ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಸುತ್ತಿಗೆ ಮೊದಲೆರಡು ತಂಡಗಳಾಗಿ ಲಗ್ಗೆ ಇಟ್ಟಿವೆ. ಉಳಿದ ಎರಡು ಸ್ಥಾನಗಳಿಗಾಗಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ನಿಕಟ ಪೈಪೋಟಿ ನಡೆಸುತ್ತಿವೆ. 'ಕ್ರಿಕೆಟ್ ಶಿಶು' ನೆದರ್ಲೆಂಡ್ಸ್ ಸಹ ರೇಸ್‌ನಲ್ಲಿದೆಯಾದರೂ, ಸಾಧ್ಯತೆ ತೀರಾ ಕಡಿಮೆ.
ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ 7 ಮತ್ತು 8ನೇ ಸ್ಥಾನದಲ್ಲಿರುವ ಬಾಂಗ್ಲಾದೇಶ, ಶ್ರೀಲಂಕಾ ಜೊತೆಗೆ ಕೊನೇ ಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್, ಈಗಾಗಲೇ ಟೂರ್ನಿಯಿಂದ ನಿರ್ಗಮಿಸಿವೆ. ಆದರೆ, ಈ ತಂಡಗಳು ಉಳಿದ ತಂಡಗಳ ಭವಿಷ್ಯವನ್ನು ನಿರ್ಧರಿಸಬಲ್ಲವು.
ಅದೃಷ್ಟ ಯಾರಿಗೆ?
ರೌಂಡ್ ರಾಬಿನ್ ಮಾದರಿಯ ಸೆಣಸಾಟದಲ್ಲಿ ಪ್ರತಿ ತಂಡಗಳು ತಲಾ 9 ಪಂದ್ಯಗಳಲ್ಲಿ ಕಣಕ್ಕಿಳಿಯಲಿವೆ. ಆಡಿರುವ ಎಂಟೂ ಪಂದ್ಯಗಳಲ್ಲಿ ಗೆದ್ದಿರುವ ಭಾರತ ಹಾಗೂ ಎಂಟರ ಪೈಕಿ ಎರಡರಲ್ಲಿ ಸೋತು ಆರರಲ್ಲಿ ಜಯಿಸಿರುವ ದಕ್ಷಿಣ ಆಫ್ರಿಕಾ ಸೆಮಿಗೆ ಅರ್ಹತೆ ಗಿಟ್ಟಿಸಿವೆ.
ಭಾರತ 16 ಪಾಯಿಂಟ್ ಹಾಗೂ +2.456 ನೆಟ್ ರನ್‌ರೇಟ್ ಹೊಂದಿದೆ. ಹೀಗಾಗಿ ಉಳಿದ ಪಂದ್ಯಗಳ ಫಲಿತಾಂಶ ಏನೇ ಆದರೂ, ಮೊದಲ ಸ್ಥಾನದಲ್ಲೇ ಉಳಿಯಲಿದೆ. ದಕ್ಷಿಣ ಆಫ್ರಿಕಾ 12 ಪಾಯಿಂಟ್ ಮತ್ತು +1.376 ರನ್ ರೇಟ್ ಹೊಂದಿದ್ದು, ಉಳಿದಿರುವ ಒಂದು ಪಂದ್ಯದಲ್ಲಿ ಸೋತರೆ ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆ ಇದೆ.
ಪಾಕ್, ಕಿವೀಸ್‌ಗಿಂತ ತುಸು ಮುಂದಿದೆ ಆಸ್ಟ್ರೇಲಿಯಾ
ಉಳಿದೆರಡು ಸ್ಥಾನಗಳಿಗಾಗಿ ಐದು ತಂಡಗಳು ನಡೆಸುತ್ತಿರುವ ಪೈಪೋಟಿಯಲ್ಲಿ ಆಸ್ಟ್ರೇಲಿಯಾ ತುಸು ಮುಂದಿದೆ. ಏಳು ಪಂದ್ಯಗಳಲ್ಲಿ ಆಡಿರುವ ಈ ತಂಡ 5ರಲ್ಲಿ ಗೆದ್ದು 10 ಪಾಯಿಂಟ್ ಹಾಗೂ +0.924 ರನ್ ರೇಟ್‌ನೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಎರಡರಲ್ಲಿ ಸೋತಿದ್ದರೂ, ನಾಲ್ಕರ ಘಟ್ಟಕ್ಕೆ ತಲುಪಲು ಇನ್ನೂ ಎರಡು ಅವಕಾಶಗಳಿವೆ. ಇಂದು (ನವೆಂಬರ್ 7) ಅಫ್ಗಾನಿಸ್ತಾನ ಮತ್ತು ನವೆಂಬರ್ 11ರಂದು ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಒಂದು ಪಂದ್ಯದಲ್ಲಿ ಸೋತರೂ, ಉಳಿದ ಪಂದ್ಯಗಳ ಫಲಿತಾಂಶಗಳು ಕಾಂಗರೂಗಳ ಭವಿಷ್ಯ ನಿರ್ಧರಿಸಲಿವೆ.
ಪಟ್ಟಿಯಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್, ಪಾಕಿಸ್ತಾನ ತಲಾ ನಾಲ್ಕರಲ್ಲಿ ಗೆದ್ದು, 8 ಪಾಯಿಂಟ್‌ಗಳನ್ನು ಹೊಂದಿವೆ. ಕಿವೀಸ್ (+0.398) ತಂಡ ರನ್‌ರೇಟ್ ಆಧಾರದಲ್ಲಿ ಪಾಕ್ (+0.036) ಪಡೆಗಿಂತ ಉತ್ತಮ ಸ್ಥಿತಿಯಲ್ಲಿದೆ.
