ನವದೆಹಲಿ: ಅನುಭವಿ ಆಟಗಾರ ಏಂಜೆಲೊ ಮ್ಯಾಥ್ಯೂಸ್‌ಗೆ ‘ಟೈಮ್ ಔಟ್’ ಆಘಾತ ನೀಡಿದ ಬಾಂಗ್ಲಾದೇಶ ತಂಡವು ಶ್ರೀಲಂಕಾಗೆ ಸೋಲಿನ ಕಹಿಯನ್ನೂ ಉಣಿಸಿತು. ಇದರಿಂದಾಗಿ ಶ್ರೀಲಂಕಾ ಈ ಬಾರಿಯ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಾದಿಯಿಂದ ಹೊರಬಿತ್ತು.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ನಜ್ಮುಲ್ ಹುಸೇನ್ ಶಾಂತೊ (90; 101ಎ, 4X12) ಮತ್ತು ನಾಯಕ ಶಕೀಬ್ ಅಲ್ ಹಸನ್ (82; 65ಎ, 4X12, 6X2) ಅವರ 169 ರನ್‌ಗಳ ಜೊತೆಯಾಟದಿಂದ ಬಾಂಗ್ಲಾ ತಂಡವು 3 ವಿಕೆಟ್‌ಗಳ ಜಯ ಸಾಧಿಸಿತು. ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿತು. ಆದರೆ ತಂಡವು ಈಗಾಗಲೇ ನಾಲ್ಕರ ಘಟ್ಟದ ಪ್ರವೇಶ ಅವಕಾಶವನ್ನು ಕಳೆದುಕೊಂಡಿದೆ.
ದೆಹಲಿಯಲ್ಲಿ ಹೆಚ್ಚಿರುವ ವಾಯುಮಾಲಿನ್ಯದಿಂದಾಗಿ ಈ ಪಂದ್ಯ ನಡೆಯುವುದೇ ಅನುಮಾನವಾಗಿತ್ತು. ಆದರೆ ಮಧ್ಯಾಹ್ನ ವಾಯು ಗುಣಮಟ್ಟವು ಸುಧಾರಿಸಿದ್ದ ಕಾರಣ ಪಂದ್ಯ ನಡೆಸಲು ಅನುಮತಿ ನೀಡಲಾಯಿತು.
ಬಾಂಗ್ಲಾ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ತಂಡವು 72 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಏಕಾಂಗಿ ಹೋರಾಟ ಮಾಡಿದ ಚರಿತ ಅಸಲಂಕಾ (108; 105ಎ, 4X6, 6X5) ಶತಕದ ಬಲದಿಂದ ತಂಡವು 49.3 ಓವರ್‌ಗಳಲ್ಲಿ 279 ರನ್ ಗಳಿಸಿ ಆಲೌಟ್ ಆಯಿತು.
ಆರನೇ ಕ್ರಮಾಂಕದ, ಅನುಭವಿ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ‘ಟೈಮ್ಡ್ ಔಟ್’ ಆದರು. ಧನಂಜಯ ಡಿಸಿಲ್ವಾ (34; 36ಎ) ಮತ್ತು ತೀಕ್ಷಣ (22; 31ಎ) ಅವರು ಕಾಣಿಕೆ ನೀಡಿದರು.
ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡವು 41.1 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 282 ರನ್ ಗಳಿಸಿತು. ಶಾಂತೊ ಮತ್ತು ಶಕೀಬ್ ಅವರ ಬೀಸಾಟದಿಂದಾಗಿ ತಂಡವು ಗೆಲುವಿನತ್ತ ವಾಲಿತು. ಆದರೆ ಸುಲಭವಾಗಿ ಗೆಲ್ಲುವ ಅವಕಾಶವಿದ್ದರೂ ದೊಡ್ಡ ಹೊಡೆತಗಳಿಗೆ ಯತ್ನಿಸಿದ ಬಾಂಗ್ಲಾ ಬ್ಯಾಟರ್‌ಗಳು ವಿಕೆಟ್ ಕಳೆದುಕೊಂಡರು. ಶಾಂತೋ ಮತ್ತು ಶಕೀಬ್ ಕೂಡ ಇದೇ ಕಾರಣದಿಂದ ಶತಕ ಗಳಿಕೆ ತಪ್ಪಿಸಿಕೊಂಡರು.
ಶ್ರೀಲಂಕಾದ ಬೌಲರ್ ದಿಲ್ಶಾನ್ ಮಧುಶಂಕಾ ಮತ್ತು ಮಹೀಷ ತೀಕ್ಷಣ ಅವರು ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಗಳಿಸಿದರು. ಮ್ಯಾಥ್ಯೂಸ್ ಕೂಡ ಎರಡು ವಿಕೆಟ್ ಹಾಕಿದರು. ಕೊನೆಯ ಹಂತದಲ್ಲಿ ಬೌಲರ್‌ಗಳ ಪ್ರಯತ್ನ ಮಾಡಿದರಾದರೂ ಲಂಕಾ ತಂಡಕ್ಕೆ ಜಯಿಸಲು ಆಗಲಿಲ್ಲ.
ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 49.3 ಓವರ್‌ಗಳಲ್ಲಿ 279 (ಪಥುಮ್ ನಿಸಾಂಕ 41, ಸದಿರ ಸಮರವಿಕ್ರಮ 41, ಚರಿತ ಅಸಲಂಕಾ 108, ಧನಂಜಯ್ ಡಿಸಿಲ್ವಾ 34, ಮಹೀಷ ತೀಕ್ಷಣ 22, ಶೊರಿಫುಲ್ ಇಸ್ಲಾಮ್ 52ಕ್ಕೆ2, ತಂಜೀಮ್ ಹಸನ್ ಸಕೀಬ್ 80ಕ್ಕೆ3, ಶಕೀಬ್ ಅಲ್ ಹಸನ್ 57ಕ್ಕೆ2)
ಬಾಂಗ್ಲಾದೇಶ: 41.1 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 282 (ಲಿಟನ್ ದಾಸ್ 23, ನಜ್ಮುಲ್ ಹುಸೇನ್ ಶಾಂತೊ 90, ಶಕೀಬ್ ಅಲ್ ಹಸನ್ 82, ಮಹಮುದುಲ್ಲಾ 22, ದಿಲ್ಶಾನ್ ಮಧುಶಂಕಾ 69ಕ್ಕೆ3, ಮಹೀಷ ತೀಕ್ಷಣ 44ಕ್ಕೆ2, ಏಂಜೆಲೊ ಮ್ಯಾಥ್ಯೂಸ್ 39ಕ್ಕೆ2) ಫಲಿತಾಂಶ: ಬಾಂಗ್ಲಾದೇಶ ತಂಡಕ್ಕೆ 3 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಶಕೀಬ್ ಅಲ್ ಹಸನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.