ಚೆನ್ನೈ: ಚೆಪಾಕ್ ಕ್ರೀಡಾಂಗಣದಲ್ಲಿ ಭಾನುವಾರ ಆಸ್ಟ್ರೇಲಿಯಾದ ಫೀಲ್ಡರ್ ಮಿಚೆಲ್ ಮಾರ್ಷ್ ಕ್ಯಾಚ್ ಕೈಚೆಲ್ಲುವ ಮೂಲಕ ಪಂದ್ಯ ಜಯಿಸುವ ಅವಕಾಶವನ್ನೂ ಮಣ್ಣುಪಾಲು ಮಾಡಿದರು!
ಹೌದು; ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಮಾರ್ಷ್ ಅವರು ಕೈಬಿಟ್ಟಿದ್ದು ಭಾರತದ ವಿರಾಟ್ ಕೊಹ್ಲಿ ಅವರದ್ದು. ಆ ಹೊತ್ತಿನಲ್ಲಿ ಭಾರತ ತಂಡವು 200 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿತ್ತು ಹಾಗೂ 7.3 ಓವರ್‌ಗಳಲ್ಲಿ 20 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಆದರೆ ಮಾರ್ಷ್ ಕೊಟ್ಟ ಜೀವದಾನ ಪಡೆದ ವಿರಾಟ್ ಮತ್ತು ಕೆ.ಎಲ್. ರಾಹುಲ್ ಜೊತೆಗೂಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. 6 ವಿಕೆಟ್‌ಗಳಿಂದ ಗೆದ್ದ ಭಾರತ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 49.3 ಓವರ್‌ಗಳಲ್ಲಿ 199 ರನ್ ಗಳಿಸಿತು. ತಂಡವನ್ನು ಈ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದು ಭಾರತದ ಎಡಗೈ ಸ್ಪಿನ್ ಜೋಡಿ ರವೀಂದ್ರ ಜಡೇಜ (28ಕ್ಕೆ3) ಮತ್ತು ಕುಲದೀಪ್ ಯಾದವ್ (42ಕ್ಕೆ2) ಅವರು.
ಆದರೆ ಈ ಗುರಿ ಬೆನ್ನಟ್ಟಿದ ಆತಿಥೇಯ ಭಾರತ ಆರಂಭದಲ್ಲಿಯೇ ದೊಡ್ಡ ಆಘಾತ ಅನುಭವಿಸಿತು. ಎರಡು ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಇಬ್ಬರೂ ಖಾತೆ ತೆರೆಯದೇ ನಿರ್ಗಮಿಸಿದರು. ಮಿಚೆಲ್ ಸ್ಟಾರ್ಕ್ ಹಾಕಿದ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಕಿಶನ್ ಅವರು ಕ್ಯಾಮರಾನ್ ಗ್ರೀನ್‌ಗೆ ಕ್ಯಾಚಿತ್ತರು. ಜೋಷ್ ಹ್ಯಾಜಲ್‌ವುಡ್ ಹಾಕಿದ ಎರಡನೇ ಓವರ್‌ನಲ್ಲಿ ರೋಹಿತ್ ಅವರು ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಶ್ರೇಯಸ್ ಅಯ್ಯರ್, ಫೀಲ್ಡರ್ ಡೇವಿಡ್ ವಾರ್ನರ್‌ಗೆ ಸುಲಭ ಕ್ಯಾಚ್ ಕೊಟ್ಟು ಸೊನ್ನೆ ಸುತ್ತಿದರು. ಆಗ ಕ್ರೀಸ್‌ನಲ್ಲಿ ವಿರಾಟ್ ಇದ್ದರು.
ಅವರೊಂದಿಗೆ ಸೇರಿದ ಕನ್ನಡಿಗ ರಾಹುಲ್ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದರು. ಕೊಹ್ಲಿಗೆ ಸಿಕ್ಕ ಜೀವದಾನದಿಂದ ಇಬ್ಬರೂ ಸೇರಿ ನಾಲ್ಕನೇ ವಿಕೆಟ್ ಜೊತೆಯಟದಲ್ಲಿ 165 ರನ್ ಸೇರಿಸಿದರು. ಶತಕದತ್ತ ಹೆಜ್ಜೆ ಇಟ್ಟಿದ ಕೊಹ್ಲಿ 36ನೇ ಓವರ್‌ನಲ್ಲಿ ಹ್ಯಾಜಲ್‌ವುಡ್ ಎಸೆತವನ್ನು ಆಡಲು ಸ್ವಲ್ಪ ಗಡಿಬಿಡಿ ಮಾಡಿ ದಂಡ ತೆತ್ತರು.
