ಪುಣೆ: ಸತತ ಐದು ಪಂದ್ಯಗಳಲ್ಲಿ ಸೋತಿದ್ದ ಇಂಗ್ಲೆಂಡ್ ತಂಡವು ಬುಧವಾರ ನೆದರ್ಲೆಂಡ್ಸ್ ವಿರುದ್ಧ ಜಯಿಸಿತು.
ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಈಗಾಗಲೇ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಾದಿಯಿಂದ ಹೊರಬಿದ್ದಿದೆ. ಆದರೆ ಮುಂಬರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ನೇರ ಅರ್ಹತೆಗಾಗಿ ಅಗ್ರ ಏಳರಲ್ಲಿ ಸ್ಥಾನ ಪಡೆಯುವುದೊಂದೇ ಈಗ ಇಂಗ್ಲೆಂಡ್ ಮುಂದಿರುವ ಗುರಿ.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಬೆನ್ ಸ್ಟೋಕ್ಸ್ (108; 84ಎಸೆತ, 4X6, 6X6) ಅಮೋಘ ಶತಕದ ಬಲದಿಂದ ಇಂಗ್ಲೆಂಡ್ ತಂಡವು 160 ರನ್‌ಗಳ ಅಂತರದಿಂದ ನೆದರ್ಲೆಂಡ್ಸ್‌ಗೆ ಸೋಲುಣಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿತು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಜೋಸ್ ಬಟ್ಲರ್ ಬಳಗವು ಪಾಕಿಸ್ತಾನವನ್ನು ಎದುರಿಸಲಿದೆ.
ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸ್ಟೋಕ್ಸ್ ಶತಕ, ಡೇವಿಡ್ ಮಲಾನ್ ಮತ್ತು ಕ್ರಿಸ್ ವೋಕ್ಸ್ ಅವರ ಅರ್ಧಶತಕಗಳ ಬಲದಿಂದ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 339 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡಚ್ ಬಳಗಕ್ಕೆ 37.2 ಓವರ್‌ಗಳಲ್ಲಿ 179 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಸ್ಪಿನ್ನರ್ ಮೋಯಿನ್ ಅಲಿ ಮತ್ತು ಆದಿಲ್ ರಶೀದ್ ಅವರು ತಲಾ ಮೂರು ವಿಕೆಟ್ ಗಳಿಸಿದರು.
ಸ್ಟೋಕ್ಸ್ ಆಟ: ಟೂರ್ನಿಯಲ್ಲಿ ವೈಫಲ್ಯಗಳನ್ನು ಕಂಡಿರುವ ಇಂಗ್ಲೆಂಡ್ ತಂಡದ ಆಟಗಾರ ಬೆನ್ ಸ್ಟೋಕ್ಸ್ ಅವರು ಡೇವಿಡ್ ಮಲಾನ್ ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 85 ರನ್ ಗಳಿಸಿದರು. ಆದರೂ ತಂಡವು 192 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿತ್ತು.
ಆಗ ಕ್ರೀಸ್‌ನಲ್ಲಿದ್ದ ಸ್ಟೋಕ್ಸ್ ಜೊತೆಗೆ ಸೇರಿಕೊಂಡ ಕ್ರಿಸ್ ವೋಕ್ಸ್ (51; 45ಎ, 4X5, 6X1) ಏಳನೇ ವಿಕೆಟ್ ಜೊತೆಯಾಟದಲ್ಲಿ 129 ರನ್ ಸೇರಿಸಿದರು. ಇದರಿಂದಾಗಿ ತಂಡವು 300 ರನ್‌ಗಳ ಗಡಿ ದಾಟಿತು.
ಸಂಕ್ಷಿಪ್ತ ಸ್ಕೋರು
ಇಂಗ್ಲೆಂಡ್: 50 ಓವರ್‌ಗಳಲ್ಲಿ 9ಕ್ಕೆ339 (ಡೇವಿಡ್ ಮಲಾನ್ 87, ಜೋ ರೂಟ್ 28, ಬೆನ್ ಸ್ಟೋಕ್ಸ್ 108, ಕ್ರಿಸ್ ವೋಕ್ಸ್ 51, ಆರ್ಯನ್ ದತ್ 67ಕ್ಕೆ2, ವ್ಯಾನ್ ಬೀಕ್ 88ಕ್ಕೆ2, ಬೆಸ್ ಡಿ ಲೀಡ್ 74ಕ್ಕೆ3)
ನೆದರ್ಲೆಂಡ್ಸ್: 37.2 ಓವರ್‌ಗಳಲ್ಲಿ 179 (ವೆಸ್ಲಿ ಬೆರಿಸಿ 37, ಸೈಬ್ರ್ಯಾಂಡ್ ಏಂಜೆಲ್‌ಬ್ರೆಚ್ಟ್ 33, ಸ್ಕಾಟ್ ಎಡ್ವರ್ಡ್ಸ್ 38, ತೇಜ ನಿಡಮಾನೂರು ಔಟಾಗದೆ 41, ಡೇವಿಡ್ ವಿಲಿ 19ಕ್ಕೆ2, ಮೋಯಿನ್ ಅಲಿ 42ಕ್ಕೆ3, ಆದಿಲ್ ರಶೀದ್ 54ಕ್ಕೆ3)
ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 160 ರನ್‌ಗಳ ಜಯ. ಫಲಿತಾಂಶ: ಬೆನ್ ಸ್ಟೋಕ್ಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.