ADVERTISEMENT

ICC World Cup 2023: ಭಾರತದ ವಿಶ್ವಕಪ್‌ ವಿಜಯಕ್ಕೆ ಇನ್ನೊಂದೇ ಹೆಜ್ಜೆ ಬಾಕಿ!

ಫೈನಲ್‌ಗೆ ಲಗ್ಗೆಯಿಟ್ಟ ರೋಹಿತ್ ಪಡೆ; ವಿರಾಟ್, ಶ್ರೇಯಸ್ ಶತಕ, ಮೊಹಮ್ಮದ್ ಶಮಿ ಸಪ್ತ ವಿಕೆಟ್ ಸಾಧನೆ, ನ್ಯೂಜಿಲೆಂಡ್ ವಿರೋಚಿತ ಹೋರಾಟ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2023, 17:43 IST
Last Updated 15 ನವೆಂಬರ್ 2023, 17:43 IST
<div class="paragraphs"><p>ಭಾರತ ತಂಡದ ಆಟಗಾರರ ಸಂಭ್ರಮ</p></div>

ಭಾರತ ತಂಡದ ಆಟಗಾರರ ಸಂಭ್ರಮ

   

ಪಿಟಿಐ

ಮುಂಬೈ: ಭಾರತ ಕ್ರಿಕೆಟ್ ತಂಡವು 12 ವರ್ಷಗಳ ನಂತರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿತು.

ADVERTISEMENT

ರೋಹಿತ್ ಶರ್ಮಾ ನಾಯಕತ್ವದ ತಂಡವು ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸೆಮಿಫೈನಲ್‌ನಲ್ಲಿ  70 ರನ್‌ಗಳಿಂದ ವಿರೋಚಿತ ಹೋರಾಟ ಮಾಡಿದ  ‘ಹಾಲಿ ರನ್ನರ್ಸ್‌ ಅಪ್’ ನ್ಯೂಜಿಲೆಂಡ್ ವಿರುದ್ಧ ಜಯಭೇರಿ ಬಾರಿಸಿತು. ಇದರೊಂದಿಗೆ ಮೂರನೇ ಬಾರಿ (1983 ಹಾಗೂ 2011ರಲ್ಲಿ ಜಯಿಸಿತ್ತು) ವಿಶ್ವಕಪ್ ಗೆಲ್ಲುವ ಭಾರತದ ಕನಸು ನನಸಾಗಲು ಇನ್ನೊಂದು ಹೆಜ್ಜೆ ಬಾಕಿ ಇದೆ. ಕಳೆದ ಹತ್ತು ವರ್ಷಗಳಿಂದ ಎದುರಿಸುತ್ತಿರುವ ಐಸಿಸಿ ಪ್ರಶಸ್ತಿ ಬರವನ್ನು ನೀಗಿಸುವ ಅವಕಾಶವೂ ಈಗ ಕೂಡಿಬಂದಿದೆ.

ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ 50ನೇ ಶತಕ ಗಳಿಸಿದ ವಿರಾಟ್ ಕೊಹ್ಲಿ, ಈ ಟೂರ್ನಿಯಲ್ಲಿ ಸತತ ಎರಡನೇ ಶತಕ ಹೊಡೆದ ಶ್ರೇಯಸ್ ಅಯ್ಯರ್ ಮತ್ತು ತಮ್ಮ ಅಮೋಘ ಬೌಲಿಂಗ್‌ ಮಾಡಿದ ಮೊಹಮ್ಮದ್ ಶಮಿ (57ಕ್ಕೆ7) ಅವರ ಪ್ರಖರ ಆಟದ ಮುಂದೆ ಕಿವೀಸ್ ಬಳಗ ಸೋಲೊಪ್ಪಿಕೊಂಡಿತು. ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಕಿವೀಸ್ ಎದುರು ಸೋತಿದ್ದ ಭಾರತ ಇಲ್ಲಿ ಮುಯ್ಯಿ ತೀರಿಸಿಕೊಂಡಿತು. 

ಆತಿಥೇಯ ತಂಡವು ನೀಡಿದ್ದ 398 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಕಿವೀಸ್ ಬಳಗಕ್ಕೆ 48.5 ಓವರ್‌ಗಳಲ್ಲಿ 327 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಶತಕ ಗಳಿಸಿದ ಡೆರಿಲ್ ಮಿಚೆಲ್ ಮತ್ತು ನಾಯಕ ಕೇನ್ ವಿಲಿಯಮ್ಸನ್ (69; 73ಎ) ಮೂರನೇ ವಿಕೆಟ್ ಜೊತೆಯಾಟದಲ್ಲಿ 181 ರನ್‌ ಸೇರಿಸಿದರು. ಮಿಚೆಲ್ ಒಬ್ಬರೇ ತಂಡದ ಗೆಲುವಿಗಾಗಿ ಸ್ನಾಯುಸೆಳೆತದ ನೋವಿನಲ್ಲಿಯೂ ಹೋರಾಟ ಮಾಡಿದರು. ಆದರೆ ಫಲ ಸಿಗಲಿಲ್ಲ. 

ಇದೇ 19ರಂದು ಅಹಮದಾಬಾದಿನ ಮೊಟೇರಾದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಆಡಲಿದೆ. ಗುರುವಾರ ಕೋಲ್ಕತ್ತದಲ್ಲಿ ನಡೆಯುವ ಸೆಮಿಫೈನಲ್ ನಲ್ಲಿ ಜಯಿಸುವ ತಂಡವು ಭಾರತವನ್ನು ಎದುರಿಸಲಿದೆ. 