ರಾಹುಲ್ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಒಂದು ಸಿಕ್ಸರ್ ಹೊಡೆದರು. ಇನ್ನೊಂದೆಡೆ ರಾಹುಲ್ ಕೂಡ ತಾಳ್ಮೆಯ ಕವಚ ಕಳಚಿಟ್ಟು ಬ್ಯಾಟ್ ಬೀಸಿದರು. ಪ್ಯಾಟ್ ಕಮಿನ್ಸ್ ಹಾಕಿದ 42ನೇ ಓವರ್‌ನಲ್ಲಿ ವಿಜಯದ ಸಿಕ್ಸರ್ ಹೊಡೆದರು.
ಕುಸಿದ ಆಸ್ಟ್ರೇಲಿಯಾ: ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ 3ನೇ ಓವರ್‌ನಲ್ಲಿಯೇ ಮಿಚೆಲ್ ಮಾರ್ಷ್ ವಿಕೆಟ್ ಗಳಿಸಿದ ಜಸ್‌ಪ್ರೀತ್ ಬೂಮ್ರಾ ಆಘಾತ ನೀಡಿದರು. ಈ ಹಂತದಲ್ಲಿ ಅನುಭವಿಗಳಾದ ಡೇವಿಡ್ ವಾರ್ನರ್ (41; 52ಎ) ಮತ್ತು ಸ್ಟೀವ್ ಸ್ಮಿತ್ (46 ರನ್) ಅವರು ಸ್ವಲ್ಪ ಚೇತರಿಕೆ ನೀಡಿದರು. ವಾರ್ನರ್ ವಿಕೆಟ್ ಗಳಿಸಿದ ಕುಲದೀಪ್ ಈ ಜೊತೆಯಾಟ ಮುರಿದರು. ಇನ್ನೊಂದು ಬದಿಯಿಂದ ಜಡೇಜ ದಾಳಿಯೂ ಕಳೆಗಟ್ಟಿತು. ಆರ್. ಅಶ್ವಿನ್ ಕೂಡ ಕಣಕ್ಕಿಳಿದರು. ಕ್ಯಾಮರಾನ್ ಗ್ರೀನ್ ಅವರ ವಿಕೆಟ್ ಕಬಳಿಸಿದರು. ಸ್ಟಾರ್ಕ್ 35 ಎಸೆತಗಳಲ್ಲಿ 28 ರನ್ ಗಳಿಸಿ ತಂಡದ ಮೊತ್ತ ಸ್ವಲ್ಪ ಹೆಚ್ಚಿಸಿದರು. ಈ ಹಂತದಲ್ಲಿ ಭಾರತದ ಫೀಲ್ಡರ್‌ಗಳೂ ಕೂಡ ಪ್ಯಾಟ್ ಕಮಿನ್ಸ್ ಅವರ ಎರಡು ಕ್ಯಾಚ್ ಮತ್ತು ಆ್ಯಡಂ ಜಂಪಾ ಅವರ ಒಂದು ಕ್ಯಾಚ್ ಕೈಚೆಲ್ಲಿದರು.
ಬಿಗಿಭದ್ರತೆ ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿದ ಜಾರ್ವೊ!
ಸಾಮಾಜಿಕ ಜಾಲತಾಣದ ‘ಕುಖ್ಯಾತ‘ ಇನ್‌ಫ್ಲುಯೆನ್ಸರ್ ಡೇನಿಯಲ್ ಜಾರ್ವಿಸ್ (ಜಾರ್ವೊ) ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ವೇಳೆ ಮೈದಾನದೊಳಗೆ ಅಕ್ರಮ ಪ್ರವೇಶ ಮಾಡಿ ಗೊಂದಲ ಮೂಡಿಸಿದರು.
