ಲಖನೌ: ತಮ್ಮ ಎಂದಿನ ಬೀಸಾಟವನ್ನು ಕೈಬಿಟ್ಟು ತಾಳ್ಮೆಯೇ ಮೂರ್ತಿವೆತ್ತಂತೆ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇದರೊಂದಿಗೆ ತಂಡದ ಸೆಮಿಫೈನಲ್ ಪ್ರವೇಶವೂ ಬಹುತೇಕ ಖಚಿತವಾಯಿತು.
ಏಕನಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು 100 ರನ್‌ಗಳಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಪರಾಭವಗೊಳಿಸಿತು.
229 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡವನ್ನು 129 ರನ್‌ಗಳಿಗೆ ಕಟ್ಟಿಹಾಕಿದ ಶ್ರೇಯ ಜಸ್‌ಪ್ರೀತ್ ಬೂಮ್ರಾ (32ಕ್ಕೆ3) ಮತ್ತು ಮೊಹಮ್ಮದ್ ಶಮಿ (22ಕ್ಕೆ4) ಸಂದಿತು. ಇದರಿಂದಾಗಿ ರೋಹಿತ್ (87; 101ಎಸೆತ, 4X10, 6X3) ಜವಾಬ್ದಾರಿಯುತ ಆಟವೂ ವ್ಯರ್ಥವಾಗಲಿಲ್ಲ.
ಭಾರತವು ಟೂರ್ನಿಯಲ್ಲಿ ಇದುವರೆಗೆ ಆಡಿದ ಆರು ಪಂದ್ಯಗಳಲ್ಲಿಯೂ ಜಯಿಸಿದೆ. ಆದರೆ ಇಂಗ್ಲೆಂಡ್‌ಗೆ ಇದು ಐದನೇ ಸೋಲಾಗಿದ್ದು, ನಾಲ್ಕರ ಘಟ್ಟಕ್ಕೆ ಪ್ರವೇಶಿಸುವ ಆಸೆಯೂ ಕಮರಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್‌ಗಳು ಉತ್ತಮವಾಗಿ ಆಡಿದರು. ಆದರೆ ಬ್ಯಾಟರ್‌ಗಳು ನೆಲಕಚ್ಚಿದರು.
ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 40 ರನ್‌ಗಳಿಗೇ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತು. ಅಮೋಘ ಲಯದಲ್ಲಿರುವ ವಿರಾಟ್ ಕೊಹ್ಲಿ ಸೊನ್ನೆ ಸುತ್ತಿದಾಗಲಂತೂ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳ ಮುಖಗಳಲ್ಲಿ ದುಗುಡ ಮೂಡಿತ್ತು. ಭಾರತ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಾಗಿತ್ತು.
ಆದರೆ ರೋಹಿತ್ ಶರ್ಮಾ ತಂಡದ ಗೌರವ ಕಾಪಾಡಿದ್ದಲ್ಲದೇ ಗೆಲುವಿಗೂ ಕಾರಣರಾದರು. 101 ಎಸೆತಗಳಲ್ಲಿ 87 ರನ್ ಗಳಿಸಿದ ಅವರ ಆಟದಿಂದ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 229 ರನ್ ಗಳಿಸಿತು. ಬೌಲರ್‌ಗಳಿಗೇ ಹೆಚ್ಚು ನೆರವು ನೀಡಿದ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಲು ತಾಳ್ಮೆ ಮತ್ತು ಚಾಣಾಕ್ಷತೆಯ ಅಗತ್ಯವಿತ್ತು. ಆ ಪರೀಕ್ಷೆಯಲ್ಲಿ ರೋಹಿತ್ ಉತ್ತೀರ್ಣರಾದರು. ರೋಹಿತ್ ಜೊತೆಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 91 ರನ್ ಸೇರಿಸಲು ಕಾರಣರಾದ ಕೆ.ಎಲ್. ರಾಹುಲ್ (39; 58ಎ, 4X3) ಅವರ ಆಟವೂ ಮಹತ್ವದ್ದು.
ಬಿಗಿದು ಕಟ್ಟಿದ ತಂತಿಯ ಮೇಲಿನ ನಡಿಗೆಯಿಂತಿದ್ದ ಇನಿಂಗ್ಸ್‌ನಲ್ಲಿ ರೋಹಿತ್ ಮತ್ತು ರಾಹುಲ್ ಒಂದೊಂದೇ ರನ್ ಗಳಿಸಿದರು. ಅವಕಾಶ ಸಿಕ್ಕಾಗ ಬೌಂಡರಿ ಹೊಡೆದರು. ರನ್ ಗಳಿಕೆಯ ವೇಗ ಹೆಚ್ಚಿಸುವ ಭರದಲ್ಲಿ ರಾಹುಲ್ ಅವರು 31ನೇ ಓವರ್ ಹಾಕಿದ ಡೇವಿಡ್ ವಿಲ್ಲಿ ಎಸೆತವನ್ನು ಸಿಕ್ಸರ್‌ಗೆ ಎತ್ತುವ ಪ್ರಯತ್ನ ಮಾಡಿದರು. ಆದರೆ ಫೀಲ್ಡರ್ ಜಾನಿ ಬೆಸ್ಟೊ ಕ್ಯಾಚ್ ಪಡೆದರು. ಜೊತೆಯಾಟ ಮುರಿದು ಬಿತ್ತು.
ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ಅವರು ರೋಹಿತ್ ಜೊತೆಗೆ ಇನಿಂಗ್ಸ್ ಕಟ್ಟಲು ಕೈಜೋಡಿಸಿದರು. ಕಳೆದ ಕೆಲವು ಪಂದ್ಯಗಳಲ್ಲಿ ಲಯ ಕಂಡುಕೊಳ್ಳಲು ವಿಫಲರಾಗಿದ್ದ ಸೂರ್ಯ ಈ ಪಂದ್ಯದಲ್ಲಿ ಉಪಯುಕ್ತ ಆಟವಾಡಿದರು. ರೋಹಿತ್ ಜೊತೆಗೆ ಐದನೇ ವಿಕೆಟ್ ಜೊತೆಯಾಟದಲ್ಲಿ 33 ರನ್‌ಗಳು ಸೇರಿದ್ದವು. ಈ ಹಂತದಲ್ಲಿ ರೋಹಿತ್ ವಿಕೆಟ್ ಗಳಿಸುವಲ್ಲಿ ಸ್ಪಿನ್ನರ್ ಆದಿಲ್ ರಶೀದ್ ಯಶಸ್ವಿಯಾದರು.
ಸೂರ್ಯ ಒಂದು ರನ್ ಅಂತರದಿಂದ ತಮ್ಮ ಅರ್ಧಶತಕ ತಪ್ಪಿಸಿಕೊಂಡರೂ ತಂಡವು 200 ರನ್‌ಗಳ ಗಡಿಯನ್ನು ದಾಟುವಂತೆ ನೋಡಿಕೊಂಡರು.
ಬೂಮ್ರಾ–ಶಮಿ ಜೊತೆಯಾಟ: ಭಾರತದ ವೇಗದ ಜೋಡಿ ಬೂಮ್ರಾ ಮತ್ತು ಶಮಿ ಅವರ ಬೌಲಿಂಗ್ ಜೊತೆಯಾಟವೂ ರಂಗೇರಿತು. ಇಂಗ್ಲೆಂಡ್‌ಗೆ ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದ ಜಾನಿ ಬೆಸ್ಟೊ ಮತ್ತು ಡೇವಿಡ್ ಮಲಾನ್ ಜೊತೆಯಾಟವನ್ನು ಬೂಮ್ರಾ ಮುರಿದರು. ಈ ಜೋಡಿಯು 27 ಎಸೆತಗಳಲ್ಲಿ 30 ರನ್ ಸೇರಿಸಿತ್ತು. ಆದರೆ ಬೂಮ್ರಾ ಹಾಕಿದ ಐದನೇ ಓವರ್‌ನಲ್ಲಿ ಮಲಾನ್ ಕ್ಲೀನ್‌ಬೌಲ್ಡ್ ಆದರು. ಜೋ ರೂಟ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.
ಎಂಟನೇ ಓವರ್‌ನಲ್ಲಿ ಶಮಿ ಎಸೆತದಲ್ಲಿ ಬೆನ್ ಸ್ಟೋಕ್ಸ್ ಕ್ಲೀನ್‌ಬೌಲ್ಡ್ ಆದರು. 10 ಎಸೆತ ಎದುರಿಸಿದ ಸ್ಟೋಕ್ಸ್ ಸೊನ್ನೆ ಸುತ್ತಿದರು. ನಂತರದ ಹಂತದಲ್ಲಿ ಶಮಿ ಮತ್ತು ಬೂಮ್ರಾ ಅವರದ್ದೇ ಮೇಲುಗೈ.
ಇವರಿಬ್ಬರೊಂದಿಗೆ ಸ್ಪಿನ್ ಜೋಡಿ ಕುಲದೀಪ್ ಯಾದವ್ (24ಕ್ಕೆ2) ಮತ್ತು ರವೀಂದ್ರ ಜಡೇಜ (16ಕ್ಕೆ1) ಬ್ಯಾಟರ್‌ಗಳನ್ನು ಕಾಡಿದರು. ವಿಕೆಟ್ ಪಡೆಯದ ಮೊಹಮ್ಮದ್ ಸಿರಾಜ್ ಮೊದಲ ಸ್ಪೆಲ್‌ನಲ್ಲಿ ದುಬಾರಿಯೂ ಆದರು.
ಐದು ಸೋಲು
ಈ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವು ಆರು ಪಂದ್ಯಗಳಲ್ಲಿ ಆಡಿದ್ದು ಐದರಲ್ಲಿ ಸೋತಿದೆ. ಇದರೊಂದಿಗೆ ಹಾಲಿ ಚಾಂಪಿಯನ್ ತಂಡವೊಂದು ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ‘ದಾಖಲೆ‘ ಮಾಡಿತು.
1992ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ನಾಲ್ಕುಪಂದ್ಯಗಳಲ್ಲಿ ಸೋತಿತ್ತು. 1987ರಲ್ಲಿ ಆಸ್ಟ್ರೇಲಿಯಾ ಮತ್ತು 2019ರಲ್ಲಿ ಇಂಗ್ಲೆಂಡ್ ಪ್ರಶಸ್ತಿ ಜಯಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.