಾಜಾಲವಾಗಿ ರನ್‌ ಗಳಿಸಿದ್ದಾರೆ.

ಮೊದಲ ಇನಿಂಗ್ಸ್‌ ಮುಕ್ತಾಯವಾದ ಬಳಿಕ ತಮ್ಮ ಬ್ಯಾಟಿಂಗ್‌ ಕುರಿತು ಮಾತನಾಡಿರುವ ಇಬ್ರಾಹಿಂ, 'ಸಚಿನ್‌ ತೆಂಡೂಲ್ಕರ್‌ ಅವರೊಂದಿಗೆ ಉತ್ತಮ ಮಾತುಕತೆ ನಡೆಸಿದ್ದೆ. ಅವರು ತಮ್ಮ ಅನುಭವವನ್ನು ಹಂಚಿಕೊಂಡರು. ಸಾಕಷ್ಟು ಶಕ್ತಿ ಮತ್ತು ವಿಶ್ವಾಸವನ್ನು ತುಂಬಿದರು. ಈ ಪಂದ್ಯಕ್ಕೂ ಮುನ್ನ 'ಸಚಿನ್‌ ಅವರಂತೆ ಬ್ಯಾಟ್‌ ಮಾಡುವೆ' ಎಂದು ಹೇಳಿದ್ದೆ' ಎಂದಿದ್ದಾರೆ.

ಇನಿಂಗ್ಸ್‌ ಆರಂಭಿಸಿ, ಕೊನೆವರೆಗೂ ಔಟಾಗದೆ ಆಡಿದ ಜದ್ರಾನ್ ಅವರ ಸೊಗಸಾದ ಇನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್‌ಗಳಿದ್ದವು.

'ಅಫ್ಗಾನ್‌ ಪರ (ವಿಶ್ವಕಪ್‌ನಲ್ಲಿ) ಮೊದಲ ಶತಕ ಸಿಡಿಸಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಈ ಟೂರ್ನಿಗಾಗಿ ಕಠಿಣ ಶ್ರಮ ಹಾಕಿದ್ದೇನೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸುವ ಅವಕಾಶ ಸ್ವಲ್ಪದರಲ್ಲೇ ತಪ್ಪಿತ್ತು. ಆದರೆ, ಇಂದು ಅದನ್ನು ಸಾಧಿಸಿದ್ದೇನೆ. ನನ್ನ ಕೋಚಿಂಗ್ ಸಿಬ್ಬಂದಿಯೊಂದಿಗೆ ಮಾತನಾಡಿದ್ದೆ, ಮುಂದಿನ ಮೂರು ಪಂದ್ಯಗಳಲ್ಲಿಯೂ ಶತಕ ಗಳಿಸುವೆ ಎನಿಸುತ್ತಿದೆ ಎಂದಿದ್ದೆ' ಎಂದೂ ಹೇಳಿಕೊಂಡಿದ್ದಾರೆ.

ಸೋಮವಾರ (ನವೆಂಬರ್ 6ರಂದು) ಅಫ್ಗನ್‌ ಆಟಗಾರರನ್ನು ಭೇಟಿಯಾಗಿದ್ದ ಸಚಿನ್, ಹೆಚ್ಚುಹೊತ್ತು ಬ್ಯಾಟಿಂಗ್‌ ನಡೆಸುವುದು, ವಿಭಿನ್ನ ಹೊಡೆಗಳನ್ನು ಪ್ರಯೋಗಿಸುವುದು, ಗುರಿ ನಿಗದಿಪಡಿಸಿಕೊಂಡು ಆಡುವುದು ಸೇರಿದಂತೆ ಹಲವು ಸಲಹೆಗಳನ್ನು ನೀಡಿದ್ದರು.

ವಿಕೆಟ್‌ ಬೀಳದಿದ್ದರೆ, 300 ರನ್ ಗಳಿಸುತ್ತಿದ್ದೆವು
'ಇಲ್ಲಿನ ಪಿಚ್‌ ಬ್ಯಾಟಿಂಗ್‌ಗೆ ಅನುಕೂಲಕರವಾಗಿದೆ. ಉತ್ತಮ ಜೊತೆಯಾಟಗಳು ಬಂದಿದ್ದರೆ ಹಾಗೂ ವಿಕೆಟ್‌ಗಳು ಬೀಳದೆ ಇದ್ದಿದ್ದರೆ 300 ರನ್‌ ಗಳಿಸಬಹುದಿತ್ತು. ಆದರೆ, ಕೆಲವು ವಿಕೆಟ್‌ಗಳನ್ನು ಕಳೆದುಕೊಂಡೆವು. ಅಂದುಕೊಂಡಂತೆ ಜೊತೆಯಾಟಗಳು ಮೂಡಿಬರಲಿಲ್ಲ. ಆದರೆ, ಕೊನೆಯಲ್ಲಿ ರಶೀದ್‌ ತುಂಬಾ ಚೆನ್ನಾಗಿ ಆಡಿದರು' ಎಂದು ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.