ಭಾರತ ತಂಡವನ್ನು ಬೆಂಬಲಿಸುವ ನೀಲಿ ಪೋಷಾಕು ತೊಟ್ಟಿದ್ದ ಜಾರ್ವೊ ಎಂ.ಎ. ಚಿದಂಬರಂ ಕ್ರೀಡಾಂಗಣ ಪ್ರವೇಶಿಸಿದರು. ಪಂದ್ಯ ಆರಂಭವಾಗಲು ಕೆಲವು ನಿಮಿಷಗಳಿದ್ದಾಗ ಪಿಚ್‌ನತ್ತ ಸಾಗಲು ಲೈನ್ ಅಪ್ ಮಾಡಿದ್ದ ಭಾರತ ತಂಡದ ಆಟಗಾರರ ಸಾಲಿನಲ್ಲಿ ಜಾರ್ವೊ ಸೇರಿಕೊಂಡ. ವಿರಾಟ್ ಕೊಹ್ಲಿ ಅವರಿಗೆ ನಿಕಟವಾಗಿ ನಿಲ್ಲುವ ಪ್ರಯತ್ನ ನಡೆಸಿದ್ದನ್ನು ತಂಡದ ಭದ್ರತಾ ಅಧಿಕಾರಿ ಗಮನಿಸಿದರು. ಕೂಡಲೇ ಧಾವಿಸಿ ಜಾರ್ವೊನನ್ನು ಹೊರಹೋಗುವಂತೆ ಎಚ್ವರಿಸಿದರು.
ಆಗ ಘಟನೆಯನ್ನು ಅರಿತ ವಿರಾಟ್ ಕ್ಷಣಕಾಲ ಅವಾಕ್ಕಾಗಿ ನಿಂತರು. ನಂತರ ಜಾರ್ವೊನನ್ನು ಕ್ರೀಡಾಂಗಣದಿಂದ ಹೊರಹಾಕಲಾಯಿತು.
ಬಿಗಿಭದ್ರತೆಯನ್ನು ದಾಟಿ ಅತಿ ಗಣ್ಯರ ಸ್ಥಳಕ್ಕೆ ಜಾರ್ವೊ ಪ್ರವೇಶಿಸಿದ್ದು ಅಚ್ಚರಿ ಮೂಡಿಸಿದೆ. ಇದು ಐಸಿಸಿ ಮತ್ತು ಬಿಸಿಸಿಐಗೆ ಮುಜುಗರವನ್ನೂ ಉಂಟುಮಾಡಿದೆ.
ಈ ಟೂರ್ನಿಯ ಉಳಿದೆಲ್ಲ ಪಂದ್ಯಗಳ ಪ್ರವೇಶದಿಂದ ಜಾರ್ವೊನನ್ನು ನಿರ್ಬಂಧಿಸಲಾಗಿದೆ. ಇಂಗ್ಲೆಂಡ್ ದೇಶದ ಜಾರ್ವೊ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ. ಇಂಗ್ಲೆಂಡ್‌ನಲ್ಲಿ ನಾಲ್ಕು ಬಾರಿ ಭದ್ರತೆಯನ್ನು ಉಲ್ಲಂಘಿಸಿದ್ದರು.
ದಾಖಲೆಗಳು...
* ಡೇವಿಡ್ ವಾರ್ನರ್ ಏಕದಿನ ವಿಶ್ವಕಪ್‌ನಲ್ಲಿ ಅತಿವೇಗದಲ್ಲಿ (19 ಇನಿಂಗ್ಸ್) 1,000 ರನ್ ಪೂರೈಸಿದರು. ಸಚಿನ್ ಮತ್ತು ಡಿವಿಲಿಯರ್ಸ್ (20 ಇನಿಂಗ್ಸ್) ಅವರ ದಾಖಲೆ ಮುರಿದರು.
* ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಅತ್ಯಧಿಕ ಕ್ಯಾಚ್ (16) ಪಡೆದ ಆಟಗಾರ ಎನಿಸಿಕೊಂಡರು. ಅನಿಲ್ ಕುಂಬ್ಳೆ (14 ಕ್ಯಾಚ್) ಅವರನ್ನು ಹಿಂದಿಕ್ಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.