ರೋಹಿತ್–ಗಿಲ್ ಆರಂಭ

ಭಾರತ ತಂಡವು ಈ ಬಾರಿ ಲೀಗ್‌ ಹಂತದಲ್ಲಿ ಅಗ್ರಸ್ಥಾನ ಗಳಿಸಲು ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರು ನೀಡಿರುವ ಉತ್ತಮ ಆರಂಭವೂ ಕಾರಣವಾಗಿದೆ.

ಇಲ್ಲಿಯೂ ಟಾಸ್ ಗೆದ್ದ ರೋಹಿತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಲ್ಲದೇ ಗಿಲ್ ಜೊತೆಗೆ ಮೊದಲ ವಿಕೆಟ್‌ಗೆ 71 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಈ ಅಡಿಪಾಯದ ಮೇಲೆ ಕೊಹ್ಲಿ (117; 113ಎ) ಮತ್ತು ಶ್ರೇಯಸ್ ಅಯ್ಯರ್ (105; 70ಎ, 4X4, 6X8) ರನ್ ಸೌಧ ಕಟ್ಟಿದರು.

ನಾಲ್ಕು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಹೊಡೆದ ರೋಹಿತ್ ತಮ್ಮ ಅರ್ಧಶತಕಕ್ಕೆ ಮೂರು ರನ್‌ಗಳ ಅಗತ್ಯವಿದ್ದಾಗ ಔಟಾದರು. ಇನಿಂಗ್ಸ್‌ ಕಟ್ಟುವ ಹೊಣೆಯನ್ನು ಗಿಲ್ ತಮ್ಮ ಮೇಲೆಳೆದುಕೊಂಡರು. ಅವರಿಗೆ ವಿರಾಟ್ ಜೊತೆ ನೀಡಿದರು. ಆದರೆ, ಅವರಿಗೆ ಇಲ್ಲಿ ಶತಕ ಗಳಿಸುವ ಅದೃಷ್ಟ ಇರಲಿಲ್ಲ. 23ನೇ ಓವರ್‌ನಲ್ಲಿ ಸ್ನಾಯುಸೆಳೆತ ಅನುಭವಿಸಿದ ಗಿಲ್ ವಿಶ್ರಾಂತಿಗೆ ತೆರಳಿದರು. ಆಗ ಅವರು 79 ರನ್ ಗಳಿಸಿದ್ದರು. ತಂಡದ ಮೊತ್ತವು 1 ವಿಕೆಟ್‌ಗೆ 164 ರನ್‌ಗಳಾಗಿತ್ತು.

ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ನಾಲ್ಕು ಎಸೆತಗಳು ಬಾಕಯಿದ್ದಾಗ ಕ್ರೀಸ್‌ಗೆ ಮರಳಿ ಒಂದು ರನ್ ಗಳಿಸಿದರು.  ಅದಕ್ಕೂ ಮುನ್ನ ಕ್ರೀಸ್‌ನಲ್ಲಿ ಮುಂಬೈಕರ್ ಶ್ರೇಯಸ್ ಅಯ್ಯರ್ ಮತ್ತು ಕೊಹ್ಲಿ ವಿಜೃಂಭಿಸಿದ್ದರು. ಆಗ ತಂಡವು 4 ಕ್ಕೆ 382 ರನ್‌ ಗಳಿಸಿತ್ತು!

ಕೊಹ್ಲಿ–ಶ್ರೇಯಸ್ ಅಬ್ಬರ

ಎರಡನೇ ವಿಕೆಟ್ ಜೊತೆಯಾಟದಲ್ಲಿ ವಿರಾಟ್ ಮತ್ತು ಶ್ರೇಯಸ್ 163 ರನ್ ಸೇರಿಸಿದರು. ಇದರಿಂದಾಗಿ ತಂಡದ ಮೊತ್ತವು 300ರ ಗಡಿ ದಾಟಿತು.ಇದರಲ್ಲಿ ಶ್ರೇಯಸ್ ಸಿಕ್ಸರ್‌, ಬೌಂಡರಿ ಗಳಿಕೆಗೆ ಹೆಚ್ಚು  ಒತ್ತು ಕೊಟ್ಟರು.

ಇನ್ನೊಂದೆಡೆ ಕೊಹ್ಲಿ 106 ಎಸೆತಗಳಲ್ಲಿ ಶತಕ ಸಂಭ್ರಮ ಆಚರಿಸಿದರು. ಗಣ್ಯರ ಗ್ಯಾಲರಿಯಲ್ಲಿದ್ದ  ಪತ್ನಿ, ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಅವರು ’ಫ್ಲೈಯಿಂಗ್ ಕಿಸ್‌’ ತೇಲಿಬಿಟ್ಟರು. ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು  ಹಿರಿಯ ಆಟಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಇದರ ನಂತರ ಅವರು ತಮ್ಮ ಆಟಕ್ಕೆ ವೇಗ ನೀಡಿದರು. ಶ್ರೇಯಸ್ ತಮ್ಮ ತವರಿನ ಅಂಗಳದಲ್ಲಿ ಶತಕ ಪೂರೈಸಲು 67 ಎಸೆತ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.