ನ್ಯೂಜಿಲೆಂಡ್ ತನ್ನ ಮುಂದಿನ ಪಂದ್ಯದಲ್ಲಿ ನವೆಂಬರ್ 9ರಂದು ಶ್ರೀಲಂಕಾ ಸವಾಲು ಎದುರಿಸಲಿದೆ. ಪಾಕಿಸ್ತಾನಕ್ಕೆ ನವೆಂಬರ್ 11ರಂದು ಇಂಗ್ಲೆಂಡ್ ಸವಾಲೊಡ್ಡಲಿದೆ. ಉಭಯ ತಂಡಗಳು ಮುಂದಿನ ಹೋರಾಟಗಳಲ್ಲಿ ಗೆದ್ದರಷ್ಟೇ ಸಾಲದು, ಉಳಿದ ಪಂದ್ಯಗಳ ಫಲಿತಾಂಶಗಳೂ ಮುಖ್ಯವಾಗಲಿವೆ.
ಅಫ್ಗಾನಿಸ್ತಾನಕ್ಕೆ ಗೆಲುವೊಂದೇ ದಾರಿ
ಆಡಿರುವ 7 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಮೂರರಲ್ಲಿ ಸೋತಿರುವ ಅಫ್ಗಾನಿಸ್ತಾನ ಪಾಯಿಂಟ್ ಪಟ್ಟಿಯಲ್ಲಿ 8 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಋಣಾತ್ಮಕ ರನ್‌ರೇಟ್ (-0.330) ಹೊಂದಿರುವುದರಿಂದ ಗೆದ್ದರಷ್ಟೇ ಮುಂದಿನ ಹಂತಕ್ಕೇರಲು ಸಾಧ್ಯ. ಹೀಗಾಗಿ, ಇಂದು (ನವೆಂಬರ್ 7) ಆಸ್ಟ್ರೇಲಿಯಾ ವಿರುದ್ಧ ಮತ್ತು ನವೆಂಬರ್ 10ರಂದು ದಕ್ಷಿಣ ಆಫ್ರಿಕಾ ಎದುರು ಗೆಲುವಿಗಾಗಿ ಕಾದಾಡುವುದೊಂದೇ ಈ ತಂಡಕ್ಕಿರುವ ದಾರಿ.
ಒಂದು ವೇಳೆ ಈ ತಂಡ ಎರಡೂ ಪಂದ್ಯಗಳಲ್ಲಿ ಗೆದ್ದರೆ, ಉಳಿದ ತಂಡಗಳ ಫಲಿತಾಂಶ ಏನೇ ಆದರೂ ನೇರವಾಗಿ ಸೆಮಿ ಟಿಕೆಟ್ ಗಿಟ್ಟಿಸಿಕೊಳ್ಳಲಿದೆ. ಒಂದರಲ್ಲಿ ಸೋತರೂ, ಉಳಿದ ಮೂರು (ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ) ತಂಡಗಳಲ್ಲಿ ಎರಡು 10ಕ್ಕಿಂತ ಹೆಚ್ಚು ಅಂಕ ಗಳಿಸದಂತೆ ಹಾಗೂ ತಮಗಿಂತ ಉತ್ತಮ ರನ್‌ರೇಟ್ ಹೊಂದದಂತೆ ಪ್ರಾರ್ಥಿಸಬೇಕಷ್ಟೇ.
ನೆದರ್ಲೆಂಡ್ಸ್‌ಗಾಗಿ ನಡೆಯುತ್ತಾ ಪವಾಡ!
ಬಲಿಷ್ಠ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳಿಗೆ ಅಚ್ಚರಿಯ ಸೋಲುಣಿಸಿರುವ ನೆದರ್ಲೆಂಡ್ಸ್ ಸೆಮಿಗೆ ತಲುಪಬೇಕಾದರೆ ಪವಾಡವೇ ನಡೆಯಬೇಕು. ಈ ತಂಡ ಆಡಿರುವ 7 ಪಂದ್ಯಗಳಿಂದ 4 ಅಂಕ ಸಂಪಾದಿಸಿ -1.398 ರನ್‌ರೇಟ್‌ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಗೆಲ್ಲುವುದಷ್ಟೇ ಅಲ್ಲದೆ, ಉಳಿದ ಪಂದ್ಯಗಳ ಫಲಿತಾಂಶಗಳೂ ತಮಗೆ ಪೂರಕವಾಗಿ ಇರುವಂತೆ ಪ್ರಾರ್ಥಿಸಬೇಕಿದೆ.
ಈ ತಂಡ ನಾಲ್ಕರ ಘಟಕ್ಕೇರಲು ಉಳಿದಿರುವ ಎರಡು ಪಂದ್ಯಗಳಲ್ಲೂ (ನವೆಂಬರ್ 08ರಂದು ಇಂಗ್ಲೆಂಡ್ ಎದುರು, ನವೆಂಬರ್ 12ರಂದು ಭಾರತ ವಿರುದ್ಧ) ಗೆಲ್ಲಬೇಕು. ಅಷ್ಟಲ್ಲದೆ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ತಂಡಗಳು ಮುಂದಿನ ಪಂದ್ಯಗಳಲ್ಲಿ ತಮ್ಮ ಎದುರಾಳಿಗಳಿಗೆ ಭಾರಿ ಅಂತರದಲ್ಲಿ ಮಣಿದು, ಅತ್ಯಂತ ಕಳಪೆ ರನ್‌ರೇಟ್‌ಗೆ ಕುಸಿಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.