ಪುಣೆ: ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರ ಭರ್ಜರಿ ಶತಕದ (ಅಜೇಯ 177) ನೆರವಿನಿಂದ ಆಸ್ಟ್ರೇಲಿಯಾ ತಂಡ ಶನಿವಾರ ನಡೆದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಬಗ್ಗುಬಡಿಯಿತು. ಆಸ್ಟ್ರೇಲಿಯಾ ಆ ಮೂಲಕ ಸೆಮಿಫೈನಲ್‌ಗೆ ಸೂಕ್ತ ರೀತಿಯಲ್ಲೇ ಸಜ್ಜಾಯಿತು.
ಗೆಲುವಿಗೆ 307 ರನ್‌ಗಳ ಗುರಿಯನ್ನು ಎದುರಿಸಿದ್ದ ಆಸ್ಟ್ರೇಲಿಯಾ ಇನ್ನೂ 32 ಎಸೆತಗಳು ಇರುವಂತೆ ಎರಡು ವಿಕೆಟ್ ನಷ್ಟದಲ್ಲಿ ಅದನ್ನು ಸಾಧಿಸಿತು. ಮಾರ್ಷ್ ಕೇವಲ 132 ಎಸೆತಗಳ ಇನಿಂಗ್ಸ್‌ನಲ್ಲಿ 9 ಭರ್ಜರಿ ಸಿಕ್ಸರ್, 17 ಬೌಂಡರಿಗಳನ್ನು ಬಾರಿಸಿದರು. ಅನುಭವಿಗಳಾದ ಡೇವಿಡ್ ವಾರ್ನರ್ (53) ಮತ್ತು ಸ್ಟೀವ್ ಸ್ಮಿತ್ (ಔಟಾಗದೇ 63) ಅವರೂ ಅರ್ಧ ಶತಕಗಳನ್ನು ಗಳಿಸಿದ್ದರಿಂದ ತಂಡದ ಗೆಲುವು ನಿರೀಕ್ಷೆಗಿಂತ ಸುಲಭವಾಯಿತು.
ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ನವೆಂಬರ್ 16ರಂದು ಕೋಲ್ಕತ್ತದಲ್ಲಿ ನಡೆಯುವ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಬಾಂಗ್ಲಾದೇಶ ಮತ್ತೊಂದು ಸೋಲಿನೊಡನೆ ಎಂಟನೇ ಸ್ಥಾನದಲ್ಲೇ ಲೀಗ್ ವ್ಯವಹಾರ ಪೂರೈಸಿತು. ಭಾರತ ತಂಡ ಭಾನುವಾರ ನಡೆಯುವ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಮಣಿಸಿದರೆ, ಬಾಂಗ್ಲಾದೇಶ ತಂಡ ಮುಂದಿನ ವರ್ಷದ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಅರ್ಹತೆ ಪಡೆಯಲಿದೆ.
ಅಮೋಘ ಲಯದಲ್ಲಿದ್ದ ಮಾರ್ಷ್ ಎದುರಾಳಿ ದಾಳಿಯನ್ನು ನಿರ್ದಯವಾಗಿ ದಂಡಿಸಿದರು. ಟ್ರಾವಿಸ್ ಹೆಡ್ (10) ಬೇಗನೇ ನಿರ್ಗಮಿಸಿದರೂ ವಾರ್ನರ್ (53, 61ಎ, 4x6) ಜೊತೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 120 ರನ್‌ಗಳು (116 ಎಸೆತ) ಹರಿದುಬಂದವು. ನಂತರ ಅನುಭವಿ ಸ್ಟೀವ್ ಸ್ಮಿತ್ (63, 64 ಎಸೆತ) ಜೊತೆ ಅವರು ಇನ್ನೂ ವೇಗವಾಗಿ ಆಡಿ 136 ಎಸೆತಗಳಲ್ಲಿ 175 ರನ್ ಸೇರಿಸಿದರು.
ಈ ವಿಶ್ವಕಪ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಗಳಿಸಿದ ಅಜೇಯ 201 ರನ್ ಬಿಟ್ಟರೆ, ಮಾರ್ಷ್ ಗಳಿಸಿದ ಅಜೇಯ 177 ಎರಡನೇ ಅತ್ಯಧಿಕ ಮೊತ್ತವೆನಿಸಿತು.
ಇದಕ್ಕೆ ಮೊದಲು, ತೌಹಿಕ್ ಹೃದಯ್ ಅವರ 74 (79 ಎಸೆತ) ರನ್‌ಗಳ ನೆರವಿನಿಂದ ಬಾಂಗ್ಲಾದೇಶ ತಂಡ ಟೂರ್ನಿಯಲ್ಲೇ ಮೊದಲ ಬಾರಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 8 ವಿಕೆಟ್‌ಗೆ 306 ರನ್ ಗಳಿಸಿ ಎದುರಾಳಿಗೆ ಪ್ರಬಲ ಸ್ಪರ್ಧಾತ್ಮಕ ಗುರಿ ನೀಡಿತು.
ಲಿಟ್ಟನ್ ದಾಸ್ (36) ಮತ್ತು ತಾಂಜಿದ್ ಹಸನ್ (36) ಅವರು ಆಕ್ರಮಣಕಾರಿಯಾಗಿದ್ದು 76 ರನ್ ಸೇರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆದರೆ ಇಬ್ಬರೂ ಅಲ್ಪಅಂತರದಲ್ಲಿ ನಿರ್ಗಮಿಸಿದರು. ಈ ವಿಶ್ವಕಪ್‌ನಲ್ಲಿ ಮೊದಲ ಪಂದ್ಯ ಆಡಿದ್ದ ವೇಗಿ ಸೀನ್ ಅಬೋಟ್ ಈ ಜೊತೆಯಾಟ ಮುರಿದಿದರು. ಆದರೆ ಇದರಿಂದ ಬಾಂಗ್ಲಾ ಆಟದ ಹುರುಪು ತಗ್ಗಲಿಲ್ಲ.
ನಜ್ಮುಲ್ ಹುಸೇನ್ ಶಾಂತೊ (45), ಮಹಮದುಲ್ಲಾ (32, 4x1, 6x3) ಕೂಡ ತಂಡ ಕುಸಿಯದಂತೆ ನೋಡಿಕೊಂಡರು. ತಂಡ 32ನೇ ಓವರಿನಲ್ಲೇ 200 ರನ್‌ಗಳ ಗಡಿದಾಟಿತ್ತು. ಎರಡು ವಿಕೆಟ್ ಪಡೆದ ಲೆಗ್‌ಸ್ಪಿನ್ನರ್ ಜಂಪಾ ಸ್ವಲ್ಪ ಕಡಿವಾಣ ಹಾಕಿದರು. ಆದರೆ ಕೊನೆಯ 10 ಓವರುಗಳಲ್ಲಿ 67 ರನ್‌ಗಳು ಬಂದವು. ಹೀಗಾಗಿ ನಿವ್ವಳ ರನ್ ದರ ಶ್ರೀಲಂಕಾ ತಂಡಕ್ಕಿಂತ ಕೆಳಗೆ ಹೋಗಲಿಲ್ಲ.
ಸ್ಕೋರುಗಳು:
ಬಾಂಗ್ಲಾದೇಶ: 50 ಓವರುಗಳಲ್ಲಿ 8 ವಿಕೆಟ್‌ಗೆ 306 (ತಾಂಜಿದ್ ಹಸನ್ 36, ಲಿಟ್ಟನ್ ದಾಸ್ 36, ನಜ್ಮುಲ್ ಹುಸೇನ್ ಶಾಂತೊ 45, ತೌಹಿದ್ ಹೃದಯ್ 74, ಮಹ್ಮದುಲ್ಲಾ 32, ಮೆಹದಿ ಹಸನ್ ಮಿರಾಜ್ 29; ಸೀನ್ ಅಬೋಟ್ 61ಕ್ಕೆ2, ಆ್ಯಡಂ ಜಂಪಾ 32ಕ್ಕೆ2);
ಆಸ್ಟ್ರೇಲಿಯಾ: 44.4 ಓವರುಗಳಲ್ಲಿ 2 ವಿಕೆಟ್‌ಗೆ 307 (ಡೇವಿಡ್ ವಾರ್ನರ್ 53, ಮಿಚೆಲ್ ಮಾರ್ಷ್ ಔಟಾಗದೇ 177, ಸ್ಟೀವ್ ಸ್ಮಿತ್ ಔಟಾಗದೇ 63)
ಪಂದ್ಯದ ಆಟಗಾರ: ಮಿಚೆಲ್ ಮಾರ್ಷ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.